May 30, 2026

ಜಿಲ್ಲಾಧಿಕಾರಿಗಳ ಕಠಿಣ ಎಚ್ಚರಿಕೆ: ಕನಕಗಿರಿ ಉತ್ಸವ ಸಿದ್ಧತೆಯಲ್ಲಿ ಯಾವುದೇ ನಿರ್ಲಕ್ಷ್ಯ ಸಹಿಸಲಾಗುವುದಿಲ್ಲ!

ಸಮಿತಿಗಳ ಮಂದಗತಿ ವಿರುದ್ಧ ಗರಂ: ತಕ್ಷಣ ಚುರುಕುಗೊಳ್ಳಲು ಅಧಿಕಾರಿಗಳಿಗೆ ಖಡಕ್ ನಿರ್ದೇಶನ

ಟಿ ಪಬ್ಲಿಕ್ ನ್ಯೂಸ್
ಕೊಪ್ಪಳ, ಮೇ 04

ಸಭೆಯ ಭಾವಚಿತ್ರ

ಕನಕಗಿರಿ: ಉತ್ಸವ-2026ರ ಸಿದ್ಧತೆಯಲ್ಲಿ ಯಾವುದೇ ರೀತಿಯ ಸುಸ್ತು, ನಿರ್ಲಕ್ಷ್ಯ ಅಥವಾ ಕಾಲಹರಣ ಸಹಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ವಿವಿಧ ಸಮಿತಿಗಳಿಗೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದ್ದರೂ, ಕಾರ್ಯಗತಿಯಲ್ಲಿ ನಿರೀಕ್ಷಿತ ವೇಗ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಉತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿರುವ ಹಿನ್ನೆಲೆಯಲ್ಲಿ ಎಲ್ಲಾ ಸಮಿತಿಗಳು ಕಾಲಮಿತಿಯೊಳಗೆ ಕೆಲಸ ಪೂರ್ಣಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಉತ್ಸವದ ವೇಳೆ ಕನಕಗಿರಿ ಸಂಪೂರ್ಣ ಹಬ್ಬದ ವಾತಾವರಣದಲ್ಲಿ ಮಿಂಚಬೇಕು. ಮೆರವಣಿಗೆ ಮಾರ್ಗಗಳು ಸೇರಿದಂತೆ ಎಲ್ಲೆಡೆ ವಿದ್ಯುತ್ ದೀಪಾಲಂಕಾರ ಕಡ್ಡಾಯವಾಗಿ ಅಳವಡಿಸಬೇಕು. ಜಾನಪದ ಕಲಾ ತಂಡಗಳ ಹಾಗೂ ಕಲಾವಿದರ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ಮತ್ತು ತಕ್ಷಣ ಪೂರ್ಣಗೊಳ್ಳಬೇಕು ಎಂದು ಮೆರವಣಿಗೆ ಮತ್ತು ಸಾಂಸ್ಕೃತಿಕ ಸಮಿತಿಗೆ ತಾಕೀತು ಮಾಡಿದರು.

