May 30, 2026

ಪ್ರಯತ್ನಕ್ಕೆ ಪ್ರತಿಫಲ ಖಂಡಿತ ಇದ್ದೇ ಇರುತ್ತದೆ: ಕೆ. ಚನ್ನಬಸವ ಸ್ವಾಮಿಗಳು

🟥 ಟಿ ಪಬ್ಲಿಕ್ ನ್ಯೂಸ್ ಗಂಗಾವತಿ
ದಿನಾಂಕ :27/05/2026

ಸಿಬಿಎಸ್ ಉಚಿತ ಕೋಚಿಂಗ್ ಸೆಂಟರ್ 19ನೇ ವರ್ಷದ ತರಬೇತಿ ಸಮಾರೋಪ ಸಮಾರಂಭ

ಗಂಗಾವತಿ: ವಿದ್ಯಾರ್ಥಿಗಳು ಸದಾ ಸತತ ಅಭ್ಯಾಸಿಗಳಾಗಿರಬೇಕು. ಓದಿನ ಕಡೆಗೆ ಮಾತ್ರ ಗಮನಹರಿಸಿ, ಸಾಮಾಜಿಕ ಮಾಧ್ಯಮಗಳಿಂದ ದೂರವಿದ್ದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಶ್ರೀ ಚನ್ನಮಲ್ಲಿಕಾರ್ಜುನ ಟ್ರಸ್ಟ್ ಕಮಿಟಿಯ ಹಿರಿಯ ಸದಸ್ಯರಾದ ಕೆ. ಚನ್ನಬಸವ ಸ್ವಾಮಿಗಳು ಹೇಳಿದರು.

ನಗರದ ಶ್ರೀ ಚನ್ನಮಲ್ಲಿಕಾರ್ಜುನ ಮಠದ ಸಿಬಿಎಸ್ ಉಚಿತ ಕೋಚಿಂಗ್ ಸೆಂಟರ್ ವತಿಯಿಂದ ಆಯೋಜಿಸಿದ್ದ 19ನೇ ವರ್ಷದ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶ್ರೀಮಠವು ಯಾವುದೇ ಜಾತಿ, ಮತ, ಪಂಥಗಳಿಗೆ ಸೀಮಿತವಾಗದೆ ಎಲ್ಲ ವರ್ಗದ ಜನರಿಗೆ ಉಚಿತ ಅನ್ನದಾಸೋಹ ಹಾಗೂ ಜ್ಞಾನದಾಸೋಹದ ವ್ಯವಸ್ಥೆ ಮಾಡುತ್ತಿದ್ದು, ಈ ಭಾಗದಲ್ಲಿ ಇಂತಹ ಸೇವಾ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿರುವ ಏಕೈಕ ಮಠವೆಂದರೆ ಶ್ರೀ ಚನ್ನಮಲ್ಲಿಕಾರ್ಜುನ ಮಠ ಎಂದು ಅವರು ಅಭಿಪ್ರಾಯಪಟ್ಟರು.

