August 29, 2026

ಕ್ರಾಂತಿಯ ಜ್ಯೋತಿ: ಪ್ರವಾದಿ ಮುಹಮ್ಮದ್‌(ಸ) ಸೀರತ್ ಅಭಿಯಾನಕ್ಕೆ ಚಾಲನೆ

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 25/08/2026

ಗಂಗಾವತಿ: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ವತಿಯಿಂದ ಪ್ರವಾದಿ ಮುಹಮ್ಮದ್‌(ಸ) ಅವರ ಜನ್ಮ ದಿನದ ಅಂಗವಾಗಿ ಆ.26ರಿಂದ ಸೆ.6ರವರೆಗೆ ರಾಜ್ಯಾದ್ಯಂತ “ಕ್ರಾಂತಿಯ ಜ್ಯೋತಿ: ಪ್ರವಾದಿ ಮುಹಮ್ಮದ್‌(ಸ)” ಎಂಬ ಶೀರ್ಷಿಕೆಯಡಿ ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಅಬ್ದುಲ್ ಖುದ್ದೂಸ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾದಿ ಮುಹಮ್ಮದ್‌(ಸ) ಅವರು ಸತ್ಯ, ನ್ಯಾಯ, ಕರುಣೆ, ಮಾನವ ಸಮಾನತೆ, ಮಾನವ ಘನತೆ ಹಾಗೂ ಮಾನವ ಕುಲದ ಏಕತೆಯ ಸಂದೇಶವನ್ನು ಸಾರುವ ಮೂಲಕ ವ್ಯಕ್ತಿ ಮತ್ತು ಸಮಾಜದ ಪರಿವರ್ತನೆಗೆ ಕಾರಣರಾದರು ಎಂದರು.

ಪ್ರವಾದಿ ಮುಹಮ್ಮದ್‌(ಸ) ಅವರ ಸಂದೇಶಗಳನ್ನು ಕನ್ನಡ ಜನತೆಗೆ ಪರಿಚಯಿಸುವುದು, ಅವರ ಕುರಿತು ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸುವುದು ಹಾಗೂ ಸಮಾಜದಲ್ಲಿ ಪರಸ್ಪರ ಬಾಂಧವ್ಯವನ್ನು ಬಲಪಡಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ಅಭಿಯಾನದ ಅಂಗವಾಗಿ ಸಾಹಿತಿ ಯೋಗೇಶ್ ಮಾಸ್ಟರ್ ರಚಿಸಿರುವ “ಮಾನವ ಮನಸ್ಸಿನ ಕೃಷಿಕ – ಮನದೊಡೆಯ ಪ್ರವಾದಿ ಮುಹಮ್ಮದ್‌(ಸ)” ಹಾಗೂ ವಾರ್ತಾ ಭಾರತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಅಬ್ಬುಸಲಾಮ್ ಪುತ್ತಿಗೆ ರಚಿಸಿರುವ “ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್‌(ಸ)” ಕೃತಿಗಳನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ವೈಯಕ್ತಿಕ ಭೇಟಿ, ವಿಚಾರಗೋಷ್ಠಿ, ಸಾರ್ವಜನಿಕ ಸಮಾವೇಶ, ಸಂವಾದ, ಚರ್ಚಾಗೋಷ್ಠಿ, ಸೀರತ್ ಪ್ರವಚನ, ಸೀರತ್ ಎಕ್ಸಿಬಿಷನ್, ಸಮಾಜಸೇವಾ ಚಟುವಟಿಕೆಗಳು ಹಾಗೂ ಸೌಹಾರ್ದ ಸಂದೇಶ ರ‍್ಯಾಲಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಗಂಗಾವತಿಯಲ್ಲಿ ಸಮಾಜಮುಖಿ ಕಾರ್ಯಕ್ರಮಗಳು: ಸೀರತ್ ಅಭಿಯಾನದ ಅಂಗವಾಗಿ ಗಂಗಾವತಿಯಲ್ಲಿ ವೃದ್ಧಾಶ್ರಮದಲ್ಲಿರುವ ವೃದ್ಧರಿಗೆ ನೆರವು, ಸ್ವಚ್ಛತಾ ಕಾರ್ಯಕ್ರಮ ಹಾಗೂ ಪರಿಸರ ಜಾಗೃತಿ ಸೇರಿದಂತೆ ವಿವಿಧ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸೆ.7ರಂದು ನಗರದ ಅಮರಜ್ಯೋತಿ ಕಲ್ಯಾಣ ಮಂಟಪದಲ್ಲಿ ಪುಸ್ತಕ ಬಿಡುಗಡೆ ಹಾಗೂ ವಿಚಾರಗೋಷ್ಠಿ ನಡೆಯಲಿದೆ ಎಂದು ಅಬ್ದುಲ್ ಖುದ್ದೂಸ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಾವದ್ ಹುಸೇನ್, ಮೈನೂದ್ದೀನ್ ಕನೂ೯ಲ್, ಹಬೀಬ್ ನಿಶಾನಿ, ರಾಜ್, ಮಹಮ್ಮದ್ ರಫೀಕ್, ನಾಸೀರ್ ಅಹ್ಮದ್, ಅಜೀಜ್ ನಿಶಾನಿ, ತೌಫಿಕ್ ಅಹ್ಮದ್, ಶಾಹೀದ್ ಆಫ್ರೀದ್, ಮಹಮ್ಮದ್ ತಹೇರ್ ಅಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News