October 16, 2026

ಕೊಪ್ಪಳದಲ್ಲಿ ಭೀಕರ ಲಾರಿ ಬೆಂಕಿ ಅವಘಡ – ಚಾಲಕ ಕಿಟಕಿಯಿಂದ ಜಿಗಿದು ಪ್ರಾಣಾಪಾಯದಿಂದ ಪಾರು

ಟಿ ಪಬ್ಲಿಕ್ ನ್ಯೂಸ್ 
ದಿ:25/04/2026

ಕೊಪ್ಪಳ: ನಗರದ SFS School ಸಮೀಪ ಇಂದು ಜಲ್ಲಿ ಕಲ್ಲು ಸಾಗಿಸುತ್ತಿದ್ದ ಲಾರಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಆತಂಕದ ವಾತಾವರಣ ನಿರ್ಮಾಣವಾಯಿತು. ಇಂಜಿನ್ ಅಧಿಕ ಬಿಸಿಯಾದ ಪರಿಣಾಮ ಲಾರಿಯ ಮುಂಭಾಗ ದಗದಗನೆ ಹೊತ್ತಿ ಉರಿಯಲು ಆರಂಭಿಸಿತು.

ಬೆಂಕಿ ಕಾಣಿಸಿಕೊಂಡ ತಕ್ಷಣ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಾಲಕ ವಾಹನ ನಿಲ್ಲಿಸಲು ಯತ್ನಿಸಿದ್ದಾನೆ. ಆದರೆ ಆ ಸಂದರ್ಭದಲ್ಲಿ ಲಾರಿಯ ಡೋರ್ ಲಾಕ್ ಆಗಿದ್ದರಿಂದ ಹೊರಬರಲು ಸಾಧ್ಯವಾಗದೆ, ಕ್ಷಣಮಾತ್ರದಲ್ಲಿ ನಿರ್ಧಾರ ತೆಗೆದುಕೊಂಡು ಕಿಟಕಿಯಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಘಟನೆ ಗಮನಿಸಿದ ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದು ದೊಡ್ಡ ಅನಾಹುತವನ್ನು ತಪ್ಪಿಸಿದರು.

ಅವಘಡದಲ್ಲಿ ಲಾರಿಗೆ ಭಾಗಶಃ ಹಾನಿಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದು ಸಮಾಧಾನದ ವಿಷಯವಾಗಿದೆ. ಸಮಯೋಚಿತ ಕ್ರಮದಿಂದ ಮತ್ತಷ್ಟು ಅಪಾಯ ತಪ್ಪಿದ ಘಟನೆ ಇದಾಗಿದೆ.

ಸ್ಥಳದಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿದ್ದರೂ, ಅಧಿಕಾರಿಗಳ ತ್ವರಿತ ಕ್ರಮದಿಂದ ಪರಿಸ್ಥಿತಿ ಸಹಜಗೊಂಡಿತು. ಘಟನೆಯ ಕುರಿತು ಹೆಚ್ಚಿನ ಪರಿಶೀಲನೆ ನಡೆಯುತ್ತಿದೆ.

ನೈಜ ಸುದ್ದಿಗಾಗಿ ಟಿ ಪಬ್ಲಿಕ್ ನ್ಯೂಸ್ 

error: Content is protected !!