February 22, 2026

ದಕ್ಷಿಣ ಭಾರತ ಕುಂಭಮೇಳ ಎಂದೆ ಹೆಸರುವಾಸಿಯಾಗಿರುವ ಕೊಪ್ಪಳದ ಶ್ರೀಗವಿಸಿದ್ಧೇಶ್ವರರ ಜಾತ್ರೆ ಮಹೋತ್ಸವ

ಉತ್ತರ ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲಿ ಒಂದಾದ, ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ದಿ ಪಡೆದಿರುವ ಶ್ರೀಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಜನೇವರಿ 5 ರಿಂದ ಆರಂಭಗೊಳ್ಳಲಿರುವ ಜಾತ್ರಾ ಮಹೋತ್ಸವವು ಭಕ್ತರ ಶ್ರದ್ದೆ, ಸಡಗರ, ಸಂಭ್ರಮದಿಂದ ನಡೆಯಲಿದೆ. ಮುಂಬರುವ ಅಮಾವಾಸ್ಯೆ ವರೆಗೂ ದಾಸೋಹ ಕಾರ್ಯ ನಡೆಯಲಿದೆ.

ಜಾತ್ರೆಗೆ ಆಗಮಿಸುವ ಭಕ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಶ್ರೀಗವಿಮಠದ ಶಾಲಾ ಕಾಲೇಜು ಹಾಗೂ ನಾನಾ ಶಾಲಾ ಕಾಲೇಜು, ಸಂಘ ಸಂಸ್ಥೆಗಳು, ಕಲ್ಯಾಣ ಮಂಟಪ, ಸಭಾಭವನಗಳಲ್ಲಿ ಸುಮಾರು 10 ಸಾವಿರಕ್ಕಿಂತ ಹೆಚ್ಚು ಭಕ್ತರಿಗೆ ವಸತಿ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ವಸತಿ ಕೇಂದ್ರಗಳಲ್ಲಿ ಸ್ನಾನ. ಶೌಚಾಲಯ ವ್ಯವಸ್ಥೆ ಜತೆಗೆ ಸೊಳ್ಳೆಬತ್ತಿ, ಮೇಣದ ಬತ್ತಿ, ಜಮಖಾನ, ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ವಸತಿ ನೀಡುವ ಪ್ರತಿಯೊಂದು ಸ್ಥಳ ಮತ್ತು ಕೊಠಡಿಗಳಲ್ಲಿ ಸಮರ್ಪಕ ವಿದ್ಯುತ್, ಸುರಕ್ಷತೆ ಮತ್ತು ವಾಹನ ನಿಲ್ಲಿಸುವ ವ್ಯವಸ್ಥೆ ಮಾಡಲಾಗಿದೆ.

ಸ್ತ್ರೀಯರು ಮತ್ತು ಪುರುಷರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಇದೆ. ವಸತಿ ನೀಡುವ ಪ್ರತಿಯೊಂದು ಸ್ಥಳಗಳಲ್ಲಿ ವೈದ್ಯಕೀಯ ಸಿಬ್ಬಂದಿ, ಎಲೆಕ್ನಿಷಿಯನ್, ಪ್ಲಂಬರ್, ಸೆಕ್ಯುರಿಟಿ ಗಾರ್ಡ್ ನಿಯೋಜನೆ ಮಾಡಲಾಗಿದೆ. ಭಕ್ತರಿಗೆ ಪ್ರತಿ ದಿನ ಬೆಳಗ್ಗೆ ದಿನ ಪತ್ರಿಕೆ ಕೊಡಲಾಗುತ್ತದೆ. ದಿನದ 24 ಗಂಟೆಯು ಕರ್ತವ್ಯ ನಿರ್ವಹಿಸಲು ಸಿಬ್ಬಂದಿ ವ್ಯವಸ್ಥೆ ಮಾಡಲಾಗಿದೆ. ಶ್ರೀ ಮಠದ ಆವರಣದಲ್ಲಿ ವಸತಿ ನೋಂದಣಿ ಕೇಂದ್ರ ಆರಂಭಿಸಲಾಗಿದ್ದು, ಭಕ್ತರು ವಸತಿ ನೋಂದಣಿ ಸ್ಥಳದಲ್ಲಿ ಹೆಸರು ನೋಂದಾಯಿಸಬಹುದು.

