May 30, 2026

ಡೊನೇಷನ್ ದಂಧೆ ವಿರುದ್ಧ ಎಸ್‌ಎಫ್‌ಐ ಆಕ್ರೋಶ

🟥 ಟಿ ಪಬ್ಲಿಕ್ ನ್ಯೂಸ್ ಗಂಗಾವತಿ
ದಿನಾಂಕ : 07/06/2026

ಡೊನೇಷನ್ ದಂಧೆ ವಿರುದ್ಧ ಎಸ್‌ಎಫ್‌ಐ ಆಕ್ರೋಶ: ಶಿಕ್ಷಣವನ್ನು ವ್ಯಾಪಾರ ಮಾಡಿದ ಖಾಸಗಿ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮಕ್ಕೆ  ಆಗ್ರಹ. ತಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ್

ಗಂಗಾವತಿ: ರಾಜ್ಯಾದ್ಯಂತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಅಕ್ರಮ ಡೊನೇಷನ್ ವಸೂಲಿ, ಪ್ರವೇಶ ದಂಧೆ ಹಾಗೂ ಶಿಕ್ಷಣದ ವ್ಯಾಪಾರೀಕರಣವನ್ನು ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಗಂಗಾವತಿ ತಾಲೂಕು ಸಮಿತಿಯು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ತೀವ್ರ ಪ್ರತಿಭಟನೆ ನಡೆಸಿತು.

ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ ಮಾತನಾಡಿ, “2026-27ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿ ಪ್ರಕ್ರಿಯೆಯನ್ನು ಹಲವಾರು ಖಾಸಗಿ ಶಾಲೆಗಳು ಈಗಾಗಲೇ ಮುಕ್ತಾಯಗೊಳಿಸಿದ್ದು, ಲಕ್ಷಾಂತರ ರೂಪಾಯಿ ಡೊನೇಷನ್ ಹೆಸರಿನಲ್ಲಿ ಪಾಲಕರನ್ನು ನಿರ್ದಯವಾಗಿ ದೋಚಲಾಗುತ್ತಿದೆ. ಶಿಕ್ಷಣ ಹಕ್ಕು ಕಾಯ್ದೆ-2009 ಹಾಗೂ ಕರ್ನಾಟಕ ಶಿಕ್ಷಣ ಕಾಯ್ದೆ-1983 ಅನ್ನು ಬಹಿರಂಗವಾಗಿ ಉಲ್ಲಂಘಿಸಿ ಶಿಕ್ಷಣ ಸಂಸ್ಥೆಗಳು ಹಗಲು ದರೋಡೆ ನಡೆಸುತ್ತಿವೆ. ಆದರೆ ಸಂಬಂಧಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು ಅತ್ಯಂತ ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿದ್ದು, ಮತ್ತೊಂದೆಡೆ ಅಣಬೆಗಳಂತೆ ಖಾಸಗಿ ಶಾಲೆಗಳು ತಲೆ ಎತ್ತುತ್ತಿವೆ. ಬಡ, ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಶಿಕ್ಷಣವೇ ಅಸಾಧ್ಯವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು.

ಇನ್ನೂ ಅನಧಿಕೃತ ಟ್ಯೂಷನ್ ಸೆಂಟರ್‌ಗಳು, ಸಿ.ಬಿ.ಎಸ್.ಇ, ಸಿ.ಎಸ್.ಸಿ, ಜೆಇಇ, ನೀಟ್, ಸಿಇಟಿ ತರಬೇತಿ ಹೆಸರಿನಲ್ಲಿ ನಿಯಮಬಾಹಿರ ಶಿಕ್ಷಣ ದಂಧೆ ನಡೆಯುತ್ತಿದ್ದರೂ ಶಿಕ್ಷಣ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.

