June 22, 2026

“ಸುಟ್ಟ ಶವದ ಹಿಂದಿನ ರಹಸ್ಯ ಬಯಲು; ಅಕ್ರಮ ಸಂಬಂಧದ ಅನುಮಾನವೇ ಕೊಲೆಗೆ ಕಾರಣ”

🟥 ಟಿ ಪಬ್ಲಿಕ್ ನ್ಯೂಸ್ | ಕನಕಗಿರಿ
ದಿನಾಂಕ: 12/06/2026

ಅಕ್ರಮ ಸಂಬಂಧದ ಅನುಮಾನಕ್ಕೆ ಮಹಿಳೆಯ ಕುತ್ತಿಗೆ ಹಿಸುಕಿ ಹತ್ಯೆ; ಶವಕ್ಕೆ ಬೆಂಕಿ ಹಚ್ಚಿ ಸಾಕ್ಷಿ ನಾಶಕ್ಕೆ ಯತ್ನ – 36 ಗಂಟೆಗಳಲ್ಲಿ ಆರೋಪಿಯನ್ನು ಹೆಡೆಮುರಿ ಕಟ್ಟಿದ ಕೊಪ್ಪಳ ಪೊಲೀಸರು

ಕನಕಗಿರಿ: ಕನಕಗಿರಿ ಪಟ್ಟಣದಲ್ಲಿ ನಿರ್ಮಾಣ ಹಂತದ ಮನೆಯಲ್ಲಿ 43 ವರ್ಷದ ಮಹಿಳೆಯನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿ, ಬಳಿಕ ಶವಕ್ಕೆ ಬೆಂಕಿ ಹಚ್ಚಿ ಸಾಕ್ಷಿ ನಾಶ ಮಾಡಲು ಯತ್ನಿಸಿದ ಭೀಕರ ಪ್ರಕರಣವನ್ನು ಕೊಪ್ಪಳ ಜಿಲ್ಲಾ ಪೊಲೀಸರು ಕೇವಲ 36 ಗಂಟೆಗಳೊಳಗೆ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಿನಾಂಕ 08-06-2026 ರಂದು ಸಂಜೆ 7 ಗಂಟೆಯಿಂದ ರಾತ್ರಿ 10.15 ಗಂಟೆಯ ಅವಧಿಯಲ್ಲಿ ಕನಕಗಿರಿ ಪಟ್ಟಣದ ಸಂಗನಗೌಡ ಮಾಲಿ ಪಾಟೀಲ್ ಅವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದ ಮೂರನೇ ಮಹಡಿಯ ಕೋಣೆಯಲ್ಲಿ ಮಹಿಳೆಯೊಬ್ಬರ ಸುಟ್ಟ ಸ್ಥಿತಿಯ ಶವ ಪತ್ತೆಯಾಗಿತ್ತು. ಸ್ಥಳ ಪರಿಶೀಲನೆಯ ವೇಳೆ ಕೊಲೆ ಮಾಡಿದ ನಂತರ ಶವಕ್ಕೆ ಬೆಂಕಿ ಹಚ್ಚಿ ಸಾಕ್ಷ್ಯಾಧಾರಗಳನ್ನು ನಾಶ ಮಾಡಲು ಯತ್ನಿಸಿರುವುದು ಸ್ಪಷ್ಟವಾಗಿತ್ತು.

ಮೃತ ಮಹಿಳೆಯನ್ನು ಕಾರಟಗಿ ಪಟ್ಟಣದ ಇಂದ್ರಾನಗರ ನಿವಾಸಿ ರತ್ನಮ್ಮ (43), ಪತಿ ದಿವಂಗತ ಮಲ್ಲಪ್ಪ ನಾಯಕ ಎಂದು ಗುರುತಿಸಲಾಗಿದೆ. ಈ ಸಂಬಂಧ ಸಂಗನಗೌಡ ಮಾಲಿ ಪಾಟೀಲ್ ನೀಡಿದ ದೂರಿನ ಮೇರೆಗೆ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 91/2026ರ ಅಡಿಯಲ್ಲಿ ಬಿಎನ್‌ಎಸ್-2023ರ ಕಲಂ 103(1) ಹಾಗೂ 238 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ರಾಮ ಎಲ್. ಅರಸಿದ್ದಿ ಐಪಿಎಸ್ ಅವರು ಹಾಗೂ ಕೊಪ್ಪಳ ಪೊಲೀಸ್ ಹೆಚ್ಚುವರಿ ಅಧೀಕ್ಷಕ ಶ್ರೀ ಹೇಮಂತ್ ಕುಮಾರ್ ಆರ್ ಇವರುಗಳ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಯಿತು. ಗಂಗಾವತಿ ಉಪವಿಭಾಗದ ಡಿವೈಎಸ್‌ಪಿ ಜಿ.ಎಸ್. ನ್ಯಾಮಗೌಡ ಅವರ ನೇತೃತ್ವದಲ್ಲಿ ಕನಕಗಿರಿ ಠಾಣೆಯ ಪಿಐ ವಿ. ನಾರಾಯಣ, ಕಾರಟಗಿ ಠಾಣೆಯ ಪಿಐ ಸುಧೀರ್ ಕುಮಾರ್ ಹಾಗೂ ತಾಂತ್ರಿಕ ಮತ್ತು ಸ್ಥಳೀಯ ಸಿಬ್ಬಂದಿ ತನಿಖೆ ಕೈಗೊಂಡರು.

ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ರಾಮ ಎಲ್. ಅರಸಿದ್ದಿ ಐಪಿಎಸ್
ಗಂಗಾವತಿ ಉಪವಿಭಾಗದ ಡಿವೈಎಸ್‌ಪಿ ಜಿ.ಎಸ್. ನ್ಯಾಮಗೌಡ
ಕನಕಗಿರಿ ಠಾಣೆಯ ಪಿಐ ವಿ. ನಾರಾಯಣ
ಕಾರಟಗಿ ಠಾಣೆಯ ಪಿಐ ಸುಧೀರ್ ಕುಮಾರ್

ತನಿಖೆ ವೇಳೆ ಕರಡಕೋರ, ಹಾ. ಪುಲಿವದ್ದರ ನಿವಾಸಿ  ಶಮಿದ್ ಸಾಬ್ ತಂದೆ ಹುಸೇನ್ ಸಾಬ್ ತಾಳಕೇರಿ (30) ಎಂಬಾತನ ಚಲನವಲನಗಳು ಅನುಮಾನಕ್ಕೆ ಕಾರಣವಾಗಿದ್ದು, ವಿಚಾರಣೆಗೆ ಒಳಪಡಿಸಿದಾಗ ಆತ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

ಮೃತ ರತ್ನಮ್ಮಳೊಂದಿಗೆ ಪರಿಚಯ ಹೊಂದಿದ್ದ ಆರೋಪಿ ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನು. ಆದರೆ ಆಕೆ ಇತರರೊಂದಿಗೂ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಕೊಲೆ ಮಾಡುವ ಉದ್ದೇಶ ಬೆಳೆಸಿಕೊಂಡಿದ್ದಾನೆ. ಅದರಂತೆ ನಿರ್ಮಾಣ ಹಂತದ ಮನೆಯ ಕೋಣೆಗೆ ಕರೆದುಕೊಂಡು ಹೋಗಿ ಕುತ್ತಿಗೆ ಹಿಸುಕಿ ಹತ್ಯೆ ಮಾಡಿ, ಬಳಿಕ ಶವಕ್ಕೆ ಬೆಂಕಿ ಹಚ್ಚಿ ಸಾಕ್ಷ್ಯಾಧಾರಗಳನ್ನು ನಾಶಪಡಿಸಲು ಯತ್ನಿಸಿ ಪರಾರಿಯಾಗಿದ್ದಾನೆ ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯಕ್ಕೆ ಬಳಸಿದ ಬೆಂಕಿ ಪೊಟ್ಟಣ ಸೇರಿದಂತೆ ಇತರೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಪ್ರಕರಣಕ್ಕೆ ಎಸ್‌ಸಿ/ಎಸ್‌ಟಿ (ಅತ್ಯಾಚಾರ ತಡೆ) ಕಾಯ್ದೆಯ ಕಲಂ 3(2)(5) ಅನ್ನು ಸಹ ಸೇರ್ಪಡೆಗೊಳಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ.

ಈ ಕಾರ್ಯಾಚರಣೆಯಲ್ಲಿ ಕನಕಗಿರಿ ಠಾಣೆಯ ಪಿಐ ವಿ. ನಾರಾಯಣ, ಕಾರಟಗಿ ಠಾಣೆಯ ಪಿಐ ಸುಧೀರ್ ಕುಮಾರ್, ಪಿಎಸ್‌ಐ ಉಮೇಶ್ ಹಾಗೂ ಸಿಬ್ಬಂದಿಗಳಾದ ಪರಶುರಾಮ, ಬೈಲಪ್ಪ ಸಿದ್ದಮ್ಮಪ್ಪ, ಬಸವರಾಜ್, ಹನುಮಂತಪ್ಪ, ಲೋಹಿತ್, ಕೋಟೇಶ್, ಹಿರೇಲಿಂಗಪ್ಪ, ಮಲ್ಲಿಕಾರ್ಜುನ, ಶರೀಫ್ ಸಾಹೇಬ್ ಮತ್ತು ತಾಂತ್ರಿಕ ವಿಭಾಗದ ಪ್ರಸಾದ್ ಹಾಗೂ ಮಂಜುನಾಥ ಎಪಿಸಿ ಅವರು ಭಾಗವಹಿಸಿದ್ದರು.

ಮೃತ ಮಹಿಳೆ ಹಾಗೂ ಆರೋಪಿಯ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಇಲ್ಲದ ಸ್ಥಿತಿಯಲ್ಲಿಯೇ, ಕೋಲ್ಡ್ ಕೇಸ್‌ನಂತಿದ್ದ ಈ ಪ್ರಕರಣವನ್ನು ಕೇವಲ 36 ಗಂಟೆಗಳಲ್ಲಿ ಭೇದಿಸಿ ಆರೋಪಿಯನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಕಾರ್ಯಕ್ಷಮತೆಯನ್ನು ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ರಾಮ ಎಲ್. ಅರಸಿದ್ದಿ ಅವರು ಶ್ಲಾಘಿಸಿ ಗೌರವಿಸಿದ್ದಾರೆ.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News

About The Author

error: Content is protected !!