ಕಳೆದ ವರ್ಷ ಸುಮಾರು 4 ಎಕರೆ ವಿಸ್ತಾರ ಹೊಂದಿದ್ದ ಜಾತ್ರಾ ವೇದಿಕೆ ಈ ವರ್ಷ 6 ಎಕರೆಗೆ ವಿಸ್ತರಿಸಲಾಗಿದೆ. ಸುಮಾರು 5 ರಿಂದ 6 ಸಾವಿರ ಭಕ್ತಾದಿಗಳು ಏಕಕಾಲ ದಲ್ಲಿ ಪ್ರಸಾದ ಸೇವಿಸಲು ಸಜ್ಜಾಗಿದೆ. ಜನದಟ್ಟಣೆಯಿಂದಾಗಿ ಆಗುವ ಗದ್ದಲ ಬಗೆಹರಿಸಲು ಪ್ರತ್ಯೇಕ ಮಹಾದ್ವಾರ, ಬೃಹದಾಕಾರದ ದಾರಿ ವ್ಯವಸ್ಥೆ ಮಾಡಲಾಗಿದೆ 

• ದಾಸೋಹದ ವಿಶೇಷತೆ.

ಶ್ರೀ ಗವಿಮಠದ ಜಾತ್ರಾ ಮಹೋತ್ಸವದ ಮಹಾದಾಸೋಹದಲ್ಲಿ ಶ್ರೀಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದ ಹರ್ಬಲ್ ಗಾರ್ಡನ್‌ನಲ್ಲಿರುವ ಸುಮಾರು ಆರು ಎಕರೆಯಷ್ಟು ವಿಶಾಲವಾದ ಆವರಣ ದಲ್ಲಿ ಸುಸಜ್ಜಿತ ಅಡುಗೆಮನೆ, ಆಹಾರ ಸಂಗ್ರಹಣೆ ಕೊಠಡಿ, ತರಕಾರಿ ಸಂಗ್ರಹಣೆ ಕೊಠಡಿ, ತರಕಾರಿ ಹೆಚ್ಚುವ ಸ್ಥಳ ಹಾಗೂ ಪ್ರಸಾದ ಸ್ವೀಕರಿಸಲು ಈ ಬಾರಿ ಇನ್ನೂ ಹೆಚ್ಚು ವಿಶಾಲವಾದ ಸ್ಥಳಾವಕಾಶ ಕಲ್ಪಿಸಿದೆ. ಭಕ್ತರು ಪ್ರಸಾದ ಸೇವನೆಗೆ ಸಾಲಾಗಿ ಬರಲು ಅಚ್ಚುಕಟ್ಟಾದ ಸಾಲುಗಳನ್ನು ನಿರ್ಮಿಸಲಾಗಿದೆ.

ಈ ವರ್ಷ ಸುಮಾರು  76 ಕೌಂಟರ್ ಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ 40 ಕೌಂಟರ್‌ಗಳು ಅನ್ನಸಾರು, 36 ಕೌಂಟರ್‌ಗಳು ಸಿಹಿ ಪದಾರ್ಥ ವಿತರಣೆಗೆ ನಿರ್ಮಿಸಲಾಗಿದೆ. ಅಜ್ಜನ ಜಾತ್ರೆ ರೊಟ್ಟಿ ಜಾತ್ರೆಯೆಂದೇ ಪ್ರಸಿದ್ದ. ಬೃಹಾದಾಕಾರದ 45:50 ವಿಸ್ತೀರ್ಣದ ಎರಡು ಕೋಣೆಗಳು ನಿರ್ಮಾಣಗೊಂಡಿವೆ. ಈಗಾಗಲೇ ಮಹಾದಾಸೋಹದಲ್ಲಿ ರೊಟ್ಟಿ ಸಂಗ್ರಹಣಾ ಕಾರ್ಯ ಅಬ್ಬರದಿಂದ  ಸಾಗಿದೆ.

• ಆಗಮಿಸಿದ ಭಕ್ತರಿಗೆ ಕುಡಿಯುವ
ನೀರಿಗಾಗಿ ನೀರಿನ ಕಟ್ಟೆಗಳನ್ನು 4 . 250-300 ಭಕ್ತರು ಏಕಕಾಲಕ್ಕೆ ನೀರನ್ನು ಸೇವಿಸುವ ಬೃಹತ್ ವ್ಯವಸ್ಥೆ ಕಲ್ಪಿಸಲಾಗಿದೆ. ಸಿಹಿ ಪದಾರ್ಥವಾದ ಮಾದಲಿ ಈ ನಾಡಿನ ವಿಶೇಷ ತಿನಿಸಾಗಿದೆ. ಜಾತ್ರೆಯ ವಿಶೇಷವೂ ಹೌದು. ಅದಕ್ಕೆಂದೆ 16×6 ಹಡಿ ವಿಸ್ತೀರ್ಣದ 3, 20×6 ವಿಸ್ತೀರ್ಣದ 3 ಕಟ್ಟೆಗಳು ಒಟ್ಟು 6 ಮಾದಲಿ ಕಟ್ಟೆಗಳು ನಿರ್ಮಾಣ ಗೊಂಡಿವೆ. ಮಹಿಳೆಯರು ಹಾಗೂ ಪುರುಷ ರಿಗೆ ಪ್ರತ್ಯೇಕವಾಗಿ ಕೌಂಟ‌ರ್ಗಳನ್ನು ಪ್ರಸಾದ ನೀಡಿಸಿಕೊಳ್ಳಲಿಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ 4 ಪ್ರವೇಶ ದ್ವಾರಗಳು, 65 ಆಡಿಯ ಅನ್ನ ಸಂಗ್ರಹಣಾ ಕಟ್ಟೆ ನಿರಿಸಲಾಗಿದೆ.

