October 19, 2026

ತ್ರಿಶಕ್ತಿ ಪೀಠಗಳಿಂದ ಧಾರ್ಮಿಕವಾಗಿ ಸಮೃದ್ಧಗೊಂಡಿದೆ ಭತ್ತದ ನಾಡು ಗಂಗಾವತಿ: ನಾರಾಯಣರಾವ್ ವೈದ್ಯ

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 19/10/2026

ಗಂಗಾವತಿ: ಭಾವೈಕ್ಯತೆಗೆ ಹೆಸರಾದ ಭತ್ತದ ನಾಡು ಗಂಗಾವತಿ, ಶ್ರೀ ದುರ್ಗಾದೇವಿ, ಶ್ರೀ ಉದ್ಭವ ಲಕ್ಷ್ಮಿ ಹಾಗೂ ಶ್ರೀ ಶಾರದಾಂಬೆಯ ತ್ರಿಶಕ್ತಿ ಪೀಠಗಳಿಂದ ಧಾರ್ಮಿಕವಾಗಿ ಸಮೃದ್ಧಗೊಂಡಿದೆ ಎಂದು ಶೃಂಗೇರಿ ಶಾರದಾ ಪೀಠದ ಗಂಗಾವತಿ ಶಾಖಾಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.

ನಗರದ ಶ್ರೀ ಶಂಕರ ಮಠದಲ್ಲಿ ಭಾನುವಾರ ಶ್ರೀ ಶಾರದಾ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ನವಚಂಡಿ ಹವನ ಹಾಗೂ ಕುಮಾರಿಕಾ ಪೂಜೆಯ ಧಾರ್ಮಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಹಾಕಾಳಿ, ಮಹಾಲಕ್ಷ್ಮಿ ಹಾಗೂ ಮಹಾಸರಸ್ವತಿಯ ಸ್ವರೂಪಗಳಾದ ದೇವಿಯ ಆರಾಧನೆಯು ಸನಾತನ ಧರ್ಮದ ವೈಭವ ಮತ್ತು ಶ್ರೇಷ್ಠ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಸೂರ್ಯ, ಚಂದ್ರರು ಇರುವವರೆಗೂ ಸನಾತನ ಪರಂಪರೆಗೆ ಅಂತ್ಯವಿಲ್ಲ ಎಂದು ಅವರು ತಿಳಿಸಿದರು.

ಹತ್ತು ವರ್ಷದೊಳಗಿನ ಬಾಲಕಿಯರನ್ನು ಸಾಕ್ಷಾತ್ ನವದುರ್ಗೆಯರ ಸ್ವರೂಪವೆಂದು ಭಾವಿಸಿ ಪೂಜಿಸುವ ಕುಮಾರಿಕಾ ಪೂಜೆಯು ಭಾರತೀಯ ಸಂಸ್ಕೃತಿಯ ವಿಶಿಷ್ಟ ಆಚರಣೆಯಾಗಿದೆ. ಇಂತಹ ಧಾರ್ಮಿಕ ಆಚರಣೆಗಳು ನಮ್ಮ ಭವ್ಯ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ನವಚಂಡಿ ಹವನದ ಮಹಾಸಂಕಲ್ಪವನ್ನು ವಿದ್ಯಾತೀರ್ಥ ನಾರ್ವೆ ಹಾಗೂ ಶ್ರೀಕಾಂತ್ ಪುರಾಣಿಕ್ ದಂಪತಿಗಳು ನೆರವೇರಿಸಿದರು. ಸುನಿಲ್ ವೈದ್ಯ, ಕಿರಣ್ ಭಟ್ ಜೋಶಿ ಹಾಗೂ ಆದಿತ್ಯ ಹೆಬ್ಬಳ್ಳಿ ಅವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಡಿವೈಎಸ್‌ಪಿ ಜಾಯಪ್ಪ ನ್ಯಾಮಗೌಡ ದಂಪತಿಗಳು, ಕಾಶಿನಾಥ ಭಟ್, ಜಗನ್ನಾಥ ಅಳವಂಡಿಕರ್, ಶೇಷಗಿರಿ ಗಡಾದ್, ವೇಣು ಅಳವಂಡಿ, ರಾಘವೇಂದ್ರ, ಚೈತನ್ಯ ಕುಮಾರ್ ಭಟ್, ದತ್ತಾತ್ರೇಯ, ಸುದರ್ಶನ ವೈದ್ಯ, ಶ್ರೀನಿವಾಸ ಕರಮುಡಿ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News
error: Content is protected !!