🟥 ಟಿ ಪಬ್ಲಿಕ್ ನ್ಯೂಸ್ | ಸಿಂಧನೂರು
ದಿನಾಂಕ: 27/08/2026
ರೈತರು–ಗುತ್ತಿಗೆದಾರರ ಪರ ಬಂದವರ ನಡುವೆ ಮಾತಿನ ಚಕಮಕಿ; ಹಿರಿಯರ ಮಧ್ಯಸ್ಥಿಕೆಯಿಂದ ಗೊಂದಲಕ್ಕೆ ತೆರೆ
ಸಿಂಧನೂರು: ತಾಲೂಕಿನ ಮಾವಿನಮಡಗು ಗ್ರಾಮದ ವ್ಯಾಪ್ತಿಯ ನಾಲೆಗೆ ಸಣ್ಣ ನೀರಾವರಿ ಇಲಾಖೆ ವತಿಯಿಂದ ಚೆಕ್ ಡ್ಯಾಂ ನಿರ್ಮಿಸಲು ಮುಂದಾಗಿರುವುದಕ್ಕೆ ಮಾವಿನಮಡಗು, ಗಬ್ಬರ್ ಕಲ್ಲು ಹಾಗೂ ಉಡ ಗ್ರಾಮದ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಚೆಕ್ ಡ್ಯಾಂ ನಿರ್ಮಾಣದಿಂದ ನಾಲೆಯ ಕೆಳಭಾಗದಲ್ಲಿರುವ ಕೃಷಿ ಪ್ರದೇಶಗಳಿಗೆ ನೀರಿನ ಸಹಜ ಹರಿವಿನ ಮೇಲೆ ಪರಿಣಾಮ ಉಂಟಾಗಿ, ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಬಹುದು ಎಂಬ ಆತಂಕವನ್ನು ರೈತರು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಮರುಪರಿಶೀಲಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿ, ಸಣ್ಣ ನೀರಾವರಿ ಇಲಾಖೆ ಹಾಗೂ ಸಿಂಧನೂರು ಶಾಸಕ ಬಾದರ್ಲಿ ಹಂಪನಗೌಡ ಅವರಿಗೆ ಮನವಿ ಸಲ್ಲಿಸಿರುವುದಾಗಿ ರೈತರು ತಿಳಿಸಿದ್ದಾರೆ.


ರೈತರ ಮನವಿ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಯಿತು. ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಜೈ ಪ್ರವೀಣ್, ಕಾಮಗಾರಿ ಗುತ್ತಿಗೆದಾರ ಮಲ್ಲನಗೌಡ, ಶಾಸಕರ ಸಹೋದರ ಪುತ್ರ ರಾಜುಗೌಡ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ತಿಮ್ಮಣ್ಣ ನಾಯಕ ಚನ್ನಬಸಪ್ಪ ಸೌಕಾರ್ ಅವರ ಸಮ್ಮುಖದಲ್ಲಿ ಚರ್ಚೆ ನಡೆಯಿತು.
ಸಭೆಯಲ್ಲಿ ಬಹುತೇಕ ರೈತರು ಚೆಕ್ ಡ್ಯಾಂ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರು. ಕಾಮಗಾರಿಗೆ ಸಂಬಂಧಿಸಿದ ಸಾಮಗ್ರಿಗಳನ್ನು ಈಗಾಗಲೇ ಸ್ಥಳಕ್ಕೆ ತಂದು ಹಾಕಿರುವ ವಿಚಾರವೂ ಚರ್ಚೆಗೆ ಬಂದಿದ್ದು, ಕಾಮಗಾರಿ ಆರಂಭಿಸುವ ವಿಚಾರದಲ್ಲಿ ರೈತರು ಹಾಗೂ ಕಾಮಗಾರಿಗೆ ಸಂಬಂಧಿಸಿದವರ ನಡುವೆ ಭಿನ್ನಾಭಿಪ್ರಾಯ ಉಂಟಾಯಿತು.
