ಬೆಂಕಿಯ ಒಡಲಲ್ಲಿ ಬೆಂದ ಬದುಕು ಅದು. ನಡು ರಾತ್ರಿಯೋ ಅಥವಾ ಬೆಳಗಿನ ಜಾವದ ಮೊದಲ ಹೊಳಪೋ ಗೊತ್ತಿಲ್ಲ. ಆದರೆ ಅಲ್ಲೊಂದು ಕೆಂಡದಂತಹ ಮೌನವಿದೆ. ಆ ಮೌನಕ್ಕೆ ಬೆಂಕಿಯ ಕೆನ್ನಾಲಗೆಯೇ ಸಾಕ್ಷಿ. ಬದುಕು ಕೂಡ ಹೀಗೆಯೇ ಅಲ್ಲವೇ..?.
ಒಳಗೊಂದು ತೀವ್ರವಾದ ಉರಿ ಇರಬೇಕು. ಆದರೆ ಹೊರಗಡೆ ಕಲ್ಲಿನಂತಹ ನಿಶ್ಚಲತೆ ಇರಬೇಕು. ನನ್ನಲ್ಲಿ ಸಾವಿರ ಕಥೆಗಳಿವೆ. ಕಣ್ಣು ಮುಚ್ಚಿದರೂ ಕಾಣುವ ಕಥೆ ಯಾವುದೋ ಹಳೇ ನೆನಪುಗಳಿರಬಹುದು ಅಥವಾ ನಾಳಿನ ಹೋರಾಟಕ್ಕೆ ಬೇಕಾದ ಸಿದ್ಧತೆ ಇರಬಹುದು
ನರೆಯಾದ ಗಡ್ಡದ ಪ್ರತಿಯೊಂದು ಎಳೆಯಲ್ಲೂ ಒಂದು ಅನುಭವದ ಹದವಿದೆ. ಮನುಷ್ಯ ಬದುಕನ್ನು ಎದುರಿಸುವುದು ಹೇಗೆ…..?
ಸೋಲನ್ನೋ, ಗೆಲುವನ್ನೋ ಅಥವಾ ಈ ಪ್ರಕೃತಿಯ ಅನಿವಾರ್ಯತೆಯನ್ನೋ ನಾನು ಹುಡುಕುತ್ತಿದ್ದೇನೆ. ಬೆಂಕಿ ಉರಿಯುತ್ತಿದೆ. ಅದು ಸುಡಲಿಕ್ಕಲ್ಲ, ಬದಲಿಗೆ ತನ್ನೊಳಗೆ ಅಡಗಿರುವ ನೋವುಗಳನ್ನೋ ಅಥವಾ ಹಳೆಯ ಕಹಿ ಘಟನೆಗಳನ್ನೋ ಸುಟ್ಟು ಹಾಕಲು ಕುಳಿತಿರುವ ಧ್ಯಾನದಂತೆ ಕಾಣುತ್ತಿದೆ
ಜೀವನ ಅಂದ್ರೆ ಬರೀ ಉಸಿರಾಡೋದಲ್ಲ ಕಣ್ರೀ, ಸಾಯೋವರೆಗೂ ಈ ಉರಿಯುವ ಬೆಂಕಿಯಂತೆ ಚೈತನ್ಯ ಕಾಪಾಡಿಕೊಳ್ಳೋದು. ಸುತ್ತಲೂ ಅಂಧಕಾರವಿದ್ದರೇನಂತೆ…..?
ನಮ್ಮೆದುರು ಒಂದು ಪುಟ್ಟ ದೀಪವೋ ಅಥವಾ ದೊಡ್ಡ ಕೆಂಡವೋ ಇದ್ದರೆ ದಾರಿ ತನ್ನಷ್ಟಕ್ಕೆ ತಾನೇ ಕಾಣುತ್ತೆ. ಆದ್ರೆ ಆ ದಾರಿಯಲ್ಲಿ ನಡೆಯೋ ಧೈರ್ಯ ಬೇಕಲ್ಲ..!?. ಆ ಧೈರ್ಯಕ್ಕಾಗಿ ನನ್ನ ಸಿದ್ದತೆ. ಬೆಂಕಿ ಆರಬಹುದು, ಆದರೆ ಆ ಕೆಂಡದ ಶಾಖ ದೀರ್ಘಕಾಲ ಇರುತ್ತದೆ
ಹಾಗೆಯೇ, ವ್ಯಕ್ತಿತ್ವಗಳು ಕೂಡ. ಕೆಲವೊಮ್ಮೆ ಸದ್ದು ಮಾಡದೆ ಉರಿಯುತ್ತಲೇ ಇರಬೇಕು
ಬದುಕು ಅನ್ನೋದು ಒಂದು ಮಹಾಯುದ್ಧ. ಇಲ್ಲಿ ಗೆಲ್ಲೋದು ಮುಖ್ಯವಲ್ಲ, ಆ ಯುದ್ಧದಲ್ಲಿ ನಾವು ಹೇಗೆ ಹೋರಾಡಿದ್ವಿ ಅನ್ನೋದೇ ಅಂತಿಮ ಸತ್ಯ.
* ಹಿರಿಯ ಪತ್ರಕರ್ತರು [ ಶ್ರೀನಿವಾಸ ದೇವಿಕೇರಿ ] *
More Stories