🟥 ಟಿ ಪಬ್ಲಿಕ್ ನ್ಯೂಸ್ ಗಂಗಾವತಿ
ದಿನಾಂಕ: 08/06/2026
ವೈಜ್ಞಾನಿಕ ತನಿಖೆ, ಕ್ಷಿಪ್ರ ಕಾರ್ಯಾಚರಣೆ; ಸರಣಿ ಕಳ್ಳತನ ಪ್ರಕರಣಗಳಲ್ಲಿ ಭಾರೀ ಯಶಸ್ಸು ಸಾಧಿಸಿದ ಕೊಪ್ಪಳ ಜಿಲ್ಲಾ ಪೊಲೀಸರು
ಗಂಗಾವತಿ: ಗಂಗಾವತಿ ಹಾಗೂ ಕುಷ್ಟಗಿ ವ್ಯಾಪ್ತಿಯಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣಗಳನ್ನು ಕೇವಲ ಆರು ಗಂಟೆಗಳ ಅವಧಿಯಲ್ಲೇ ಭೇದಿಸಿರುವ ಕೊಪ್ಪಳ ಜಿಲ್ಲಾ ಪೊಲೀಸರು, ಏಳು ಆರೋಪಿಗಳನ್ನು ಬಂಧಿಸಿ ₹41 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದನ್ನು ವಶಪಡಿಸಿಕೊಳ್ಳುವ ಮೂಲಕ ಅಪರಾಧ ಜಾಲಕ್ಕೆ ತೀವ್ರ ಹೊಡೆತ ನೀಡಿದ್ದಾರೆ.


ಪೊಲೀಸ್ ಉಪವಿಭಾಗ ಅಧಿಕಾರಿಗಳ ಕಾರ್ಯಾಲಯ ಗಂಗಾವತಿ ಆವರಣದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ಅವರು, ಗಂಗಾವತಿ ನಗರದ ಗುಂಡಮ್ಮ ಕ್ಯಾಂಪ್ ಹಾಗೂ 1 ನೇ ವಾರ್ಡ್‌ನಲ್ಲಿ ಜೂನ್ 6ರಂದು ನಡೆದ ಎರಡು ಮನೆ ಕಳ್ಳತನ ಪ್ರಕರಣಗಳಾದ ಕ್ರೈಂ ನಂ.124/2026 ಮತ್ತು 125/2026 ಪ್ರಕರಣಗಳ ತನಿಖೆಯಲ್ಲಿ ಪೊಲೀಸರು ಗಮನಾರ್ಹ ಯಶಸ್ಸು ಸಾಧಿಸಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ರಾಮ್ ಎಲ್. ಅರಸಿದ್ದಿ ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಹಾಗೂ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ಅವರ ಮೇಲ್ವಿಚಾರಣೆಯಲ್ಲಿ ಗಂಗಾವತಿ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್ ಯಾತನೂರು ನೇತೃತ್ವದ ವಿಶೇಷ ತಂಡ ವೈಜ್ಞಾನಿಕ ತಂತ್ರಜ್ಞಾನ ಬಳಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿತು. ಪ್ರಕರಣ ದಾಖಲಾದ ಆರು ಗಂಟೆಗಳೊಳಗೆ ಸಾಹಿಲ್ ಅಲಿಯಾಸ್ ಸೋನು (21), ವೀರೇಶ್ ಚೆಲುವಾದಿ (20) ಹಾಗೂ ಒಬ್ಬ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಬಂಧಿಸಲಾಯಿತು.



ಆರೋಪಿತರಿಂದ ಸುಮಾರು 100 ಗ್ರಾಂ ಚಿನ್ನದ ಆಭರಣ, 1,450 ಗ್ರಾಂ ಬೆಳ್ಳಿ ಆಭರಣ ಹಾಗೂ ನಗದು ಸೇರಿದಂತೆ ಒಟ್ಟು ₹19 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದೇ ವೇಳೆ ಕುಷ್ಟಗಿ: ಪಟ್ಟಣದ ಅಪ್ರಾಪ್ತ ಬಾಲಕನನ್ನು ದುರುಪಯೋಗಪಡಿಸಿಕೊಂಡು ಮನೆಯಿಂದ ಚಿನ್ನಾಭರಣ ಕಳವು ಮಾಡಿಸಿದ ಪ್ರಕರಣ ಸೇರಿದಂತೆ ಇತರೆ ಕಳ್ಳತನ ಪ್ರಕರಣಗಳ ತನಿಖೆಯಲ್ಲೂ ಪೊಲೀಸರು ಯಶಸ್ಸು ಸಾಧಿಸಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ರಾಮ್ ಎಲ್. ಅರಸಿದ್ದಿ ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹೇಮಂತ್ ಕುಮಾರ್ ಐಪಿಎಸ್ ಅವರ ಮಾರ್ಗದರ್ಶನದಲ್ಲಿ, ಕುಷ್ಟಗಿ ವೃತ್ತದ ಸಿಪಿಐ ವಿಶ್ವನಾಥ ಹಿರೇಗೌಡರ್ ನೇತೃತ್ವದ ತಂಡ ಆರೋಪಿತರಾದ ನವೀನ್ ಕಲಾಲ್, ಬಸವರಾಜ ಅಂಗಡಿ, ರಾಜ್ ಮೊಹಮ್ಮದ್ ಹಾಗೂ ಮತ್ತೋರ್ವ ಬಸವರಾಜ ಅವರನ್ನು ಬಂಧಿಸಿದೆ.





