August 21, 2026

ಆರೋಪಗಳ ಬೆನ್ನಲ್ಲೇ ಅಧಿಕಾರಿಗಳ ಎಚ್ಚರಿಕೆ – ಕಠಿಣ ಕ್ರಮದ ಭರವಸೆ

ಟಿ ಪಬ್ಲಿಕ್ ನ್ಯೂಸ್
ಏಪ್ರಿಲ್ 15

ಗಂಗಾವತಿ: ಸರ್ಕಾರ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀ ರಾಮನಗರದ 6ನೇ ವಾರ್ಡಿನಲ್ಲಿ ಜನರು ಚರಂಡಿ ನೀರನ್ನೇ ಅವಲಂಬಿಸಿರುವ ದುಸ್ಥಿತಿ ಬೆಳಕಿಗೆ ಬಂದಿದೆ. ಈ ಬೆಳವಣಿಗೆ ಸಾರ್ವಜನಿಕ ಆರೋಗ್ಯದ ಜೊತೆಗೆ ಜಾನುವಾರುಗಳ ಜೀವಕ್ಕೂ ಗಂಭೀರ ಅಪಾಯವನ್ನುಂಟು ಮಾಡಿದೆ.

ಸ್ಥಳೀಯ ಕೆರೆಗೆ ಶೌಚಾಲಯ ಮತ್ತು ಚರಂಡಿ ನೀರು ನೇರವಾಗಿ ಸೇರುತ್ತಿರುವುದರಿಂದ ನೀರು ಸಂಪೂರ್ಣ ಮಾಲಿನ್ಯಗೊಂಡಿದೆ. ಇದೇ ನೀರನ್ನು ಬಳಕೆ ಮಾಡುವ ಅನಿವಾರ್ಯತೆ ಜನರಲ್ಲಿ ಆತಂಕ ಹೆಚ್ಚಿಸಿದೆ. ಹಲವಾರು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೇಸಿಗೆ ಆರಂಭವಾಗುತ್ತಿದ್ದಂತೆ ಸಮಸ್ಯೆ ಮತ್ತಷ್ಟು ಗಂಭೀರಗೊಂಡಿದ್ದು, ಕೆರೆಯಲ್ಲಿ ಮೀನುಗಳು ಸತ್ತು ಹೋಗುತ್ತಿರುವುದು, ದುರ್ಗಂಧ ಹೆಚ್ಚುತ್ತಿರುವುದು ಪರಿಸ್ಥಿತಿಯ ತೀವ್ರತೆಯನ್ನು ತೋರಿಸುತ್ತಿದೆ. ಮಲೇರಿಯಾ, ಟೈಫಾಯ್ಡ್ ಸೇರಿದಂತೆ ಜಲಜನ್ಯ ರೋಗಗಳು ಹರಡುವ ಭೀತಿ ಹೆಚ್ಚಿದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ಇನ್ನೂ ಕೆಲವು ಮನೆಗಳಿಂದ ಅನಧಿಕೃತ ಪೈಪ್‌ಗಳ ಮೂಲಕ ಶೌಚಾಲಯದ ನೀರನ್ನು ನೇರವಾಗಿ ಕುಡಿಯುವ ನೀರಿನ ಕಾಲುವೆಗೆ ಹರಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ಕುರಿತು ಹಲವು ಬಾರಿ ದೂರು ನೀಡಿದರೂ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

“ನಮಗೆ ಮಾತ್ರವಲ್ಲ, ನಮ್ಮ ಜಾನುವಾರುಗಳಿಗೂ ಶುದ್ಧ ನೀರು ಬೇಕು. ಅಸ್ವಚ್ಛ ನೀರು ಕುಡಿಯುವುದರಿಂದ ರೋಗಗಳು ಹರಡುವ ಭೀತಿ ಇದೆ,” ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸ್ಥಳೀಯರ ಪ್ರಮುಖ ಆಗ್ರಹಗಳು
ಕೆರೆಗೆ ಚರಂಡಿ ನೀರು ಸೇರುವ ಮಾರ್ಗಗಳನ್ನು ತಕ್ಷಣ ಬಂದ್ ಮಾಡಬೇಕು

ಅನಧಿಕೃತ ಪೈಪ್‌ಗಳನ್ನು ತೆರವುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು

ಕೆರೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಶುದ್ಧ ನೀರು ತುಂಬಬೇಕು

ಸುರಕ್ಷಿತ ಕುಡಿಯುವ ನೀರಿನ ಪೂರೈಕೆ ಖಚಿತಪಡಿಸಬೇಕು

ಅಧಿಕಾರಿಗಳ ಸ್ಪಷ್ಟನೆ
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಷಾರಾಣಿ ಪ್ರತಿಕ್ರಿಯಿಸಿ, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ.

