August 29, 2026

ಈದ್ ಮಿಲಾದ್ ಸಂಭ್ರಮ: ಬಂಡ್ರಾಳದಲ್ಲಿ ಶಾಂತಿ, ಪ್ರೀತಿ ಮತ್ತು ಸಹೋದರತ್ವದ ಸಂದೇಶ ಸಾರಿದ ಬೃಹತ್ ಮೆರವಣಿಗೆ

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 26/08/2026

ಸುನ್ನಿ ಜಾಮಿಯಾ ಮಸೀದಿ, ಬಂಡ್ರಾಳ

ಗಂಗಾವತಿ: ಪ್ರವಾದಿ ಹಜರತ್ ಮುಹಮ್ಮದ್ ಪೈಗಂಬರರ ಜನ್ಮದಿನದ ಸ್ಮರಣಾರ್ಥ ಆಚರಿಸುವ ಪವಿತ್ರ ಈದ್ ಮಿಲಾದ್-ಉನ್-ನಬಿ ಹಬ್ಬವನ್ನು ಗಂಗಾವತಿ ತಾಲೂಕಿನ ಬಂಡ್ರಾಳ ಗ್ರಾಮದಲ್ಲಿ ಭಕ್ತಿ, ಸಡಗರ ಹಾಗೂ ಸೌಹಾರ್ದತೆಯೊಂದಿಗೆ ಆಚರಿಸಲಾಯಿತು.

ಸುನ್ನಿ ಜಾಮಿಯಾ ಮಸೀದಿ ಹಾಗೂ ನಾವು ಜವಾನ್ ಕಮಿಟಿ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಈದ್ ಮಿಲಾದ್ ಅಂಗವಾಗಿ ವಿಶೇಷ ಕಾರ್ಯಕ್ರಮ ಹಾಗೂ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮದ ವಿವಿಧ ಬಡಾವಣೆಗಳಿಂದ ಆಗಮಿಸಿದ್ದ ಮುಸ್ಲಿಂ ಬಾಂಧವರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.

ಈದ್ ಮಿಲಾದ್ ಪ್ರಯುಕ್ತ ನಡೆದ ಬೃಹತ್ ಮೆರವಣಿಗೆಯಲ್ಲಿ ನೂರಾರು ಮಂದಿ ಪಾಲ್ಗೊಂಡು ಪ್ರವಾದಿ ಮುಹಮ್ಮದ್ ಪೈಗಂಬರರ ಶಾಂತಿ, ಪ್ರೀತಿ, ಸಹೋದರತೆ, ಕರುಣೆ ಹಾಗೂ ಮಾನವೀಯತೆಯ ಸಂದೇಶಗಳನ್ನು ಸ್ಮರಿಸಿದರು. ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗುವ ಮೂಲಕ ಸೌಹಾರ್ದತೆ ಮತ್ತು ಭಾತೃತ್ವದ ಸಂದೇಶವನ್ನು ಸಾರಿತು.

ಪ್ರವಾದಿ ಹಜರತ್ ಮುಹಮ್ಮದ್ ಪೈಗಂಬರರು ಮಾನವೀಯ ಮೌಲ್ಯಗಳು, ಪರಸ್ಪರ ಗೌರವ, ಶಾಂತಿ ಮತ್ತು ಸಹೋದರತ್ವಕ್ಕೆ ನೀಡಿದ ಮಹತ್ವ ಇಂದಿನ ಸಮಾಜಕ್ಕೂ ದಾರಿದೀಪವಾಗಿದೆ. ಅವರ ಜೀವನಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಪರಸ್ಪರ ಪ್ರೀತಿಯನ್ನು ಬೆಳೆಸಬೇಕು ಎಂಬ ಸಂದೇಶವನ್ನು ಕಾರ್ಯಕ್ರಮದ ಸಂದರ್ಭದಲ್ಲಿ ನೀಡಲಾಯಿತು.

ಈ ಸಂದರ್ಭದಲ್ಲಿ ನನ್ನಸಾಬ್, ಮದರ್ ಸಾಬ್, ಭಾಷಾ ಕಾರಟಗಿ, ಖಾದರ್ ಭಾಷಾ, ಭಾಷಾ ಆನೆಗೊಂದಿ, ದಸ್ತಗಿರ್ ಸಾಬ್, ಪೀರ್ ಸಾಬ್, ಅಬ್ದುಲ್ ರಹಮತ್, ಮೆಹಬೂಬ್ ಸೇರಿದಂತೆ ಗ್ರಾಮದ ಗುರುಹಿರಿಯರು, ಯುವಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಈದ್ ಮಿಲಾದ್ ಹಬ್ಬವು ಪ್ರತಿಯೊಬ್ಬರ ಬದುಕಿನಲ್ಲಿ ಸುಖ, ಶಾಂತಿ, ಸಮೃದ್ಧಿ ಹಾಗೂ ನೆಮ್ಮದಿಯನ್ನು ತರಲಿ. ಸಮಾಜದಲ್ಲಿ ಸೌಹಾರ್ದತೆ, ಸಹಬಾಳ್ವೆ ಮತ್ತು ಮಾನವೀಯತೆ ಮತ್ತಷ್ಟು ಬಲಗೊಳ್ಳಲಿ ಎಂದು ಕಾರ್ಯಕ್ರಮದ ಆಯೋಜಕರು ಹಾರೈಸಿದರು

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News