April 15, 2026

ಕಪ್ಪು ಮಣ್ಣು ಕಳ್ಳ ಸಾಗಾಣಿಕೆಗೆ  ಅಧಿಕಾರಿಗಳ ಸಾಥ್? – ಭೀಮ ಘರ್ಜನೆ ಗಂಭೀರ ಆರೋಪ

ಟಿ ಪಬ್ಲಿಕ್ ನ್ಯೂಸ್

ಗಂಗಾವತಿ: ನಗರದಲ್ಲಿ ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ ವತಿಯಿಂದ ಗ್ರಾಮೀಣ ಭಾಗದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಪ್ಪು ಮಣ್ಣು ಕಳ್ಳ ಸಾಗಾಣಿಕೆಯಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಗಂಭೀರ ಆರೋಪದೊಂದಿಗೆ ಪತ್ರಿಕಾ ಭವನದಲ್ಲಿ ಕಿಡಿಕಾರುವ ಪತ್ರಿಕಾ ಗೋಷ್ಟಿ ನಡೆಸಲಾಯಿತು.

ಈ ವೇಳೆ ಮಾತನಾಡಿದ ಸಂಘಟನೆಯ ಕೊಪ್ಪಳ ಜಿಲ್ಲಾ ಅಧ್ಯಕ್ಷ ಅಜಯ್ ಕುಮಾರ್ ಚಲವಾದಿ, ಅಧಿಕಾರಿಗಳ ನೇರ ಬೆಂಬಲವೇ ಅಕ್ರಮ ದಂಧೆಗಾರರಿಗೆ ಧೈರ್ಯ ನೀಡುತ್ತಿದೆ. ಇದರ ಪರಿಣಾಮವಾಗಿ ರೈತರ ಫಲವತ್ತಾದ ಕೆರೆಯ ಮಣ್ಣನ್ನು ಲಾರಿಗಳ ಮೂಲಕ ಅಕ್ರಮವಾಗಿ ಸಾಗಿಸುವ ದಂಧೆ ಮುಕ್ತವಾಗಿ ನಡೆಯುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ದಿನಾಂಕ 04-04-2026 ರಂದು ರಾತ್ರಿ ವೇಳೆ ಸಂಘಟನೆಯ ಸದಸ್ಯರು ಹೇಮಗುಡ್ಡ ಟೋಲ್ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಲಾರಿಗಳಲ್ಲಿ ಮಣ್ಣು ಸಾಗಿಸುತ್ತಿರುವುದನ್ನು ಗಮನಿಸಿ ತಕ್ಷಣ ವಾಹನವನ್ನು ನಿಲ್ಲಿಸಿ ವಿಚಾರಣೆ ನಡೆಸಿದರು. ಈ ವೇಳೆ ಅಕ್ರಮ ಸಾಗಾಣಿಕೆ ಸ್ಪಷ್ಟವಾಗುತ್ತಿದ್ದಂತೆ ‘112’ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರು.

ಆದರೆ, ಪ್ರಕರಣವನ್ನು ಮುಚ್ಚಿಹಾಕಲು ಲಾರಿ ಮಾಲೀಕರು ಸಂಘಟನೆಯ ಕಾರ್ಯಕರ್ತರಿಗೆ ಹಣದ ಆಮಿಷ ಒಡ್ಡಿದ ಘಟನೆ ಬೆಳಕಿಗೆ ಬಂದಿದೆ. ಹೋರಾಟಗಾರರು ಯಾವುದೇ ರೀತಿಯ ಒತ್ತಡಕ್ಕೆ ಮಣಿಯದೆ ಅಕ್ರಮವನ್ನು ಬಹಿರಂಗಪಡಿಸಲು ಮುಂದಾದಾಗ, ಟಿಪ್ಪರ್ ಮಾಲೀಕರು, ಚಾಲಕರು ಹಾಗೂ ಅವರ ಸಹಚರರು ದೌರ್ಜನ್ಯಕ್ಕೆ ಯತ್ನಿಸಿದ್ದು, ಕೆಲ ಪೊಲೀಸ್ ಸಿಬ್ಬಂದಿಯೂ ದಂಧೆಗಾರರ ಪರ ನಿಂತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಇನ್ನಷ್ಟು ಶಾಕ್ ನೀಡಿದ ವಿಷಯವೆಂದರೆ, ನಗರದ ಡಿವೈಎಸ್ಪಿ ಜೆ.ಎಸ್.‌ ನ್ಯಾಮಗೌ‌ಡರ್ ಅವರು ಸಂಘಟನೆಯ ಸದಸ್ಯರಿಗೆ ಅಕ್ರಮ ಸಾಗಾಣಿಕೆಯನ್ನು ಪ್ರಶ್ನಿಸುವ ಅಧಿಕಾರ ಇಲ್ಲ ಎಂದು ಹೇಳಿ, ಪ್ರಶ್ನಿಸಿದರೆ ರಾಬರಿ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಡಿವೈಎಸ್ಪಿ ಜೆ.ಎಸ್.‌ ನ್ಯಾಮಗೌ‌ಡರ್ ತಮ್ಮ ವಿರುದ್ಧ ಮಾಡಿರುವ ಆರೋಪಗಳಲ್ಲಿ ಒಂದಾದರೂ ಸಾಬೀತು ಮಾಡಿದರೆ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಈ ಘಟನೆ ಕಪ್ಪು ಮಣ್ಣು ಕಳ್ಳ ಸಾಗಾಣಿಕೆ ಹಿನ್ನಲೆಯಲ್ಲಿ ಅಧಿಕಾರಿಗಳ ಪಾತ್ರದ ಮೇಲೆ ದೊಡ್ಡ ಪ್ರಶ್ನಾರ್ಥಕ ಗುರುತು ಮೂಡಿಸಿದ್ದು, ಸಂಘಟನಾ ಸದಸ್ಯರ  ಆಕ್ರೋಶಕ್ಕೆ ಕಾರಣವಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಅಜಯ್ ಕುಮಾರ್ ಚಲವಾದಿ, ಪಂಪಾಪತಿ ಸಿದ್ದಾಪುರ, ನಬಿ ರಸೂಲ್, ಯಮನೂರು, ಉಮೇಶ್ ನಾಯಕ್, ಆರಿಫ್, ಕಾಜ ನಬಿ, ಅಬ್ಬಾಸ್, ಎಂಡಿ ಅಜಯ್ ಕುಮಾರ್, ಫಯಾಜ್, ವೆಂಕಟೇಶ್, ರಾಜಶೇಖರ, ಶಿವು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನೈಜ ಸುದ್ದಿಗಾಗಿ ಟಿ ಪಬ್ಲಿಕ್ ನ್ಯೂಸ್

About The Author

error: Content is protected !!