May 30, 2026

“ಬಡವರ ಹೊಟ್ಟೆ ಮೇಲೆ ಬುಲ್ಡೋಜರ್ ಆಡಳಿತ” : ಬೀದಿ ಬದಿ ವ್ಯಾಪಾರಿಗಳ ಪರ ಡಿಎಸ್ಎಸ್ ಭೀಮವಾದ ಸಂಘಟನೆಯ ಕಿಡಿಕಾರಿಕೆ, ಮೇ 19ರಂದು ನಗರಸಭೆ ಎದುರು ಬೃಹತ್ ಹೋರಾಟ

🟥 ಟಿ ಪಬ್ಲಿಕ್ ನ್ಯೂಸ್ ಗಂಗಾವತಿ
ದಿನಾಂಕ : 18/05/2026

ಗಂಗಾವತಿ: “ಪಾದಚಾರಿ ರಸ್ತೆ ತೆರವು” ಎಂಬ ಹೆಸರಿನಲ್ಲಿ ಬಡ ಬೀದಿ ಬದಿ ವ್ಯಾಪಾರಿಗಳನ್ನು ನಗರದ ಮಧ್ಯಭಾಗದಿಂದ ಒಕ್ಕಲೆಬ್ಬಿಸುವ ಅಮಾನುಷ ಕ್ರಮವನ್ನು ಖಂಡಿಸಿ, ಡಿಎಸ್ಎಸ್ ಭೀಮವಾದ ಸಂಘಟನೆಯ ವತಿಯಿಂದ ಮೇ 19ರಂದು ನಗರಸಭೆ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಮರಿಸ್ವಾಮಿ ಬರಗೂರು ಎಚ್ಚರಿಕೆ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆ ಅಧಿಕಾರಿಗಳು ಬಡ ವ್ಯಾಪಾರಿಗಳ ಬದುಕಿನ ಮೇಲೆಯೇ ಕ್ರೂರ ಆಡಳಿತ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

“ನಗರದಲ್ಲಿ ಪ್ರಭಾವಿ ವ್ಯಕ್ತಿಗಳು ಪಾದಚಾರಿ ರಸ್ತೆಯನ್ನು ಅತಿಕ್ರಮಿಸಿಕೊಂಡಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳು, ಹೊಟ್ಟೆಪಾಡಿಗಾಗಿ ಬೀದಿ ಬದಿಯಲ್ಲಿ ಚಹಾ, ತಿಂಡಿ, ಸಣ್ಣಪುಟ್ಟ ವ್ಯಾಪಾರ ನಡೆಸುವ ಬಡ ಕುಟುಂಬಗಳನ್ನೇ ಗುರಿಯಾಗಿಸಿಕೊಂಡಿದ್ದಾರೆ. ಇದು ಸ್ಪಷ್ಟವಾದ ದ್ವಂದ್ವ ನೀತಿ ಹಾಗೂ ಬಡವರ ಮೇಲಿನ ದೌರ್ಜನ್ಯ” ಎಂದು ಕಿಡಿಕಾರಿದರು.

ನ್ಯಾಯಾಲಯದ ಆದೇಶವನ್ನು ನೆಪವಾಗಿಸಿಕೊಂಡು ಬಡವರ ಜೀವನೋಪಾಯ ಕಸಿದುಕೊಳ್ಳುವುದು ಸರಿಯಲ್ಲ. ಮೊದಲು ಪರ್ಯಾಯ ಜಾಗ ಗುರುತಿಸಿ, ವ್ಯಾಪಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಗಂಗಾವತಿ ನಗರದಲ್ಲಿ 1600ಕ್ಕೂ ಅಧಿಕ ಕುಟುಂಬಗಳು ಬೀದಿ ಬದಿ ವ್ಯಾಪಾರವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದು, ನಗರಸಭೆಯ ಏಕಪಕ್ಷೀಯ ಕ್ರಮದಿಂದ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ನಗರಸಭೆ ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದ ಅವರು, ಮೇ 19ರಂದು ನಗರಸಭೆ ಎದುರು ಸಾವಿರಾರು ಬೀದಿ ಬದಿ ವ್ಯಾಪಾರಿಗಳು ಹಾಗೂ ಸಂಘಟನೆಯ ಕಾರ್ಯಕರ್ತರು ಭಾಗವಹಿಸುವ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬೀದಿ ಬದಿ ವ್ಯಾಪಾರಿಗಳಾದ ರಾಘವೇಂದ್ರ ಬೋವಿ, ಲಕ್ಷಮ್ಮ, ಅನ್ನಪೂರ್ಣ, ಗೌಸ್, ಶಿವಕುಮಾರ, ರಾಜಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

About The Author

error: Content is protected !!