ಟ್ರಸ್ಟ್ ಕಮಿಟಿಯ ಸದಸ್ಯ ರಾಚಪ್ಪ ಸಿದ್ದಾಪುರ ಮಾತನಾಡಿ, ಬೇಸಿಗೆ ರಜೆಯ ಅವಧಿಯಲ್ಲಿ ತಮ್ಮ ವೈಯಕ್ತಿಕ ಕಾರ್ಯಗಳನ್ನು ಬದಿಗೊತ್ತಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಶ್ರಮಿಸುತ್ತಿರುವ ಶಿಕ್ಷಕರ ಕಾರ್ಯ ಶ್ಲಾಘನೀಯವಾಗಿದೆ. ಇಂತಹ ಶಿಕ್ಷಕರ ಸೇವೆಯನ್ನು ಸರ್ಕಾರ ಗುರುತಿಸಿ ಸೂಕ್ತ ಗೌರವ ನೀಡಬೇಕು ಎಂದು ಮನವಿ ಮಾಡಿದರು. ತರಬೇತಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹೆಚ್ಚಿನ ಅಭ್ಯಾಸ ಮಾಡಿ ತಮ್ಮ ಪೋಷಕರು, ಶಾಲೆ ಹಾಗೂ ಶ್ರೀಮಠಕ್ಕೆ ಕೀರ್ತಿ ತರಬೇಕು ಎಂದು ಶುಭ ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೋಚಿಂಗ್ ಸೆಂಟರ್ ಸಂಚಾಲಕ ಸಿದ್ದಲಿಂಗೇಶ್ವರ ಪೂಲಭಾವಿ, ಈ ಭಾಗದಲ್ಲಿ ಎಐ (AI) ಸ್ಮಾರ್ಟ್ ಕ್ಲಾಸ್ ಮೂಲಕ ಉಚಿತ ಶಿಕ್ಷಣ ನೀಡುತ್ತಿರುವ ಏಕೈಕ ಸಂಸ್ಥೆ ಸಿಬಿಎಸ್ ಉಚಿತ ಕೋಚಿಂಗ್ ಸೆಂಟರ್ ಆಗಿದೆ ಎಂದು ಹೇಳಿದರು. ಇದರಿಂದ ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿದ್ದು, ಪಾಠದ ಗ್ರಹಿಕೆ ಹಾಗೂ ಕಲಿಕೆಯ ದೃಢೀಕರಣಕ್ಕೆ ಹೆಚ್ಚಿನ ನೆರವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಐ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಗೆ ಸಹಕಾರ ನೀಡಿದ ವಿಶ್ವನಾಥ್ ಚನ್ನಬಸವ ಸ್ವಾಮಿಗಳು, ವಿದ್ಯಾರ್ಥಿಗಳಿಗೆ ಕಿಷ್ಕಿಂಧಾ ರೆಸಾರ್ಟ್ಸ್ ಪ್ರವಾಸದ ಅವಕಾಶ ಕಲ್ಪಿಸಿದ ಮಾಜಿ ವಿಧಾನ ಪರಿಷತ್ ಸದಸ್ಯ ಎಚ್.ಆರ್. ಶ್ರೀನಾಥ್ ಹಾಗೂ ಕಿರು ಪ್ರವಾಸಕ್ಕಾಗಿ ಎರಡು ಬಸ್‌ಗಳ ವ್ಯವಸ್ಥೆ ಮಾಡಿದ ಡೆಲ್ಲಿ ಪಬ್ಲಿಕ್ ಸ್ಕೂಲ್ ಮುಖ್ಯಸ್ಥ ಡಾ. ಶಶಿಧರ್ ಮತ್ತು ಲಿಟಲ್ ಹಾರ್ಟ್ಸ್ ಶಾಲೆಯ ಮುಖ್ಯಸ್ಥ ಜಗನ್ನಾಥ್ ಅಲಂಪಳ್ಳಿ ಅವರ ಸಮಾಜಮುಖಿ ಸೇವೆಯನ್ನು ಸ್ಮರಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಲ್ಲದೆ ಶ್ರೀ ಚನ್ನಮಲ್ಲಿಕಾರ್ಜುನ ಮಠದ ವತಿಯಿಂದ ಉಚಿತ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು. 19ನೇ ವರ್ಷದ ಕೋಚಿಂಗ್ ಸೆಂಟರ್ ವಿದ್ಯಾರ್ಥಿಗಳ ಗುಂಪು ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ಕಮಿಟಿಯ ನೂತನ ಸದಸ್ಯ ಅಯ್ಯನಗೌಡ ಕಕ್ಕರಗೋಳ, ಸಂಪನ್ಮೂಲ ಶಿಕ್ಷಕರಾದ ರಘುನಂದನ್, ಮಹೇಶ್, ಉಮೇಶ್ ಹಣವಾಳ, ಶರಣೆಗೌಡ ಪೊಲೀಸ್ ಪಾಟೀಲ್, ಉಲ್ಲಾಸ್ ರೆಡ್ಡಿ, ಸಹಾಯಕರಾದ ಅರುಣ್ ಉದಯ್, ಪುನೀತ್ ಹಿರೇಮಠ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

About The Author

error: Content is protected !!