October 16, 2026

ರಕ್ತಸಿಕ್ತ ಉನ್ಮಾದ: ತಂದೆ-ಅಕ್ಕನನ್ನು ಚಾಕುವಿನಿಂದ ಕೊಂದ ಪುತ್ರ, ತಾಯಿಗೂ ಮಾರಣಾಂತಿಕ ಇರಿತ”

🟥 ಟಿ ಪಬ್ಲಿಕ್ ನ್ಯೂಸ್ ಗಂಗಾವತಿ
ದಿನಾಂಕ: 07/06/2026

ಕೌಟುಂಬಿಕ ಕಲಹದ ಕೋಪದಲ್ಲಿ 18 ವರ್ಷದ ಯುವಕನಿಂದ ಭೀಕರ ಕೃತ್ಯ; ಅಕ್ಕ ಸ್ಥಳದಲ್ಲೇ ಸಾವು, ತಂದೆ ಆಸ್ಪತ್ರೆಯಲ್ಲಿ ಮೃತ್ಯು, ತಾಯಿ ಐಸಿಯುನಲ್ಲಿ ಜೀವಕ್ಕಾಗಿ ಹೋರಾಟ

ಗಂಗಾವತಿ: ಕೌಟುಂಬಿಕ ಕಲಹದ ಉನ್ಮಾದದಲ್ಲಿ ಸ್ವಂತ ತಂದೆ ಹಾಗೂ ಅಕ್ಕನ ಮೇಲೆಯೇ ಪುತ್ರನೊಬ್ಬ ಚಾಕುವಿನಿಂದ ಮಾರಣಾಂತಿಕ ದಾಳಿ ನಡೆಸಿ ಇಬ್ಬರನ್ನೂ ಹತ್ಯೆ ಮಾಡಿರುವ ಹೃದಯವಿದ್ರಾವಕ ಘಟನೆ ಗಂಗಾವತಿ ವ್ಯಾಪ್ತಿಯ ಹೊಸ ಅಯೋಧ್ಯೆ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಅಕ್ಕ ಸ್ಥಳದಲ್ಲೇ ಮೃತಪಟ್ಟಿದ್ದು, ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ತಾಯಿ ಗಂಭೀರ ಗಾಯಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರನ್ನು ಪ್ರಗತಿ (19) ಹಾಗೂ ವೆಂಕಟನಾಯ್ಡು ಎಂದು ಗುರುತಿಸಲಾಗಿದೆ. ಆರೋಪಿ ಸಾಯಿ ವೆಂಕಟ ಮಣಿ ದೀಪ (18) ಎಂದು ತಿಳಿದುಬಂದಿದೆ.

ಶನಿವಾರ ರಾತ್ರಿ ಕುಟುಂಬದ ಸದಸ್ಯರು ಮನೆಯ ಅಂಗಳದಲ್ಲಿ ಕುಳಿತು ಮಾವಿನ ಹಣ್ಣು ಸವಿಯುತ್ತಿದ್ದರು. ಮಳೆ ಆರಂಭವಾದ ಕಾರಣ ಮನೆಯೊಳಗೆ ತೆರಳಿದ ವೇಳೆ ಕ್ಷುಲ್ಲಕ ವಿಚಾರಕ್ಕೆ ಕುಟುಂಬದವರ ನಡುವೆ ವಾಗ್ವಾದ ಉಂಟಾಗಿದೆ. ಈ ವೇಳೆ ಕೋಪೋದ್ರಿಕ್ತನಾದ ಸಾಯಿ ವೆಂಕಟ ಮಣಿ ದೀಪ ಮನೆಯಲ್ಲಿದ್ದ ಚೂಪಾದ ಚಾಕು ಹಿಡಿದು ತಂದೆ, ತಾಯಿ ಹಾಗೂ ಅಕ್ಕನ ಮೇಲೆ ಮನಬಂದಂತೆ ದಾಳಿ ನಡೆಸಿದ್ದಾನೆ.

ದಾಳಿಯಲ್ಲಿ ಅಕ್ಕ ಪ್ರಗತಿ ಅವರ ಕುತ್ತಿಗೆಗೆ ತೀವ್ರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಂದೆ ವೆಂಕಟನಾಯ್ಡು ತಡೆಯಲು ಮುಂದಾದಾಗ ಅವರ ಮೇಲೂ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದ್ದು, ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ತಾಯಿ ಸೌಜನ್ಯ ಅವರಿಗೂ ಗಂಭೀರ ಗಾಯಗಳಾಗಿದ್ದು, ಪ್ರಸ್ತುತ ವಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ವೇಳೆ ಮನೆಯೊಳಗಿನಿಂದ ಸಹಾಯಕ್ಕಾಗಿ ಕೂಗಾಟ ಕೇಳಿಬಂದ ಹಿನ್ನೆಲೆಯಲ್ಲಿ ನೆರೆಹೊರೆಯವರು ಹಾಗೂ ಕುಟುಂಬದ ಹಿರಿಯರು ಬಾಗಿಲು ಮುರಿದು ಒಳಗೆ ಪ್ರವೇಶಿಸಿದ್ದಾರೆ. ಆಗ ಕೋಣೆಯೆಲ್ಲ ರಕ್ತದ ಮಡುವಾಗಿದ್ದು, ಅಕ್ಕ ಮತ್ತು ತಂದೆ ರಕ್ತದ ಕೆರೆಯಲ್ಲಿ ಬಿದ್ದಿರುವ ದೃಶ್ಯ ಕಂಡುಬಂದಿದೆ. ದಾಳಿ ನಡೆಸಿದ ಆರೋಪಿ ತಾನೂ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

ಗ್ರಾಮಸ್ಥರು ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದು, ಆರೋಪಿ ಸದ್ಯ ಪೊಲೀಸ್ ಕಾವಲಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಸಂಬಂಧ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

error: Content is protected !!