June 22, 2026

ಉಚಿತ ಆರೋಗ್ಯ ಶಿಬಿರದಲ್ಲಿ 70 ಮಂದಿಗೆ ಗಂಭೀರ ಕಾಯಿಲೆ ಪತ್ತೆ: 14 ಜನರಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ

🟥 ಟಿ ಪಬ್ಲಿಕ್ ನ್ಯೂಸ್ ಗಂಗಾವತಿ
ದಿನಾಂಕ: 01/06/2026

ಗಂಗಾವತಿ: ಡಾ. ಆರ್.ಬಿ. ಪಾಟೀಲ್ ಫೌಂಡೇಷನ್, ಗಂಗಾವತಿ, ಶ್ರೀ ಅಂಜನಾದ್ರಿ ಗೆಜ್ಜೆ ಹೆಜ್ಜೆ ಜನಸೇವಾ ಕಲಾ ಟ್ರಸ್ಟ್ ಹಾಗೂ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಸಹಯೋಗದಲ್ಲಿ ಕಳೆದ ವಾರ ಆಯೋಜಿಸಲಾಗಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 70 ಮಂದಿಗೆ ವಿವಿಧ ಗಂಭೀರ ಕಾಯಿಲೆಗಳು ಪತ್ತೆಯಾಗಿದ್ದು, ಅವರಲ್ಲಿ 14 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಶಿಬಿರದಲ್ಲಿ ತಪಾಸಣೆಗೊಳಗಾದ ಗಂಗಾವತಿಯ ಪಾರ್ವತಮ್ಮ ಎಂಬ ಮಹಿಳೆಗೆ ಹೃದಯ ಸಂಬಂಧಿ ಗಂಭೀರ ಸಮಸ್ಯೆ ಪತ್ತೆಯಾಗಿದ್ದು, ಸಪ್ತಗಿರಿ ಆಸ್ಪತ್ರೆಯಲ್ಲಿ ಮೂರು ಸ್ಟೆಂಟ್‌ಗಳನ್ನು ಅಳವಡಿಸುವ ಮೂಲಕ ಯಶಸ್ವಿ ಚಿಕಿತ್ಸೆ ನೀಡಲಾಗಿದೆ. ಉಳಿದ ರೋಗಿಗಳಿಗೂ ಹಂತಹಂತವಾಗಿ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದ್ದು, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ಸೇವೆಗೆ ರೋಗಿಗಳು ತೃಪ್ತಿ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಡಾ. ಆರ್.ಬಿ. ಪಾಟೀಲ್ ಫೌಂಡೇಷನ್ ಅಧ್ಯಕ್ಷ ಹಾಗೂ ನ್ಯಾಯವಾದಿ ಡಾ. ಆರ್.ಬಿ. ಪಾಟೀಲ್, “ಮೇಲ್ನೋಟಕ್ಕೆ ಆರೋಗ್ಯವಂತರಾಗಿ ಕಂಡರೂ ದೇಹದೊಳಗೆ ಅನೇಕ ಆರೋಗ್ಯ ಸಮಸ್ಯೆಗಳು ಅಡಗಿರಬಹುದು. ಆದ್ದರಿಂದ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ. ಗಂಭೀರ ಕಾಯಿಲೆಗಳು ಅಂತಿಮ ಹಂತ ತಲುಪಿದ ಬಳಿಕ ಪತ್ತೆಯಾದರೆ ಚಿಕಿತ್ಸೆ ಕಷ್ಟವಾಗುತ್ತದೆ. ಹೀಗಾಗಿ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗಳು ಹಾಗೂ ಉಚಿತ ಆರೋಗ್ಯ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಸಲಹೆ ನೀಡಿದರು.

ಶ್ರೀ ಅಂಜನಾದ್ರಿ ಗೆಜ್ಜೆ ಹೆಜ್ಜೆ ಜನಸೇವಾ ಕಲಾ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಇಂಗಳಗಿ ಮಾತನಾಡಿ, “ಡಾ. ಆರ್.ಬಿ. ಪಾಟೀಲ್ ಅವರು ತಮ್ಮ ಸ್ವಂತ ವೆಚ್ಚದಲ್ಲಿ ಆರೋಗ್ಯ ಶಿಬಿರ ಆಯೋಜಿಸಿ ಜನಸಾಮಾನ್ಯರಿಗೆ ಆರೋಗ್ಯ ಭಾಗ್ಯ ಒದಗಿಸಿದ್ದಾರೆ. ಗಂಗಾವತಿ ವಿಧಾನಸಭಾ ಕ್ಷೇತ್ರದ ಪ್ರತಿ ಹೋಬಳಿಯಲ್ಲೂ ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುವ ಯೋಜನೆ ರೂಪಿಸಲಾಗಿದ್ದು, ಶೀಘ್ರದಲ್ಲೇ ಆನೆಗೊಂದಿ ಭಾಗದಲ್ಲಿಯೂ ಶಿಬಿರ ಆಯೋಜಿಸಲಾಗುವುದು” ಎಂದು ತಿಳಿಸಿದರು.

ಶಿಬಿರದ ಯಶಸ್ಸಿಗೆ ಶ್ರಮಜೀವಿ ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಘಟಕ, ವಿ.ಐ.ಪಿ. ಮೆಲೋಡಿಸ್, ತಾಲೂಕು ಉಪ್ಪಾರ ಸಮಾಜ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ನಗರಸಭೆ, ಸ್ಪೂರ್ತಿ ಕಾಲೇಜು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಹಾಗೂ ನಾಗರಿಕರು ಸಹಕಾರ ನೀಡಿರುವುದನ್ನು ಅವರು ಸ್ಮರಿಸಿದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

About The Author

error: Content is protected !!