June 22, 2026

ದಲಿತರು ಹಾಗೂ ಶೋಷಿತ ವರ್ಗಗಳ ಹಕ್ಕುಗಳಿಗಾಗಿ ನಿರಂತರ ಹೋರಾಟ: ಡಿ.ಆರ್. ಪಾಂಡುರಂಗಸ್ವಾಮಿ

🟥 ಟಿ ಪಬ್ಲಿಕ್ ನ್ಯೂಸ್ ಗಂಗಾವತಿ
ದಿನಾಂಕ: 08/06/2026

ಗಂಗಾವತಿ: ದಲಿತರು ಹಾಗೂ ಸಮಾಜದಲ್ಲಿ ಅನ್ಯಾಯ ಮತ್ತು ಶೋಷಣೆಗೆ ಒಳಗಾದ ವರ್ಗಗಳ ಹಕ್ಕುಗಳ ರಕ್ಷಣೆಗಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಮಹಾತ್ಮ ಪ್ರೊ. ಬಿ. ಕೃಷ್ಣಪ್ಪ) ನಿರಂತರ ಹೋರಾಟ ನಡೆಸಲಿದ್ದು, ಸಂಘಟನೆಯನ್ನು ಜಿಲ್ಲೆಯಲ್ಲಿ ಮತ್ತಷ್ಟು ಬಲಪಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಯ ರಾಜ್ಯ ಸಂಚಾಲಕ ಡಿ.ಆರ್. ಪಾಂಡುರಂಗಸ್ವಾಮಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ರಾಜಕೀಯ ಪಕ್ಷದ ಪರವಾಗಿ ಕಾರ್ಯನಿರ್ವಹಿಸದೆ ದಲಿತರು ಹಾಗೂ ಶೋಷಿತ ವರ್ಗಗಳ ಪರವಾಗಿ ಸಂಘಟನೆ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ಸಂಘಟನೆಯ ವಿಸ್ತರಣೆ ಮತ್ತು ಬಲವರ್ಧನೆಗಾಗಿ ರಾಜ್ಯ ಸಂಘಟನಾ ಸಂಚಾಲಕರಾಗಿ ಹಂಪೇಶ ಹರಿಗೋಲ ಅವರನ್ನು ನೇಮಕ ಮಾಡಲಾಗಿದ್ದು, ಅವರ ನೇತೃತ್ವದಲ್ಲಿ ಸ್ಥಳೀಯ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುವುದರ ಜೊತೆಗೆ ಜನಪರ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

“ದಲಿತ” ಎಂಬ ಪದವು ಕೇವಲ ಒಂದು ಸಮುದಾಯವನ್ನು ಮಾತ್ರ ಪ್ರತಿನಿಧಿಸುವುದಿಲ್ಲ. ಅದು ಶೋಷಣೆಗೆ ಒಳಗಾದ ಎಲ್ಲ ವರ್ಗಗಳ ಸಂಕೇತವಾಗಿದೆ. ಯಾವುದೇ ವ್ಯಕ್ತಿ ಅನ್ಯಾಯ ಮತ್ತು ಶೋಷಣೆಗೆ ಒಳಗಾಗಬಾರದು ಎಂಬುದು ಸಂಘಟನೆಯ ಮೂಲ ಆಶಯವಾಗಿದ್ದು, ಸಮಾಜದಲ್ಲಿ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳ ಸ್ಥಾಪನೆಗಾಗಿ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಂಘಟನೆಯು ವರ್ಗೀಕರಣದ ವಿರುದ್ಧ ತನ್ನ ನಿಲುವನ್ನು ಪುನರುಚ್ಚರಿಸಿದ್ದು, ಸಮಾಜದ ಎಲ್ಲ ಶೋಷಿತ ವರ್ಗಗಳ ಹಕ್ಕುಗಳ ಸಂರಕ್ಷಣೆಗಾಗಿ ಬದ್ಧತೆಯಿಂದ ಕಾರ್ಯನಿರ್ವಹಿಸುವುದಾಗಿ ತಿಳಿಸಿತು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಗೋವಿಂದ ಸಣ್ಣಕ್ಕಿ, ಪ್ರಮುಖರಾದ ಹಂಪೇಶ ಹರಿಗೋಲ, ಯಮನೂರ ನಾಯಕ, ಗುರುಬಾಯಿ ಎನ್. ಕಟ್ಟಿಮನಿ, ರಂಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

About The Author

error: Content is protected !!