ಗಣ್ಯರು, ಕಲಾವಿದರು, ಪತ್ರಕರ್ತರು ಸೇರಿದಂತೆ ಎಲ್ಲ ಆಹ್ವಾನಿತರಿಗೆ ವಸತಿ ಮತ್ತು ಆಹಾರದ ಸಮರ್ಪಕ ವ್ಯವಸ್ಥೆ ಮಾಡಬೇಕು. ಸಾರ್ವಜನಿಕರಿಗೆ ನೀಡುವ ಆಹಾರ ಮತ್ತು ಕುಡಿಯುವ ನೀರಿನ ಗುಣಮಟ್ಟದಲ್ಲಿ ಯಾವುದೇ ರಾಜಿ ನಡೆಯಬಾರದು ಎಂದು ಆಹಾರ ಸಮಿತಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕ್ರೀಡಾ ವಿಭಾಗದಲ್ಲೂ ನಿರ್ಲಕ್ಷ್ಯ ತೋರಬಾರದು. ಕುಸ್ತಿ, ಕಬಡ್ಡಿ, ವಾಲಿಬಾಲ್ ಸ್ಪರ್ಧೆಗಳನ್ನು ಉನ್ನತ ಮಟ್ಟದಲ್ಲಿ ಆಯೋಜಿಸಿ ಹೆಸರಾಂತ ಕ್ರೀಡಾಪಟುಗಳನ್ನು ಭಾಗವಹಿಸುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವೇದಿಕೆ, ಪೇಂಡಾಲ್, ಪಾರ್ಕಿಂಗ್, ಬ್ಯಾರಿಕೇಡಿಂಗ್ ಸೇರಿದಂತೆ ಎಲ್ಲಾ ಮೂಲಭೂತ ವ್ಯವಸ್ಥೆಗಳು ದೋಷರಹಿತವಾಗಿರಬೇಕು. ಯಾವುದೇ ಅವ್ಯವಸ್ಥೆ ಕಂಡುಬಂದರೆ ಸಂಬಂಧಿತ ಅಧಿಕಾರಿಗಳೇ ಹೊಣೆಗಾರರು ಎಂದು ಎಚ್ಚರಿಸಿದರು.

ಈ ಬಾರಿ ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಪ್ರದರ್ಶನ ಮಳಿಗೆಗಳನ್ನು ಭವ್ಯವಾಗಿ ನಿರ್ಮಿಸಬೇಕು. ಮಹಿಳಾ ಸ್ವಸಹಾಯ ಸಂಘಗಳಿಗೆ ವ್ಯಾಪಾರ ಅವಕಾಶ ಕಲ್ಪಿಸುವ ಮೂಲಕ ಉತ್ಸವವನ್ನು ಜನಪರವಾಗಿಸಬೇಕು ಎಂದು ಹೇಳಿದರು.

ಸಾರ್ವಜನಿಕರ ಹೆಚ್ಚಿನ ಭಾಗವಹಿಸುವಿಕೆಗಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಬೇಕು. ಪ್ರಚಾರ ಕಾರ್ಯವನ್ನು ತೀವ್ರಗೊಳಿಸಿ ಉತ್ಸವವನ್ನು ಯಶಸ್ವಿಗೊಳಿಸುವುದು ಎಲ್ಲ ಸಮಿತಿಗಳ ಜವಾಬ್ದಾರಿ ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್ ಅರಸಿದ್ದಿ ಅವರು, ಭದ್ರತಾ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗಬಾರದು. ಗಣ್ಯರು ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಸಿಇಒ ವರ್ಣಿತ್ ನೇಗಿ ಅವರು, ತಾಲೂಕು ಮಟ್ಟದ ಅಧಿಕಾರಿಗಳು ಸಮನ್ವಯದ ಕೊರತೆಯನ್ನು ತೋರಬಾರದು. ಗ್ರಾಮೀಣ ಭಾಗದಲ್ಲೂ ಉತ್ಸವದ ಸಂಭ್ರಮ ಮೂಡಿಸುವ ಜವಾಬ್ದಾರಿ ಸ್ಥಳೀಯ ಆಡಳಿತದ ಮೇಲಿದೆ ಎಂದು ಸ್ಪಷ್ಟಪಡಿಸಿದರು.

ಒಟ್ಟಾರೆ, ಕನಕಗಿರಿ ಉತ್ಸವದ ಸಿದ್ಧತೆಯಲ್ಲಿ ಯಾವುದೇ ಅಲಕ್ಷ್ಯ ಸಹಿಸದೇ, ಶಿಸ್ತುಬದ್ಧ ಹಾಗೂ ಭವ್ಯ ಆಯೋಜನೆಗಾಗಿ ಜಿಲ್ಲಾಡಳಿತ ಕಠಿಣ ನಿಲುವು ತಳೆದಿದೆ.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

About The Author

error: Content is protected !!