🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 20/08/2026
ಗಂಗಾವತಿ: ಮುಂಬರುವ ಈದ್ ಮಿಲಾದ್ ಹಬ್ಬವನ್ನು ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆಯೊಂದಿಗೆ ಆಚರಿಸುವ ಹಿನ್ನೆಲೆಯಲ್ಲಿ ಗಂಗಾವತಿ ಉಪವಿಭಾಗದ ನಗರ ಪೊಲೀಸ್ ಠಾಣೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಪೊಲೀಸ್ ಅಧಿಕಾರಿಗಳು, ವಿವಿಧ ಸಮಾಜಗಳ ಮುಖಂಡರು ಹಾಗೂ ಮುಸ್ಲಿಂ ಸಮಾಜದ ಹಿರಿಯರು ಸಭೆಯಲ್ಲಿ ಭಾಗವಹಿಸಿ ಹಬ್ಬದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು.

ಗಂಗಾವತಿ ಉಪವಿಭಾಗದ ಡಿವೈಎಸ್‌ಪಿ ಜೆ.ಎಸ್. ನ್ಯಾಮ್ ಗೌಡರ್ ಮಾತನಾಡಿ, ಈದ್ ಮಿಲಾದ್ ಹಬ್ಬವು ಪ್ರೀತಿ, ಸಹೋದರತ್ವ ಹಾಗೂ ಸೌಹಾರ್ದತೆಯ ಸಂದೇಶ ಸಾರುವ ಹಬ್ಬವಾಗಿದೆ. ಎಲ್ಲರೂ ಕಾನೂನು-ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಶಾಂತಿಯುತವಾಗಿ ಹಬ್ಬ ಆಚರಿಸಬೇಕು. ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡದೆ, ಪರಸ್ಪರ ಗೌರವ ಹಾಗೂ ಸಹಕಾರದಿಂದ ಹಬ್ಬವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ನಗರ ಪೊಲೀಸ್ ಠಾಣೆ ಪಿಐ ಪ್ರಕಾಶ್ ಯಾತನೂರು ಮಾತನಾಡಿ, ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮೆರವಣಿಗೆ ಹಾಗೂ ಕಾರ್ಯಕ್ರಮಗಳನ್ನು ನಿಯಮಾನುಸಾರ ನಡೆಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವ ಮೂಲಕ ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಸಂಚಾರಿ ನಗರ ಪೊಲೀಸ್ ಠಾಣೆಯ ಪಿಎಸ್ಐ ಇಸ್ಮಾಯಿಲ್ ಸಾಬ್ ಮಾತನಾಡಿ, ಹಬ್ಬದ ದಿನ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮೆರವಣಿಗೆ ಸಂದರ್ಭದಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸದೆ, ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದಂತೆ ಪೊಲೀಸ್ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸಬೇಕು. ಶಾಂತಿ ಹಾಗೂ ಸೌಹಾರ್ದತೆಯಿಂದ ಹಬ್ಬ ಆಚರಿಸುವುದು ಎಲ್ಲರ ಜವಾಬ್ದಾರಿ ಎಂದರು.
ವಾಲ್ಮೀಕಿ ಸಮಾಜದ ಹಿರಿಯರಾದ ಜೋಗದ ಹನುಮಂತಪ್ಪ ನಾಯಕ ಮಾತನಾಡಿ, ಗಂಗಾವತಿ ನಗರದಲ್ಲಿ ಎಲ್ಲ ಸಮುದಾಯದವರು ಪರಸ್ಪರ ಸಹೋದರತ್ವದಿಂದ ಬದುಕುತ್ತಿರುವುದು ಹೆಮ್ಮೆಯ ಸಂಗತಿ. ಹಬ್ಬಗಳು ಧರ್ಮದ ಆಚರಣೆಯ ಜೊತೆಗೆ ಸಮಾಜದಲ್ಲಿ ಪ್ರೀತಿ ಮತ್ತು ವಿಶ್ವಾಸ ಬೆಳೆಸುವ ಸಂದರ್ಭಗಳಾಗಬೇಕು. ಈದ್ ಮಿಲಾದ್ ಹಬ್ಬವನ್ನು ಎಲ್ಲರೂ ಒಗ್ಗಟ್ಟಿನಿಂದ ಆಚರಿಸಿ ಸೌಹಾರ್ದತೆಯ ಸಂದೇಶ ನೀಡೋಣ ಎಂದು ಹೇಳಿದರು.
ಎಎಸ್ಐ ಶಿವಶರಣಪ್ಪ ಮಾತನಾಡಿ, ಹಬ್ಬದ ಸಂದರ್ಭದಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಮಹತ್ವ ನೀಡದೆ, ಪರಸ್ಪರ ಅರ್ಥೈಸಿಕೊಂಡು ಸಹಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸಾರ್ವಜನಿಕ ಶಾಂತಿ ಮತ್ತು ಕಾನೂನು-ಸುವ್ಯವಸ್ಥೆ ಕಾಪಾಡುವುದು ಪೊಲೀಸರಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಆಗಿದೆ ಎಂದರು.
ಮುಸ್ಲಿಂ ಸಮಾಜದ ಹಿರಿಯರಾದ ಎಸ್.ಬಿ.ಖಾದ್ರಿ ಮಾತನಾಡಿ, ಈದ್ ಮಿಲಾದ್ ಹಬ್ಬವನ್ನು ಶಾಂತಿ, ಪ್ರೀತಿ ಮತ್ತು ಸೌಹಾರ್ದತೆಯಿಂದ ಆಚರಿಸಲಾಗುವುದು. ಪೊಲೀಸ್ ಇಲಾಖೆ ನೀಡುವ ಸೂಚನೆಗಳನ್ನು ಪಾಲಿಸಿ, ನಗರದ ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಆರೋಗ್ಯ ಮೇಲ್ವಿಚಾರಕರಾದ ಶರಣಪ್ಪ, ಕೆಇಬಿ ಅಧಿಕಾರಿ ವಿಜಯಕುಮಾರ್, ಮುಖಂಡರಾದ ಡಾಕ್ಟರ್ ಆರ್ ಬಿ ಪಾಟೀಲ್, ಮಾಜಿ ನಗರಸಭೆ ಸದಸ್ಯ ಖಾಸೀಂಸಾಬ ಗದ್ವಾಲ್, ಅಸ್ತಮಾಸಾಬ, ಹೊಸಹಳ್ಳಿ ಶಂಕರ್ ಗೌಡ, ಮೀರಾಸಾಬ, ಹಾಗೂ ಸಭೆಯಲ್ಲಿ ವಿವಿಧ ಸಮುದಾಯಗಳ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

More Stories
ಗಂಗಾವತಿಯಲ್ಲಿ ನಿವೇಶನ ರಹಿತರಿಗೆ ಭೂಮಿ ಕಾಯ್ದಿರಿಸಲು ಸಿಪಿಐ ಆಗ್ರಹ
ಗುತ್ತಿಗೆ ಪದ್ಧತಿ ರದ್ದುಪಡಿಸಲು ಒತ್ತಾಯಿಸಿ ಆ.20ರಂದು ಬೆಂಗಳೂರು ಚಲೋ
ಸಂಚಾರ ವ್ಯವಸ್ಥೆಗೆ ಹೊಸ ಚೈತನ್ಯ: ಪಿಎಸ್ಐ ಶಾರದಮ್ಮ ಡಿ. ಅವರ ದಕ್ಷ ಕಾರ್ಯಕ್ಕೆ ಜನಮೆಚ್ಚುಗೆ