May 30, 2026

ಪಿಂಚಣಿ ವಿಳಂಬದಿಂದ ಅಶಕ್ತರ ಬದುಕು ಸಂಕಷ್ಟಕ್ಕೆ: ಸರ್ಕಾರದ ವಿರುದ್ಧ ಗುಡಿಕೋಟಿ ಆಕ್ರೋಶ

🟥 ಟಿ ಪಬ್ಲಿಕ್ ನ್ಯೂಸ್ ಗಂಗಾವತಿ
ದಿನಾಂಕ : 20/05/2026

ಗಂಗಾವತಿ: ರಾಜ್ಯ ಸರ್ಕಾರ ಕಳೆದ ಎರಡು-ಮೂರು ತಿಂಗಳಿಂದ ಅಂಗವಿಕಲರು, ವೃದ್ಧರು, ವಿಧವಾ ಮಹಿಳೆಯರು ಸೇರಿದಂತೆ ಅಶಕ್ತ ಸಮುದಾಯಗಳಿಗೆ ನೀಡಲಾಗುವ ವಿವಿಧ ಪಿಂಚಣಿ ಯೋಜನೆಗಳ ಹಣವನ್ನು ಬಿಡುಗಡೆ ಮಾಡದೇ ನಿರ್ಲಕ್ಷ್ಯ ವಹಿಸಿದೆ ಎಂದು ಕರವೇ (ಪ್ರವೀಣಕುಮಾರ ಶೆಟ್ಟಿ ಬಣ) ಅಂಗವಿಕಲರ ಘಟಕದ ತಾಲೂಕು ಅಧ್ಯಕ್ಷ ಅಶೋಕ ಗುಡಿಕೋಟಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಮಾತನಾಡಿದ ಅವರು, “ಸಂದ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ವಿಧವಾ ವೇತನ, ಮನಸ್ವಿನಿ ಹಾಗೂ ಅಂಗವಿಕಲರ ಪಿಂಚಣಿ ಯೋಜನೆಗಳನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಎರಡು-ಮೂರು ತಿಂಗಳಿನಿಂದ ಪಿಂಚಣಿ ಹಣ ಬಾರದ ಕಾರಣ ದಿನನಿತ್ಯದ ಬದುಕೇ ದುಸ್ತರವಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಚುನಾವಣಾ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಜಾರಿಗೆ ಹೆಚ್ಚಿನ ಆದ್ಯತೆ ನೀಡಿದರೂ, ಸಮಾಜದ ಅತ್ಯಂತ ದುರ್ಬಲ ವರ್ಗವಾದ ಅಂಗವಿಕಲರು, ವೃದ್ಧರು ಹಾಗೂ ಅಶಕ್ತರ ಸಮಸ್ಯೆಗಳತ್ತ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು. “ಚುನಾವಣೆಯಲ್ಲಿ ಶೇ.90ರಷ್ಟು ಅಂಗವಿಕಲರು ಮತ್ತು ಅಶಕ್ತರು ಮತ ಚಲಾಯಿಸಿ ಸರ್ಕಾರದ ಗೆಲುವಿಗೆ ಕಾರಣರಾಗಿದ್ದಾರೆ. ಆದರೆ ಅವರ ಬದುಕಿಗೆ ಅವಶ್ಯಕವಾಗಿರುವ ಪಿಂಚಣಿಯನ್ನೇ ಸರಿಯಾಗಿ ನೀಡದಿರುವುದು ಸರ್ಕಾರದ ಮಾನವೀಯತೆ ಇಲ್ಲದ ನಡೆ” ಎಂದು ಟೀಕಿಸಿದರು.

ಪ್ರತಿ ವರ್ಷವೂ ಪಿಂಚಣಿ ವಿಳಂಬವಾಗುವುದು ಸಾಮಾನ್ಯವಾಗಿದ್ದು, ಸಮಸ್ಯೆ ಉದ್ಭವಿಸಿದಾಗ ಮಾತ್ರ ಸಂಘಟನೆಗಳು ಮನವಿ, ಧರಣಿ ಹಾಗೂ ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸರ್ಕಾರ ಶಾಶ್ವತ ಪರ್ಯಾಯ ವ್ಯವಸ್ಥೆ ರೂಪಿಸಿ, ಪ್ರತಿ ತಿಂಗಳು ನಿಯಮಿತವಾಗಿ ಪಿಂಚಣಿ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

“ಪ್ರಸ್ತುತ ನೀಡಲಾಗುತ್ತಿರುವ ಪಿಂಚಣಿ ಹಣವೇ ದುಬಾರಿ ಜೀವನದಲ್ಲಿ ಸಾಲದ ಪರಿಸ್ಥಿತಿಯಲ್ಲಿದೆ. ಅದರಲ್ಲೂ ಎರಡು-ಮೂರು ತಿಂಗಳವರೆಗೆ ಹಣ ಬಿಡುಗಡೆ ಮಾಡದೇ ಇರುವುದು ಅಶಕ್ತ ಕುಟುಂಬಗಳನ್ನು ಬೀದಿಗೆ ತಳ್ಳುವಂತಾಗಿದೆ. ಸರ್ಕಾರ ತಕ್ಷಣ ಬಾಕಿ ಇರುವ ಪಿಂಚಣಿ ಬಿಡುಗಡೆ ಮಾಡಿ, ಪಿಂಚಣಿ ಮೊತ್ತವನ್ನೂ ಹೆಚ್ಚಿಸಿ ಗೌರವಯುತ ಬದುಕಿಗೆ ಅವಕಾಶ ಕಲ್ಪಿಸಬೇಕು” ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, “ನುಡಿದಂತೆ ನಡೆದ ಸರ್ಕಾರ ಎಂಬ ಘೋಷಣೆ ಇದೀಗ ಕೇವಲ ಮಾತಾಗಿಬಿಟ್ಟಿದೆ” ಎಂದು ವಾಗ್ದಾಳಿ ನಡೆಸಿದರು.

ಮಾಹಿತಿಗಾಗಿ:
ಅಶೋಕ ಗುಡಿಕೋಟಿ
ತಾಲೂಕ ಅಧ್ಯಕ್ಷರು, ಅಂಗವಿಕಲರ ಘಟಕ
ಕರವೇ (ಪ್ರವೀಣಕುಮಾರ ಶೆಟ್ಟಿ ಬಣ), ಗಂಗಾವತಿ
ಮೊ: 9972723406

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

About The Author

error: Content is protected !!