🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 10/10/2026
ಗಂಗಾವತಿ: ವಿಶ್ವಪ್ರಸಿದ್ಧ ಅಂಜನಾದ್ರಿ ಬೆಟ್ಟದ ಪಾವಿತ್ರ್ಯತೆ ಕಾಪಾಡಲು ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ಮತ್ತು ಸರಬರಾಜಿಗೆ ಕಡಿವಾಣ ಹಾಕಬೇಕು ಎಂದು ಮಲ್ಲಾಪುರ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಕಪ್ಪ ತಂದೆ ರಾಮಕೃಷ್ಣ ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಹಮ್ಮಿಕೊಂಡ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ಅನೆಗೊಂದಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಅನೆಗೊಂದಿ, ಸಂಗಾಪುರ, ಮಲ್ಲಾಪುರ ಹಾಗೂ ಸಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಗಲ್ಲಿ-ಗಲ್ಲಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಜೋರಾಗಿ ನಡೆಯುತ್ತದೆ. ಅಲ್ಲದೆ, ಎಂಆರ್ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿರುವ ಆರೋಪಗಳೂ ಕೇಳಿಬರುತ್ತಿವೆ. ಅಂಗಡಿಗಳು, ಡಾಬಾಗಳು ಹಾಗೂ ರೆಸಾರ್ಟ್ಗಳಲ್ಲಿ ಮದ್ಯ ಸರಬರಾಜು ಮಾಡಲಾಗುತ್ತಿದೆ. ಈ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಹನುಮ ಜನ್ಮಸ್ಥಳವೆಂದು ಪ್ರಸಿದ್ಧಿ ಪಡೆದಿರುವ ಅಂಜನಾದ್ರಿ ಬೆಟ್ಟವು ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದ್ದು, ಪ್ರತಿದಿನ ಸಾವಿರಾರು ಭಕ್ತರು ಹಾಗೂ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಂತಹ ಪವಿತ್ರ ಕ್ಷೇತ್ರದ ಸುತ್ತಮುತ್ತ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವುದು ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುವ ಸಾಧ್ಯತೆಯಿದೆ. ಹೀಗಾಗಿ ತಿರುಪತಿ, ಮಂತ್ರಾಲಯ ಹಾಗೂ ಧರ್ಮಸ್ಥಳದ ಮಾದರಿಯಲ್ಲಿ ಅಂಜನಾದ್ರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮದ್ಯ ಮಾರಾಟ ಮತ್ತು ಸರಬರಾಜಿಗೆ ನಿರ್ಬಂಧ ವಿಧಿಸುವ ಕುರಿತು ಸರ್ಕಾರ ಗಂಭೀರವಾಗಿ ಚಿಂತಿಸಬೇಕಾಗಿ ಎಂದು ಮನವಿ ಮಾಡಿದ್ದಾರೆ. ಅಕ್ರಮ ಮದ್ಯ ಮಾರಾಟದಿಂದ ಗ್ರಾಮೀಣ ಪ್ರದೇಶಗಳಲ್ಲಿ ಕುಟುಂಬ ಕಲಹಗಳು ಹೆಚ್ಚಾಗುವ ಆತಂಕವಿದೆ. ಮಹಿಳೆಯರು, ವೃದ್ಧರು ಹಾಗೂ ಮಕ್ಕಳ ಜೀವನದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದ್ದು, ಜನರ ಆರ್ಥಿಕ ಸ್ಥಿತಿಗೂ ಹೊಡೆತ ಬೀಳುತ್ತಿದೆ. ಕುಡಿತದ ಚಟದಿಂದ ಸಾಮಾಜಿಕ ಶಾಂತಿ ಹದಗೆಡುವ ಸಾಧ್ಯತೆಯೂ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ದೇವಸ್ಥಾನ ಅಭಿವೃದ್ಧಿಗೆ ನಿಲ೯ಕ್ಷ್ಯ : ಪವಿತ್ರವಾಗಿರುವ ಅಂಜನಾದ್ರಿ ಬೆಟ್ಟದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮುಂದಾಗದೆ ಸರಕಾರ ಆದಾಯದ ಗುರಿಗೆ ಮಾತ್ರ ಆದ್ಯತೆ ನೀಡುತ್ತಿದೆ. ಸಾರ್ವಜನಿಕರ ಆರೋಗ್ಯ ದೃಷ್ಠಿಯಿಂದ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಧಾರ್ಮಿಕ ಕ್ಷೇತ್ರದ ಪಾವಿತ್ರ್ಯತೆಯ ರಕ್ಷಣೆ ಮಾಡುವುದು ಗಮನದಲ್ಲಿಟ್ಟುಕೊಳ್ಳದೆ ಜಿಲ್ಲಾಡಳಿತ ನಿಲ೯ಕ್ಷ ಮಾಡುತ್ತಿದೆ. ಆದಾಯಕ್ಕೆ ತಕ್ಕಂತೆ ಅಭಿವೃದ್ಧಿ ಮಾಡದೆ ಅಭಿವೃದ್ಧಿ ಮಾಡಲು ಕಡಗಣನೆ ಮಾಡಿದೆ.ಅಂಜನಾದ್ರಿ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಸರಬರಾಜು ತಡೆಯಲು ಸಂಬಂಧಪಟ್ಟ ಇಲಾಖೆಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ರಾಕಪ್ಪ ತಂದೆ ರಾಮಕೃಷ್ಣ ಆಗ್ರಹಿಸಿದ್ದಾರೆ.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

More Stories
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ನ್ಯಾಯಾಧೀಶ ನಾಗೇಶ ಪಾಟೀಲ್
ಉಡಮಕಲ್ ಗ್ರಾಮದಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ
ಮಾಹಿತಿ ನೀಡದ ಐವರು ಅಧಿಕಾರಿಗಳಿಗೆ ಕಲಬುರಗಿ ಮಾಹಿತಿ ಆಯೋಗದಿಂದ ₹50 ಸಾವಿರ ದಂಡ