ಪ್ರತಿದಿನ ಪ್ರಸಾದದ ಉಸ್ತುವಾರಿ ಹಾಗೂ ಪರಿಶೀಲನೆಗಾಗಿ ಆಹಾರ ಇಲಾಖಾ ಅಧಿಕಾರಿಗಳು, ಪೊಲೀಸರು ಇರುತ್ತಾರೆ. ಪ್ರಸಾದ ನಿಲಯದ ಸುತ್ತಲೂ ಪೊಲೀಸ್ ಕಣ್ಣಾವಲು ಇದ್ದು, ತಂತಿ ಬೇಲಿ ಅಳವಡಿಸಲಾಗಿದೆ. ಮಹಾದಾಸೋಹದಲ್ಲಿ ಭಕ್ತರ ಸುರಕ್ಷತೆಗಾಗಿ ಹೊರ, ಒಳಾಂಗಣ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಲಾಗಿದೆ. ಜಾತ್ರಾ ಮಹೋತ್ಸವ ಮಹಾದಾಸೋಹದಲ್ಲಿ ಒಂದು ದಿನಕ್ಕೆ ಸುಮಾರು 300 ರಿಂದ 400ರ ವರೆಗೆ ಭಕ್ತರು ಪ್ರಸಾದ ತಯಾರಿಸಲಿದ್ದಾರೆ. ಪ್ರಸಾದ ವಿತರಣೆಯಲ್ಲಿ ಸುಮಾರು 500 ರಿಂದ 600 ಭಕ್ತರು ಪಾಲ್ಗೊಳ್ಳುವರು. ಜಾತ್ರಾ  ಮಹೋತ್ಸವ ಪ್ರಾರಂಭದಿಂದ ಮುಕ್ತಾಯದ ವರೆಗೆ ಪ್ರಸಾದ ನಿಲಯದಲ್ಲಿ ಸುಮಾರು 25 ಸಾವಿರ ಭಕ್ತರು ಸೇವೆಯಲ್ಲಿ ಪಾಲ್ಗೊಳ್ಳುವರು. ಜಾತ್ರೆಯ ಪ್ರಾರಂಭದಿಂದ ಮುಕ್ತಾಯದವರೆಗೆ ಸುಮಾರು 15 ರಿಂದ 18 ಲಕ್ಷ ಭಕ್ತರು ಪ್ರಸಾದ ಸ್ವೀಕರಿಸುರೆಂದು ನಿರೀಕ್ಷಿಸಲಾಗಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಸಹ 210 ನೇ ವರ್ಷದ ಶ್ರೀ ಗವಿಸಿದ್ಧೇಶ್ವರ ಮಹಾ ರಥೋತ್ಸವಪೂ ಲಕ್ಷ- ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸೋಮವಾರ ಅದ್ದೂರಿಯಾಗಿ ಜರುಗಿತು.

ರಥೋತ್ಸವ  ಸಾಂಗವಾಗಿ ಪಾದಗಟ್ಟಿಯವರೆಗೆ ಮುಟ್ಟಿ ಬಳಿಕ ಮೂಲ ಸ್ಥಾನ ತಲುಪಿತು.ಪ್ರತಿ ವರ್ಷದಂತೆ ಈ ವರ್ಷದ ಜಾತ್ರೆಯಲ್ಲಿ ಗವಿಗಳು ಬಾಳೆ ಹಣ್ಣು ಎಸೆಯದಂತೆ ಭಕ್ತಾಧಿಗಳಲ್ಲಿ ಮನವಿ ಮಾಡಿದ್ದರಿಂದ ಜಿಲ್ಲೆಯಲ್ಲದೇ ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿದ್ದ ಭಕ್ತಾಧಿಗಳು ಉತ್ತತ್ತಿ ಎಸೆದು ಪುನೀತರಾದರು.

ಜಾತ್ರೆ ಮಹೋತ್ಸವದಲ್ಲಿ ನಾನಾ ಭಾಗದ ಭಕ್ತರು ಗಣ್ಯ ವ್ಯಕ್ತಿಗಳು ಹಾಗೂ   ರಾಜಕೀಯ ಮುಖಂಡರು ಭಾಗಿಯಾಗಿದ್ದರು 

ಸಂಪಾದಕೀಯ  = ಮಹೇಶ ಟಿ ನಾಯಕ

About The Author