August 21, 2026

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಎಐಸಿಸಿಟಿಯು ಜಿಲ್ಲಾ ಅಧ್ಯಕ್ಷ ವಿಜಯ ದೊರೆರಾಜು

🟥 ಟಿ ಪಬ್ಲಿಕ್ ನ್ಯೂಸ್ ಗಂಗಾವತಿ
ದಿನಾಂಕ: 01/06/2026

ಗಂಗಾವತಿ:ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಂಗಾವತಿಯ ಜೂಲಾಯಿ ನಗರದಲ್ಲಿ ಎಐಸಿಸಿಟಿಯು (AICCTU) ನೇತೃತ್ವದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಐಸಿಸಿಟಿಯು ಜಿಲ್ಲಾ ಅಧ್ಯಕ್ಷ ಕಾಮ್ರೇಡ್ ವಿಜಯ ದೊರೆರಾಜು ಅವರು, ಸಾರ್ವಜನಿಕರು ಆರೋಗ್ಯವಂತರಾಗಿ ಬದುಕಬೇಕಾದರೆ ಪರಿಸರ ಸಂರಕ್ಷಣೆ ಅತ್ಯಗತ್ಯವಾಗಿದೆ ಎಂದು ಹೇಳಿದರು. ಪರಿಸರ ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಿದ್ದು, ಗಂಗಾವತಿ ನಗರದ ಬಹುತೇಕ ರಸ್ತೆಗಳು ಹದಗೆಟ್ಟಿರುವುದರಿಂದ ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ನಗರದ ಎಲ್ಲಾ ರಸ್ತೆಗಳ ದುರಸ್ತಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಜೊತೆಗೆ, ಬೀದಿ ಬದಿಯ ವ್ಯಾಪಾರಿಗಳ ಜೀವನೋಪಾಯ ಸಂರಕ್ಷಣೆಗೆ ಜಾರಿಯಲ್ಲಿರುವ 2014ರ ಕಾಯ್ದೆಯನ್ನು ಉಲ್ಲಂಘಿಸಿ ಯಾವುದೇ ಮುಂಜಾಗ್ರತಾ ನೋಟಿಸ್ ನೀಡದೆ ವ್ಯಾಪಾರಿಗಳನ್ನು ತೆರವುಗೊಳಿಸುವ ಕ್ರಮವನ್ನು ಕೈಬಿಡಬೇಕು. ಅವರ ನಿಗದಿತ ವ್ಯಾಪ್ತಿಯಲ್ಲೇ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಪ್ರಗತಿಪರ ಬೀದಿಬದಿಯ ವ್ಯಾಪಾರಿಗಳ ಸಂಘದ ಗಂಗಾವತಿ ತಾಲೂಕು ಅಧ್ಯಕ್ಷ ಕಾಮ್ರೇಡ್ ಸೈಯದ್ ಬುರ್ಹಾನುದ್ದಿನ್ ಮಾತನಾಡಿ, ನಗರಸಭೆ ಅಧಿಕಾರಿಗಳು ನಗರದ ಸ್ವಚ್ಛತೆ ಮತ್ತು ಒಳಚರಂಡಿ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ನಗರದಾದ್ಯಂತ ಚರಂಡಿಗಳು ಮತ್ತು ಒಳಚರಂಡಿಗಳು ಹದಗೆಟ್ಟಿದ್ದು, ರಸ್ತೆಗಳ ದುಸ್ಥಿತಿಯಿಂದ ಉಂಟಾಗುವ ಧೂಳು ಸಾರ್ವಜನಿಕರಲ್ಲಿ ಉಸಿರಾಟದ ಸಮಸ್ಯೆಗಳನ್ನು ಹೆಚ್ಚಿಸುತ್ತಿದೆ ಎಂದು ಹೇಳಿದರು.

ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಅಗತ್ಯ ವಸ್ತುಗಳನ್ನು ಒದಗಿಸುತ್ತಿರುವ ಬೀದಿ ಬದಿಯ ವ್ಯಾಪಾರಿಗಳನ್ನು ವಿನಾಕಾರಣ ತೆರವುಗೊಳಿಸುವ ಬದಲು, ಸಾರ್ವಜನಿಕ ಆರೋಗ್ಯ ಮತ್ತು ಮೂಲಸೌಕರ್ಯಗಳ ಸುಧಾರಣೆಗೆ ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಸಣ್ಣ ಹನುಮಂತಪ್ಪ ಹುಲಿಹೈದರ, ಮಾರೇಮ್ಮ, ಜಾವಿದ್ ಅಲಿ, ಬರಮಪ್ಪ, ಬಸವರಾಜ ಲಿಂಬು, ಹುಲಗಪ್ಪ ಚಪ್ಪರಾ, ರಾಜಪ್ಪ, ಲಕ್ಷ್ಮಣ ಸೇರಿದಂತೆ ಸಂಘಟನೆಯ ಸುಮಾರು 30 ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್