August 21, 2026

ದಲಿತ ವಿದ್ಯಾರ್ಥಿಗಳ ಅನುದಾನ ಪ್ರಶ್ನೆಗೆ ದರ್ಪದ ಉತ್ತರ: ಪಿಡಿಒ ಶಿವರಾಜ್ ಅಮಾನತು – ಸಿಇಒ ವರ್ಣೀತ್ ನೇಗಿ ಖಡಕ್ ಕ್ರಮ

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ 
ದಿನಾಂಕ: 18/06/2026

ಗಂಗಾವತಿ: ಸರ್ಕಾರಿ ಹುದ್ದೆಯಲ್ಲಿದ್ದು ಜನಸೇವೆಯ ಜವಾಬ್ದಾರಿ ಮರೆತು ಅಹಂಕಾರದ ಮದದಲ್ಲಿ ತೇಲುತ್ತಿದ್ದ ಅಧಿಕಾರಿಗೆ ಕೊಪ್ಪಳ ಜಿಲ್ಲಾ ಪಂಚಾಯತ್ ಆಡಳಿತ ತಕ್ಕ ಪಾಠ ಕಲಿಸಿದೆ. ದಲಿತ ವಿದ್ಯಾರ್ಥಿಗಳ ಪುಸ್ತಕ ಖರೀದಿ ಅನುದಾನದ ಕುರಿತು ಮಾಹಿತಿ ಕೇಳಿದ ವಕೀಲರೊಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದರ್ಪ ಮೆರೆದ ಕಾರಟಗಿ ತಾಲೂಕಿನ ಯರಡೋಣಾ ಗ್ರಾಮ ಪಂಚಾಯತ್ ಪಿಡಿಒ ಎನ್. ಶಿವರಾಜ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.

ಜೂನ್ 12ರಂದು ಗಂಗಾವತಿಯ ವಕೀಲ ಮಲ್ಲೇಶಪ್ಪ ಅವರು ಎಸ್‌ಸಿ/ಎಸ್‌ಟಿ ಸಮುದಾಯದ ಕಾನೂನು ವಿದ್ಯಾರ್ಥಿಗಳಿಗೆ ನೀಡಬೇಕಿದ್ದ ಪುಸ್ತಕ ಖರೀದಿ ಅನುದಾನ ವಿಳಂಬವಾಗಿರುವ ಬಗ್ಗೆ ದೂರವಾಣಿ ಮೂಲಕ ಪ್ರಶ್ನಿಸಿದ್ದರು. ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸುವ ಬದಲು ಪಿಡಿಒ ಶಿವರಾಜ್ ಅಧಿಕಾರದ ಅಹಂಕಾರ ಪ್ರದರ್ಶಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿದ್ದಲ್ಲದೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿತ್ತು.

ಈ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಕರಣದ ಗಂಭೀರತೆಯನ್ನು ಅರಿತ ಜಿಲ್ಲಾ ಪಂಚಾಯತ್ ಸಿಇಒ ವರ್ಣೀತ್ ನೇಗಿ ಅವರು ತಕ್ಷಣ ತನಿಖೆಗೆ ಆದೇಶಿಸಿದ್ದರು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಿಂದ ನಡೆದ ತನಿಖೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿವರಾಜ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಅಮಾನತು ಅವಧಿಯಲ್ಲಿ ಪಿಡಿಒ ಶಿವರಾಜ್ ಅವರು ಇಲಾಖೆಯ ಅನುಮತಿ ಇಲ್ಲದೆ ಮುಖ್ಯ ಕಚೇರಿ ವ್ಯಾಪ್ತಿಯನ್ನು ತೊರೆಯದಂತೆ ಸೂಚಿಸಲಾಗಿದ್ದು, ಅವರ ವಿರುದ್ಧ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ಅಡಿಯಲ್ಲಿ ಶಿಸ್ತು ಕ್ರಮದ ವಿಚಾರಣೆಯನ್ನೂ ಮುಂದುವರಿಸಲಾಗಿದೆ.

ಬಡ ಮತ್ತು ಹಿಂದುಳಿದ ವಿದ್ಯಾರ್ಥಿಗಳ ಹಕ್ಕಿನ ಬಗ್ಗೆ ಕೇಳಿದ ಪ್ರಶ್ನೆಗೆ ಅಧಿಕಾರದ ದರ್ಪದಿಂದ ಪ್ರತಿಕ್ರಿಯಿಸಿದ ಪಿಡಿಒಗೆ ಇದೀಗ ಇಲಾಖೆಯೇ ಶಿಸ್ತಿನ ಪಾಠ ಕಲಿಸಿದೆ. ಸಾರ್ವಜನಿಕ ಸೇವೆಗಾಗಿ ನೀಡಲಾದ ಅಧಿಕಾರವನ್ನು ದುರುಪಯೋಗಪಡಿಸಿಕೊಂಡರೆ ಅದರ ಪರಿಣಾಮ ಹೇಗಿರುತ್ತದೆ ಎಂಬುದಕ್ಕೆ ಈ ಅಮಾನತು ಕ್ರಮ ಸ್ಪಷ್ಟ ಸಂದೇಶ ನೀಡಿದೆ.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News