July 15, 2026

ಶಾಲೆಯಲ್ಲೇ ಮುಖ್ಯೋಪಾಧ್ಯಾಯರ ಕಿತ್ತಾಟ! ಸಿಸಿಟಿವಿ ಪರಿಶೀಲಿಸಿ ತಪ್ಪಿತಸ್ಥರನ್ನು ಅಮಾನತು ಮಾಡಿ ಕಠಿಣ ಕಾನೂನು ಕ್ರಮ ಜರುಗಿಸಿ: ಮಹಾನಾಯಕ ಜನಜಾಗೃತಿ ವೇದಿಕೆ ಆಗ್ರಹ

🟥 ಟಿ ಪಬ್ಲಿಕ್ ನ್ಯೂಸ್ | ಕನಕಗಿರಿ
ದಿನಾಂಕ: 15/07/2026

ಕನಕಗಿರಿ: ಕನಕಗಿರಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಾಲಾ ಸಮಯದಲ್ಲೇ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಜಗದೀಶ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ತುಳಜಾ ನಾಯ್ಕ ಅವರ ನಡುವೆ ವಾಗ್ವಾದ ಮತ್ತು ಜಗಳ ನಡೆದಿರುವುದಾಗಿ ಆರೋಪ ಕೇಳಿಬಂದಿದ್ದು, ಈ ಘಟನೆ ಶಿಕ್ಷಣ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಈ ಕುರಿತು ಮಹಾನಾಯಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಎಸ್.ಎಸ್. ಜಂಬಣ್ಣ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದು, ಘಟನೆಯ ಕುರಿತು ಸಮಗ್ರ, ನಿಷ್ಪಕ್ಷಪಾತ ಹಾಗೂ ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಶಿಸ್ತು ಮತ್ತು ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ದೂರಿನಲ್ಲಿ, ಘಟನೆ ನಡೆದ ವೇಳೆ ಚಪ್ಪಲಿಯನ್ನು ಕೈಯಲ್ಲಿ ಹಿಡಿದಿದ್ದರೆಂಬ ಮಾಹಿತಿಯೂ ಲಭ್ಯವಾಗಿದೆ ಎಂದು ಉಲ್ಲೇಖಿಸಲಾಗಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮುಖ್ಯೋಪಾಧ್ಯಾಯರೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಪ್ರತ್ಯೇಕ ದೂರು ಸಲ್ಲಿಸಿರುವುದಾಗಿ ತಿಳಿಸಲಾಗಿದೆ.

ವಿದ್ಯಾರ್ಥಿಗಳ ಎದುರಲ್ಲೇ ಇಂತಹ ಅಶಿಸ್ತಿನ ಘಟನೆ ನಡೆದಿದ್ದರೆ ಅದು ಶಾಲೆಯ ಗೌರವ, ಶಿಕ್ಷಣ ವ್ಯವಸ್ಥೆಯ ಘನತೆ ಹಾಗೂ ಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕಾದ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರಿಂದ ಇಂತಹ ವರ್ತನೆ ನಡೆದಿದ್ದರೆ ಅದು ಖಂಡನೀಯವಾಗಿದ್ದು, ಸಮಾಜಕ್ಕೂ ತಪ್ಪು ಸಂದೇಶ ರವಾನಿಸುವಂತಾಗಿದೆ ಎಂದು ವೇದಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಘಟನೆ ನಡೆದ ದಿನದ ಸಿಸಿಟಿವಿ ದೃಶ್ಯಾವಳಿಯನ್ನು ತಕ್ಷಣ ವಶಪಡಿಸಿಕೊಂಡು ಪರಿಶೀಲಿಸಬೇಕು. ಅಲ್ಲದೆ, ಶಾಲೆಯ ಶಿಕ್ಷಕರು, ಸಿಬ್ಬಂದಿ ಹಾಗೂ ಅಗತ್ಯವಿದ್ದಲ್ಲಿ ವಿದ್ಯಾರ್ಥಿಗಳಿಂದಲೂ ನಿಯಮಾನುಸಾರ ಮಾಹಿತಿ ಪಡೆದು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ.

ತನಿಖೆಯಲ್ಲಿ ಆರೋಪಗಳು ಸಾಬೀತಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು, ಕರ್ನಾಟಕ ಶಿಕ್ಷಣ ಕಾಯ್ದೆ ಹಾಗೂ ಅನ್ವಯವಾಗುವ ಇತರೆ ಇಲಾಖಾ ನಿಯಮಗಳ ಅಡಿಯಲ್ಲಿ ಕಠಿಣ ಶಿಸ್ತು ಕ್ರಮ ಜರುಗಿಸಬೇಕು. ಅಗತ್ಯವಿದ್ದರೆ ಅಮಾನತು ಸೇರಿದಂತೆ ಕಠಿಣ ಆಡಳಿತಾತ್ಮಕ ಕ್ರಮ ಕೈಗೊಂಡು, ಶಾಲೆಗಳಲ್ಲಿ ಇಂತಹ ಅಹಿತಕರ ಘಟನೆಗಳು ಮರುಕಳಿಸದಂತೆ ಶಿಕ್ಷಣ ಇಲಾಖೆ ಎಚ್ಚರಿಕೆ ವಹಿಸಬೇಕು ಎಂದು ಮಹಾನಾಯಕ ಜನಜಾಗೃತಿ ವೇದಿಕೆ ಒತ್ತಾಯಿಸಿದೆ.

ವಿದ್ಯಾರ್ಥಿಗಳಿಗೆ ಸುರಕ್ಷಿತ, ಶಾಂತಿಯುತ ಹಾಗೂ ಗುಣಮಟ್ಟದ ಶೈಕ್ಷಣಿಕ ವಾತಾವರಣ ಕಲ್ಪಿಸುವುದು ಶಿಕ್ಷಣ ಇಲಾಖೆಯ ಹೊಣೆಗಾರಿಕೆಯಾಗಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ವೇದಿಕೆಯ ರಾಜ್ಯಾಧ್ಯಕ್ಷ ಎಸ್.ಎಸ್. ಜಂಬಣ್ಣ ತಿಳಿಸಿದ್ದಾರೆ.

ಕಾದು ನೋಡೋಣ ಅಧಿಕಾರಿಗಳ ಕ್ರಮ!
ಘಟನೆಗೆ ಸಂಬಂಧಿಸಿದಂತೆ ಮಹಾನಾಯಕ ಜನಜಾಗೃತಿ ವೇದಿಕೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತಪ್ಪಿತಸ್ಥರನ್ನು ಅಮಾನತು ಮಾಡುವುದರ ಜೊತೆಗೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದೆ.

ಈ ಘಟನೆ ಶಾಲೆಯ ಶೈಕ್ಷಣಿಕ ವಾತಾವರಣದ ಮೇಲೆ ದುಷ್ಪರಿಣಾಮ ಬೀರಿದ್ದು, ವಿದ್ಯಾರ್ಥಿಗಳ ಮುಂದೆ ಇಂತಹ ಬೆಳವಣಿಗೆ ನಡೆಯುವುದು ಖಂಡನೀಯ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈಗ ದೂರು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಷ್ಟರಮಟ್ಟಿಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News

About The Author

error: Content is protected !!