🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 18/08/2026
ಗಂಗಾವತಿ: ಗುತ್ತಿಗೆ, ಹೊರಗುತ್ತಿಗೆ, ತಾತ್ಕಾಲಿಕ ಹಾಗೂ ದಿನಗೂಲಿ ಪದ್ಧತಿಗಳನ್ನು ಸಂಪೂರ್ಣವಾಗಿ ರದ್ದುಪಡಿಸಿ, ಎಲ್ಲಾ ಕಾರ್ಮಿಕರನ್ನು ಕ್ರಮಬದ್ಧಗೊಳಿಸುವುದರೊಂದಿಗೆ ನೇರ ಪಾವತಿ ವ್ಯವಸ್ಥೆ ಜಾರಿಗೊಳಿಸಬೇಕು. ಪ್ರತಿಯೊಬ್ಬ ಕಾರ್ಮಿಕನಿಗೂ ಪರಿಷ್ಕೃತ ಕನಿಷ್ಠ ವೇತನ ಪಾವತಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ವತಿಯಿಂದ ಆ.20ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಐಸಿಸಿಟಿಯು ಜಿಲ್ಲಾ ಅಧ್ಯಕ್ಷ ವಿಜಯ ದೊರೆರಾಜು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸಂಘಟನೆಯ ವತಿಯಿಂದ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ ಕಾರ್ಮಿಕರ ವಿವಿಧ ಹಕ್ಕೊತ್ತಾಯಗಳನ್ನು ಸರ್ಕಾರದ ಮುಂದಿಡುವ ಉದ್ದೇಶದಿಂದ ಆ.20ರಂದು ಬೆಳಿಗ್ಗೆ 10 ಗಂಟೆಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಕಾರ್ಮಿಕರು ಉತ್ಪಾದನೆಯ ನಿಜವಾದ ಸೃಷ್ಟಿಕರ್ತರಾಗಿದ್ದರೂ ಇಂದು ಬಡತನ, ಅಭದ್ರತೆ ಹಾಗೂ ಶೋಷಣೆಯ ನಡುವೆ ಬದುಕುವಂತಾಗಿದೆ. ಗುತ್ತಿಗೆ ಮತ್ತು ಹೊರಗುತ್ತಿಗೆ ಪದ್ಧತಿಯಿಂದ ಉದ್ಯೋಗ ಭದ್ರತೆ, ಶಾಸನಬದ್ಧ ವೇತನ ಹಾಗೂ ಸಾಮಾಜಿಕ ಭದ್ರತೆಯಿಂದ ಕಾರ್ಮಿಕರು ವಂಚಿತರಾಗುತ್ತಿದ್ದಾರೆ. ಒಂದೇ ರೀತಿಯ ಕೆಲಸ ನಿರ್ವಹಿಸುವ ಗುತ್ತಿಗೆ ಕಾರ್ಮಿಕರಿಗೆ ಖಾಯಂ ಕಾರ್ಮಿಕರಿಗಿಂತ ಕಡಿಮೆ ವೇತನ ನೀಡಲಾಗುತ್ತಿದೆ. ಈ ಪದ್ಧತಿ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಶೋಷಣಾತ್ಮಕ ವ್ಯವಸ್ಥೆಯಾಗಿದೆ ಎಂದು ಆರೋಪಿಸಿದರು.
ಗುತ್ತಿಗೆ, ಹೊರಗುತ್ತಿಗೆ, ತಾತ್ಕಾಲಿಕ, ದಿನಗೂಲಿ ಹಾಗೂ ಸ್ಥಿರಾವಧಿ ಸೇರಿದಂತೆ ಎಲ್ಲಾ ಅಸಾಂಘಿಕ ಕಾರ್ಮಿಕ ವ್ಯವಸ್ಥೆಗಳನ್ನು ರದ್ದುಪಡಿಸಿ, ಕಾರ್ಮಿಕರನ್ನು ಕ್ರಮಬದ್ಧಗೊಳಿಸಿ ನೇರ ಪಾವತಿ ವ್ಯವಸ್ಥೆ ಜಾರಿಗೊಳಿಸಬೇಕು. ಯಾವುದೇ ಕಾರ್ಮಿಕನಿಗೂ ತಿಂಗಳಿಗೆ ₹42,000ಕ್ಕಿಂತ ಕಡಿಮೆ ವೇತನ ನೀಡಬಾರದು. ಪ್ರತಿಯೊಬ್ಬ ಕಾರ್ಮಿಕನಿಗೂ ಉದ್ಯೋಗ ಭದ್ರತೆ ಒದಗಿಸಿ ಪರಿಷ್ಕೃತ ಕನಿಷ್ಠ ವೇತನವನ್ನು ಕಡ್ಡಾಯವಾಗಿ ಪಾವತಿಸಬೇಕು ಎಂದು ಒತ್ತಾಯಿಸಿದರು.