ಈ ವೇಳೆ ರೈತರು ತಮ್ಮ ಆಕ್ಷೇಪಣೆಗಳನ್ನು ವ್ಯಕ್ತಪಡಿಸುತ್ತಿದ್ದ ಸಂದರ್ಭದಲ್ಲಿ, ಕಾಮಗಾರಿಯ ಪರವಾಗಿ ಮಾತನಾಡಿದ ಕೆಲವರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ಕೆಲಕಾಲ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸದಂತೆ ಹಿರಿಯರು ಮಧ್ಯಸ್ಥಿಕೆ ವಹಿಸಿ ಎರಡೂ ಕಡೆಯವರನ್ನು ಸಮಾಧಾನಪಡಿಸಿದರು. ಬಳಿಕ ಶಾಂತ ವಾತಾವರಣದಲ್ಲಿ ರೈತರ ಸಮಸ್ಯೆ ಹಾಗೂ ನೀರಿನ ಹರಿವಿನ ಕುರಿತು ಚರ್ಚೆ ಮುಂದುವರಿಯಿತು.
ಕೆಳಭಾಗದ ರೈತರಿಗೆ ನೀರಿನ ಆತಂಕ: ಕಾರಟಗಿ ಭಾಗದಿಂದ ಹರಿದು ಬರುವ ಸಣ್ಣ ನಾಲೆಯಲ್ಲಿ ಮೇಲ್ಭಾಗದ ಪ್ರದೇಶಗಳಿಂದ ಹರಿದುಬರುವ ನೀರು ಹಾಗೂ ಸುತ್ತಮುತ್ತಲಿನ ಕೃಷಿ ಪ್ರದೇಶಗಳಿಂದ ಹೊರಹರಿಯುವ ನೀರು ಕೆಳಭಾಗಕ್ಕೆ ಹರಿಯುತ್ತದೆ. ಈ ನೀರನ್ನು ಕೆಳಭಾಗದ ಹಲವು ರೈತರು ಕೃಷಿ ಉದ್ದೇಶಕ್ಕೆ ಬಳಸುತ್ತಿದ್ದಾರೆ.
ಜೋಳ, ಸೂರ್ಯಕಾಂತಿ, ಸಜ್ಜೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿರುವ ರೈತರು, ಚೆಕ್ ಡ್ಯಾಂ ನಿರ್ಮಾಣದಿಂದ ನೀರಿನ ಸಹಜ ಹರಿವಿನಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ನಾಲೆಯ ಕೊನೆಯ ಭಾಗದಲ್ಲಿರುವ ರೈತರಿಗೆ ಸಮರ್ಪಕವಾಗಿ ನೀರು ತಲುಪದಿರುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಅವರು ಹೇಳಿದ್ದಾರೆ.
ಸಭೆಯ ಸಂದರ್ಭದಲ್ಲಿ ರೈತರು ಸಿಂಧನೂರು ಶಾಸಕ ಬಾದರ್ಲಿ ಹಂಪನಗೌಡರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದರು. ತಮ್ಮ ಗಮನಕ್ಕೆ ಬಾರದ ರೀತಿಯಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಶಾಸಕರ ಗಮನಕ್ಕೆ ತಂದಿದ್ದು, ಈ ಕುರಿತು ಆದಷ್ಟು ಬೇಗ ವಿಚಾರಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ ಎಂದು ರೈತರು ತಿಳಿಸಿದ್ದಾರೆ.
ರೈತರ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಚೆಕ್ ಡ್ಯಾಂ ನಿರ್ಮಾಣದ ತಾಂತ್ರಿಕ ಅಂಶಗಳು, ನಾಲೆಯ ನೀರಿನ ಸಹಜ ಹರಿವು ಹಾಗೂ ಕೆಳಭಾಗದ ಕೃಷಿ ಪ್ರದೇಶಗಳ ಮೇಲೆ ಉಂಟಾಗಬಹುದಾದ ಪರಿಣಾಮವನ್ನು ಅಧಿಕಾರಿಗಳು ಸಮಗ್ರವಾಗಿ ಪರಿಶೀಲಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಕಾಮಗಾರಿಯಿಂದ ಯಾವುದೇ ರೈತರಿಗೆ ನೀರಿನ ಸಮಸ್ಯೆ ಉಂಟಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಅಥವಾ ಕಾಮಗಾರಿಯನ್ನು ಮರುಪರಿಶೀಲಿಸಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ.