ಆರೋಪಿತರಿಂದ 150 ಗ್ರಾಂ ಚಿನ್ನದ ಆಭರಣ, 180 ಗ್ರಾಂ ಬೆಳ್ಳಿಯ ಆಭರಣ ಸೇರಿದಂತೆ ಒಟ್ಟು ₹22 ಲಕ್ಷ ಮೌಲ್ಯದ ಕಳವು ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿಯೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಒಟ್ಟಾರೆ ಗಂಗಾವತಿ ಉಪವಿಭಾಗ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಐದು ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದು, ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ಒಟ್ಟು 250 ಗ್ರಾಂ ಚಿನ್ನದ ಆಭರಣ, 1,630 ಗ್ರಾಂ ಬೆಳ್ಳಿಯ ಆಭರಣ ಸೇರಿದಂತೆ ಸುಮಾರು ₹41 ಲಕ್ಷ ಮೌಲ್ಯದ ಕಳವು ಸ್ವತ್ತನ್ನು ಜಪ್ತಿ ಮಾಡಲಾಗಿದೆ.
ಪೊಲೀಸ್ ಇಲಾಖೆಯ ತ್ವರಿತ ಕಾರ್ಯಾಚರಣೆ, ವೈಜ್ಞಾನಿಕ ತನಿಖಾ ವಿಧಾನ ಹಾಗೂ ಸಮನ್ವಯತೆಯಿಂದ ಕಳ್ಳತನ ಪ್ರಕರಣಗಳನ್ನು ಕ್ಷಿಪ್ರವಾಗಿ ಭೇದಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ ಎಂದು ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ತಿಳಿಸಿದರು.
ಮನೆಗಳಿಗೆ ಪೊಲೀಸ್ ಭದ್ರತೆ: ಲಾಕ್ ಹೌಸ್ ಬಿಟ್ ಸಿಸ್ಟಮ್ ಜಾರಿ

ಗಂಗಾವತಿ: ಸಾರ್ವಜನಿಕರ ಮನೆಗಳ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆ “ಲಾಕ್ ಹೌಸ್ ಬಿಟ್ ಸಿಸ್ಟಮ್” ಅನ್ನು ಜಾರಿಗೆ ತಂದಿದೆ ಎಂದು ಗಂಗಾವತಿ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ತಿಳಿಸಿದ್ದಾರೆ.
ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿರುವ ಅವರು, ಮನೆಗಳಿಗೆ ಕೀಲಿ ಹಾಕಿಕೊಂಡು ಊರು ಬಿಟ್ಟು ಹೊರಗಡೆ ಹೋಗುವವರು ತಮ್ಮ ವಿವರಗಳನ್ನು ಪೊಲೀಸ್ ಇಲಾಖೆಯ ವಾಟ್ಸಾಪ್ ಸಂಖ್ಯೆ 8277978603 ಗೆ ಕಳುಹಿಸಬಹುದು ಎಂದು ತಿಳಿಸಿದ್ದಾರೆ. ಮಾಹಿತಿ ನೀಡಿದ ಮನೆಗಳ ಮೇಲೆ ಸ್ಥಳೀಯ ಪೊಲೀಸರು ವಿಶೇಷ ನಿಗಾ ವಹಿಸಿ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಸಾರ್ವಜನಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಂಡು ತಮ್ಮ ಮನೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ಡಿವೈಎಸ್ಪಿ ಮನವಿ ಮಾಡಿದ್ದಾರೆ.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್
More Stories
ಕಾರಟಗಿ ಶಾಂತಿನಿಕೇತನ ಪಬ್ಲಿಕ್ ಶಾಲೆಯಲ್ಲಿ ಅದ್ದೂರಿಯಾಗಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ
ಜೂನ್ 24ರಂದು ಹೊಸಳ್ಳಿಯಲ್ಲಿ ಅದ್ದೂರಿಯಾಗಿ ಗಂಗಾದೇವಿ ಜಯಂತಿ: ಸಾಮೂಹಿಕ ವಿವಾಹ, ರಥೋತ್ಸವಕ್ಕೆ ಭರ್ಜರಿ ಸಿದ್ಧತೆ
ಮೊಹರಂ ಹಬ್ಬ ಶಾಂತಿಯುತ ಆಚರಣೆಗೆ ಸಹಕರಿಸಿ: ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ಹಾಗೂ ಸಿಪಿಐ ರಂಗಪ್ಪ ದೊಡ್ಮನಿ ಕರೆ