ಎಲ್ಲ ಕಾರ್ಮಿಕರಿಗೂ ಯಾವುದೇ ವಿನಾಯಿತಿ ಇಲ್ಲದೆ ಸಾಮಾಜಿಕ ಭದ್ರತೆ, ಆರೋಗ್ಯ, ಮಾತೃತ್ವ ಹಾಗೂ ಪಿಂಚಣಿ ಸೌಲಭ್ಯಗಳನ್ನು ಒದಗಿಸಬೇಕು. ವೇತನ ಮಿತಿಯಿಲ್ಲದೆ ಎಲ್ಲ ಕಾರ್ಮಿಕರನ್ನು ಇಎಸ್‌ಐ ವ್ಯಾಪ್ತಿಗೆ ಒಳಪಡಿಸಬೇಕು. ಮಹಿಳಾ ಕಾರ್ಮಿಕರಿಗೆ ಸುರಕ್ಷಿತ ಹಾಗೂ ಕಿರುಕುಳ ಮುಕ್ತ ಕೆಲಸದ ಸ್ಥಳ ಖಾತರಿಪಡಿಸಬೇಕು. ಕಾರ್ಮಿಕರ ಸಂಘಟಿಸುವ, ಪ್ರತಿಭಟಿಸುವ ಹಾಗೂ ಮುಷ್ಕರ ನಡೆಸುವ ಹಕ್ಕುಗಳನ್ನು ರಕ್ಷಿಸಬೇಕು. ಪರಿಷ್ಕೃತ ಕನಿಷ್ಠ ವೇತನವನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಯುವ ಬೆಂಗಳೂರಿನ ಪ್ರತಿಭಟನೆಯಲ್ಲಿ ಕಾರ್ಖಾನೆಗಳ ಕಾರ್ಮಿಕರು, ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರು, ಸರ್ಕಾರಿ ಇಲಾಖೆಗಳ ಕಾರ್ಮಿಕರು, ಪೌರಕಾರ್ಮಿಕರು, ತ್ಯಾಜ್ಯ ಸಾಗಿಸುವ ವಾಹನಗಳ ಚಾಲಕರು ಹಾಗೂ ಸಹಾಯಕರು, ಆಸ್ಪತ್ರೆ ಮತ್ತು ಗ್ರಂಥಾಲಯಗಳ ಸ್ವಚ್ಛತಾ ಕಾರ್ಮಿಕರು, ಗಾರ್ಮೆಂಟ್ ಕಾರ್ಮಿಕರು ಹಾಗೂ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಜಿಲ್ಲಾ ಉಪಾಧ್ಯಕ್ಷ ಸಣ್ಣ ಹನುಮಂತಪ್ಪ ಹುಲಿಹೈದರ, ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಹಾಗೂ ಸಹಾಯಕರ ಸಂಘದ ರಾಜ್ಯ ಕಾರ್ಯದರ್ಶಿ ಕೇಶವ ನಾಯಕ, ಕರ್ನಾಟಕ ಪ್ರಗತಿಪರ ಪೌರ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಪರಶುರಾಮ, ಪ್ರಮುಖರಾದ ಮಾಯಮ್ಮ, ರೇಣುಕಮ್ಮ, ದ್ಯಾವಮ್ಮ ಹಾಗೂ ಇತರರು ಉಪಸ್ಥಿತರಿದ್ದರು.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

More Stories
ಈದ್ ಮಿಲಾದ್ ಹಬ್ಬ: ಸೌಹಾರ್ದತೆ ಕಾಪಾಡಲು ಪೊಲೀಸರ ಮನವಿ
ಗಂಗಾವತಿಯಲ್ಲಿ ನಿವೇಶನ ರಹಿತರಿಗೆ ಭೂಮಿ ಕಾಯ್ದಿರಿಸಲು ಸಿಪಿಐ ಆಗ್ರಹ
ಸಂಚಾರ ವ್ಯವಸ್ಥೆಗೆ ಹೊಸ ಚೈತನ್ಯ: ಪಿಎಸ್ಐ ಶಾರದಮ್ಮ ಡಿ. ಅವರ ದಕ್ಷ ಕಾರ್ಯಕ್ಕೆ ಜನಮೆಚ್ಚುಗೆ