“ಕಾಲುವೆಗೆ ಚರಂಡಿ ನೀರು ಬಿಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಿಯಮ ಉಲ್ಲಂಘನೆ ಮಾಡಿದವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕೆರೆಯ ನೀರನ್ನು ಕುಡಿಯಲು ಬಳಸಬಾರದು ಎಂದು ಸಾರ್ವಜನಿಕರಿಗೆ ಸೂಚಿಸಲಾಗಿದೆ. ಶುದ್ಧ ಕುಡಿಯುವ ನೀರಿಗಾಗಿ ಆರ್‌ಒ ಪ್ಲಾಂಟ್ ಯೋಜನೆ ರೂಪಿಸಲಾಗಿದೆ,” ಎಂದು ಅವರು ವಿವರಿಸಿದರು.

ಇದಲ್ಲದೆ, ಬೋರ್‌ವೆಲ್‌ಗಳಿಂದ ಪರ್ಯಾಯವಾಗಿ ನೀರು ಪೂರೈಸುವ ಕ್ರಮಕ್ಕೂ ಮುಂದಾಗಿರುವುದಾಗಿ ತಿಳಿಸಿದರು.

ಜಾನುವಾರುಗಳ ಹಿತಕ್ಕೂ ಪ್ರಶ್ನೆ
ಅಸ್ವಚ್ಛ ನೀರಿನಿಂದ ಪ್ರಾಣಿ-ಪಕ್ಷಿಗಳ ಆರೋಗ್ಯಕ್ಕೂ ಅಪಾಯ ಉಂಟಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಿದೆ. ಸರ್ಕಾರದ ಯೋಜನೆಗಳಿದ್ದರೂ ತಳಮಟ್ಟದಲ್ಲಿ ಜಾನುವಾರುಗಳಿಗೆ ಶುದ್ಧ ನೀರು ಸಿಗದಿರುವುದು ಗಂಭೀರ ವಿಚಾರವಾಗಿದೆ.

ಸ್ಥಳೀಯರ ಎಚ್ಚರಿಕೆ
ಚಂದ್ರಶೇಖರ್,ದೊಡ್ಡದುರ್ಗಪ್ಪ,ದುರ್ಗೇಶ್,ಕಿರಣ್ ರಾಠೋಡ್,ಗುರುರಾಜ್ ಜಾದವ್,ಸುನಿಲ್ ರಾಥೋಡ್,ಗೋಪಾಲ್ ರಾಟೋಡ್,ಚಂದ್ರಕಾಂತ್ ಜಾದವ್,ವಿಷ್ಣುಕುಮಾರ್ ಸೇರಿದಂತೆ ಹಲವು ಸ್ಥಳೀಯರು, ಕಳೆದ 4-5 ವರ್ಷಗಳಿಂದ ಸಮಸ್ಯೆ ಮುಂದುವರಿದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದ್ದಾರೆ. “ವಾರ್ಡ್‌ಗಳ ಮಧ್ಯೆ ಭೇದಭಾವ ತೋರಲಾಗುತ್ತಿದೆ. ಸಮಸ್ಯೆ ಪರಿಹರಿಸದಿದ್ದರೆ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸುತ್ತೇವೆ,” ಎಂದು ಎಚ್ಚರಿಸಿದ್ದಾರೆ.

ರಾಜ್ಯಮಟ್ಟದ ಪ್ರಶ್ನೆ
ಶ್ರೀ ರಾಮನಗರದ ಈ ಘಟನೆ, ರಾಜ್ಯದ ಕುಡಿಯುವ ನೀರಿನ ಯೋಜನೆಗಳ ಜಾರಿಗೆ ಸಂಬಂಧಿಸಿದ ದೊಡ್ಡ ಪ್ರಶ್ನೆಯನ್ನು ಎತ್ತಿದೆ. ಕೋಟ್ಯಾಂತರ ವೆಚ್ಚವಾಗಿದ್ದರೂ ಜನರಿಗೆ ಮೂಲಭೂತ ಸೌಲಭ್ಯ ಸಿಗದಿರುವುದು ಆಡಳಿತ ವೈಫಲ್ಯವನ್ನೇ ತೋರಿಸುತ್ತದೆ. ಒಟ್ಟಾರೆ ಸಾರ್ವಜನಿಕರ ಆಕ್ರೋಶ – ಅಧಿಕಾರಿಗಳ ಕ್ರಮ – ಈ ನಡುವೆ ಶುದ್ಧ ನೀರಿಗಾಗಿ ಹೋರಾಟ ಮುಂದುವರಿದಿದೆ.

ನೈಜ ಸುದ್ದಿಗಾಗಿ ಟಿ ಪಬ್ಲಿಕ್ ನ್ಯೂಸ್