October 16, 2026

ಗಂಗಾವತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ತಾ.ಪಂ. ಸಹಾಯವಾಣಿ ಆರಂಭ

ಟಿ ಪಬ್ಲಿಕ್ ನ್ಯೂಸ್

ಗಂಗಾವತಿ : ಬೇಸಿಗೆ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವ ಉದ್ದೇಶದಿಂದ ಗಂಗಾವತಿ ತಾಲೂಕು ಪಂಚಾಯತಿ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ ಪಾಟೀಲ್ ತಿಳಿಸಿದ್ದಾರೆ.

ಬೇಸಿಗೆ ಕಾಲದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಅಭಾವ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಸಹಾಯವಾಣಿ ಮೂಲಕ ಜನರು ತಮ್ಮ ಗ್ರಾಮಗಳಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ದೂರುಗಳನ್ನು ದಾಖಲಿಸಬಹುದಾಗಿದೆ. ದಾಖಲಾಗುವ ದೂರುಗಳನ್ನು ತಕ್ಷಣ ಸ್ಪಂದಿಸಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕರು ಬೆಳಿಗ್ಗೆ 9:00ರಿಂದ ಮಧ್ಯಾಹ್ನ 1:30ರವರೆಗೆ ಎಸ್‌ಡಿಎ ಎಂ. ಸಂತೋಷ (ದೂರವಾಣಿ: 6361940327) ಹಾಗೂ ಮಧ್ಯಾಹ್ನ 2:00ರಿಂದ ಸಂಜೆ 7:30ರವರೆಗೆ ಮಾರುತಿ (ಕೈಪಂಪ್ ಆಪರೇಟರ್) (ದೂರವಾಣಿ: 9036892963) ಅವರನ್ನು ಸಂಪರ್ಕಿಸಿ ತಮ್ಮ ಸಮಸ್ಯೆಗಳನ್ನು ತಿಳಿಸಬಹುದಾಗಿದೆ.

ಈ ವ್ಯವಸ್ಥೆಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಂಡು ತಮ್ಮ ಪ್ರದೇಶದ ಕುಡಿಯುವ ನೀರಿನ ಸಮಸ್ಯೆಯನ್ನು ಬೇಗ ಪರಿಹರಿಸಿಕೊಳ್ಳುವಂತೆ ತಾ.ಪಂ. ಇಓ ರಾಮರೆಡ್ಡಿ ಪಾಟೀಲ್ ಮನವಿ ಮಾಡಿದ್ದಾರೆ.

ನೈಜ ಸುದ್ದಿಗಾಗಿ ಟಿ ಪಬ್ಲಿಕ್ ನ್ಯೂಸ್

error: Content is protected !!