ಸಭೆಯಲ್ಲಿ ರೈತರಾದ ಹನುಮಂತಪ್ಪ ದಳಪತಿ, ಗಬ್ಬರ್ ಕಲ್ಲೂರು ಭೀಮನಾಯಕ, ಗುರುಬಸವ, ಬಸವರಾಜ್, ಮಲ್ಲಪ್ಪ, ಅಂಬಣ್ಣ ವಕೀಲರು, ಮಲ್ಲೇಶ್ ರಾವ್, ಮಾವಿನಮಡಗು ಈರಪ್ಪ, ಸೋಮಲಿಂಗಪ್ಪ, ಸಣ್ಣಪ್ಪ, ನೀಲಕೃಷ್ಣ, ಧರ್ಮಣ್ಣ, ರಾಮಣ್ಣ, ನಿಂಗಪ್ಪ ಹಾಗೂ ನಾಗನಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಭೀಮನಾಯಕ ಅಯೋಧ್ಯ ಮಾತನಾಡಿ, ಕಾರಟಗಿ ಭಾಗದಿಂದ ಬರುವ ಸಣ್ಣ ನಾಲೆಗೆ ಮೇಲ್ಭಾಗದ ನೀರು ಹರಿದು ಬರುತ್ತಿದ್ದು, ಸುತ್ತಮುತ್ತಲಿನ ಕೃಷಿ ಪ್ರದೇಶಗಳಿಂದ ಹೊರಬರುವ ನೀರನ್ನು ಕೆಳಭಾಗದ ರೈತರು ಕೃಷಿಗೆ ಬಳಸುತ್ತಿದ್ದಾರೆ. ಚೆಕ್ ಡ್ಯಾಂ ನಿರ್ಮಾಣದಿಂದ ನಾಲೆಯ ಕೊನೆಯ ಭಾಗದ ರೈತರಿಗೆ ನೀರು ತಲುಪದಿರುವ ಆತಂಕವಿದ್ದು, ಶಾಸಕರು ಈ ವಿಷಯವನ್ನು ಗಮನಿಸಿ ಕಾಮಗಾರಿಯನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಗುರುಬಸವ ಮಾತನಾಡಿ, ಈಗಾಗಲೇ ರೈತರು ಮಳೆ ಹಾಗೂ ಬೆಳೆ ಸಮಸ್ಯೆಯಿಂದ ಸಂಕಷ್ಟದಲ್ಲಿದ್ದು, ಜೀವನ ನಡೆಸುವುದು ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಚೆಕ್ ಡ್ಯಾಂ ನಿರ್ಮಾಣದಿಂದ ಕೆಳಭಾಗದ ರೈತರಿಗೆ ಮತ್ತಷ್ಟು ತೊಂದರೆಯಾಗಬಹುದು. ರೈತರ ಹಿತದೃಷ್ಟಿಯಿಂದ ಕಾಮಗಾರಿಯನ್ನು ಕೈಬಿಡಬೇಕು ಅಥವಾ ಸೂಕ್ತ ಪರ್ಯಾಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

More Stories
ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಲಕ್ಷ್ಮಣಸಾ ಅರಸಿದ್ದಿ ವರ್ಗಾವಣೆ; ನೂತನ ಎಸ್ಪಿಯಾಗಿ ಶಾಹಿಲ್ ಬಾಗ್ಲಾ ನೇಮಕ
ಶ್ರಾವಣ ಹುಣ್ಣಿಮೆ ಅಂಗವಾಗಿ ಸತ್ಯನಾರಾಯಣ ಪೂಜೆ ಆಯೋಜನೆ
*ಉಡುಮಕಲ್ನಲ್ಲಿ ಆತ್ಮೀಯ ಸನ್ಮಾನ: ಬಿಜೆಪಿ ಬಲವರ್ಧನೆಗೆ ವಿರೂಪಾಕ್ಷಪ್ಪ ಸಿಂಗನಾಳ ಕರೆ*