ತಾಲೂಕು ಅಧ್ಯಕ್ಷ ನಾಗರಾಜ್.ಯು ಮಾತನಾಡಿ, “ಶಿಕ್ಷಣ ಹಕ್ಕು ಕಾಯ್ದೆ ಸೆಕ್ಷನ್ 13(2)(ಬಿ) ಪ್ರಕಾರ ಪ್ರಾಥಮಿಕ ತರಗತಿಗಳಿಗೆ ಪ್ರವೇಶ ಪರೀಕ್ಷೆ ನಡೆಸುವುದು ಅಪರಾಧ. ಆದರೂ ಅನೇಕ ಖಾಸಗಿ ಶಾಲೆಗಳು ಪ್ರವೇಶ ಪರೀಕ್ಷೆ ನಡೆಸಿ, ಸಾವಿರಾರು ರೂಪಾಯಿ ಹಣ ವಸೂಲಿ ಮಾಡುತ್ತಿವೆ. ಜೊತೆಗೆ ಶಾಲಾ ಬ್ಯಾಗ್, ನೋಟ್‌ಬುಕ್, ಶೂ, ಯೂನಿಫಾರ್ಮ್, ಜ್ಯಾಮಿಟ್ರಿ ಬಾಕ್ಸ್ ಸೇರಿದಂತೆ ಎಲ್ಲಾ ವಸ್ತುಗಳನ್ನು ಶಾಲೆಯಲ್ಲೇ ಖರೀದಿಸಬೇಕೆಂದು ಒತ್ತಾಯಿಸಿ ಪಾಲಕರ ಮೇಲೆ ಆರ್ಥಿಕ ಭಾರ ಹೇರುತ್ತಿವೆ. ಶಿಕ್ಷಣ ಸಂಸ್ಥೆಗಳು ಶಾಲೆಗಿಂತ ವ್ಯಾಪಾರ ಮಳಿಗೆಗಳಾಗಿ ಪರಿವರ್ತನೆಯಾಗಿವೆ” ಎಂದು ದೂರಿದರು.

ಸರ್ಕಾರದ ಆದೇಶದ ಪ್ರಕಾರ ಶಾಲೆಗಳ ಶುಲ್ಕ ವಿವರ, ಶಿಕ್ಷಕರ ಸಂಖ್ಯೆ, ಶೌಚಾಲಯ, ಕ್ರೀಡಾಂಗಣ ಸೇರಿದಂತೆ ಮೂಲಭೂತ ಮಾಹಿತಿಯನ್ನು ಶಾಲಾ ಆವರಣದಲ್ಲಿ ಫ್ಲೆಕ್ಸ್ ಮೂಲಕ ಪ್ರದರ್ಶಿಸಬೇಕಿದ್ದರೂ ಬಹುತೇಕ ಖಾಸಗಿ ಶಾಲೆಗಳು ನಿಯಮ ಪಾಲಿಸಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಡಿಡಿಪಿಐ ಅಧಿಕಾರಿಗಳು ಸೂಕ್ತ ಪರಿಶೀಲನೆ ನಡೆಸದೆ ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸಿ ಡೊನೇಷನ್ ವಸೂಲಿ ಮಾಡುತ್ತಿರುವ ಹಾಗೂ ಅಕ್ರಮ ಪ್ರವೇಶ ಪರೀಕ್ಷೆ ನಡೆಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾನ್ಯತೆ ರದ್ದುಪಡಿಸಿ, ಕಾನೂನು ಪ್ರಕಾರ ದಂಡ ಮತ್ತು ಶಿಕ್ಷೆ ವಿಧಿಸಬೇಕು. ಅನಧಿಕೃತ ಟ್ಯೂಷನ್ ಸೆಂಟರ್‌ಗಳನ್ನು ತಕ್ಷಣ ಬಂದ್ ಮಾಡಬೇಕು. ಜೊತೆಗೆ “ಜಿಲ್ಲಾ ಶಿಕ್ಷಣ ರೆಗ್ಯುಲೆಟಿಂಗ್ ಪ್ರಾಧಿಕಾರ”ವನ್ನು ತಕ್ಷಣ ರಚಿಸಿ ಪಾಲಕರ, ವಿದ್ಯಾರ್ಥಿಗಳ ಹಾಗೂ ಶಿಕ್ಷಣ ಇಲಾಖೆಯ ಜಂಟಿ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.

ಮನವಿಗೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ್ ಮಾತನಾಡಿ, “ಡೊನೇಷನ್ ವಸೂಲಿ ಮಾಡುತ್ತಿರುವ ಹಾಗೂ ಶುಲ್ಕ ವಿವರಗಳನ್ನು ಫ್ಲೆಕ್ಸ್ ಮೂಲಕ ಪ್ರಕಟಿಸದ ಶಾಲೆಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ತಾಲೂಕು ಅಧ್ಯಕ್ಷ ನಾಗರಾಜ್.ಯು, ಕೃಷಿಕೂಲಿಕಾರ ಸಂಘಟನೆಯ ಜಿಲ್ಲಾ ಜಂಟಿ ಕಾರ್ಯದರ್ಶಿ ಬಾಳಪ್ಪ ಹುಲಿಹೈದರ್, ಎಸ್‌ಎಫ್‌ಐ ಜಂಟಿ ಕಾರ್ಯದರ್ಶಿ ಬಸಯ್ಯ, ಸದಸ್ಯರಾದ ಶರಣಬಸವ ಬಾದ್ನಟ್ಟಿ, ದೊಡ್ಡಬಸವ, ಮುಖಂಡರಾದ ಯಂಕಣ್ಣ, ಅಲ್ತಾಫ್, ಕಾರ್ತಿಕ್, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಎಸ್‌ಎಫ್‌ಐ ಪ್ರಮುಖ ಹಕ್ಕೊತ್ತಾಯಗಳು:

1. ಡೊನೇಷನ್ ನಿಯಂತ್ರಣಕ್ಕೆ “ಜಿಲ್ಲಾ ಶಿಕ್ಷಣ ರೆಗ್ಯುಲೆಟಿಂಗ್ ಪ್ರಾಧಿಕಾರ”ವನ್ನು ತಕ್ಷಣ ರಚಿಸಬೇಕು.

2. ಡೊನೇಷನ್ ವಸೂಲಿ ಮಾಡುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.

3. ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ ನೇತೃತ್ವದಲ್ಲಿ ಪಾಲಕರು, ವಿದ್ಯಾರ್ಥಿ ಸಂಘಟನೆಗಳು ಹಾಗೂ ಶಿಕ್ಷಣ ಸಂಸ್ಥೆಗಳ ಜಂಟಿ ಸಭೆ ಕರೆಯಬೇಕು.

4. ಸರ್ಕಾರ ನಿಗದಿಪಡಿಸಿದ ಶುಲ್ಕ ವಿವರಗಳನ್ನು ಮಾಧ್ಯಮ ಹಾಗೂ ಕರಪತ್ರಗಳ ಮೂಲಕ ಸಾರ್ವಜನಿಕರಿಗೆ ಪ್ರಕಟಿಸಬೇಕು.

5. ಶಾಲೆಗಳು ಪ್ರತಿತಿಂಗಳು ಪಾಲಕರ ಸಭೆ ನಡೆಸುವುದನ್ನು ಕಡ್ಡಾಯಗೊಳಿಸಬೇಕು.

6. ಶಾಲಾ-ಕಾಲೇಜುಗಳ ಮುಂದೆ ಶುಲ್ಕದ ವಿವರಗಳನ್ನು ಫ್ಲೆಕ್ಸ್ ಮೂಲಕ ಕಡ್ಡಾಯವಾಗಿ ಪ್ರದರ್ಶಿಸಬೇಕು.

7. ನಿಯಮ ಮೀರಿ ಡೊನೇಷನ್ ಪಡೆದ ಶಾಲೆಗಳ ಮಾನ್ಯತೆ ರದ್ದುಪಡಿಸಿ ದಂಡ ವಿಧಿಸಬೇಕು.

8. ಅನಧಿಕೃತ ಖಾಸಗಿ ಶಾಲಾ-ಕಾಲೇಜುಗಳು ಹಾಗೂ ಟ್ಯೂಷನ್ ಸೆಂಟರ್‌ಗಳನ್ನು ಬಂದ್ ಮಾಡಬೇಕು.

9. ಡೊನೇಷನ್ ಹಾವಳಿ ತಡೆಗಟ್ಟಲು ವಿಶೇಷ ದೂರು ಸಮಿತಿ ರಚಿಸಬೇಕು.

10. ಶಿಕ್ಷಣವನ್ನು ವ್ಯಾಪಾರವನ್ನಾಗಿಸಿರುವ ಖಾಸಗಿ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

About The Author

error: Content is protected !!