🟥 ಟಿ ಪಬ್ಲಿಕ್ ನ್ಯೂಸ್ ಗಂಗಾವತಿ
ದಿನಾಂಕ :27/05/2026
ಗಂಗಾವತಿ: ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕ ಹಾಗೂ ಗಂಗಾಮತ ಸಮಾಜದ ಹಿರಿಯ ಮುಖಂಡ ತಿಪ್ಪಣ್ಣ ಕಮಕನೂರ್ ಅವರನ್ನು ವಿಧಾನ ಪರಿಷತ್ ಸದಸ್ಯ (ಎಂಎಲ್ಸಿ) ಸ್ಥಾನದಲ್ಲಿ ಮುಂದುವರಿಸಬೇಕು ಮತ್ತು ಸಚಿವ ಸ್ಥಾನ ನೀಡುವ ಮೂಲಕ ರಾಜಕೀಯವಾಗಿ ಮತ್ತಷ್ಟು ಬಲ ತುಂಬಬೇಕು ಎಂದು ಗಂಗಾಮತ ಸಮಾಜದ ಮುಖಂಡರು ಸರ್ಕಾರ ಹಾಗೂ ಕಾಂಗ್ರೆಸ್ ಹೈಕಮಾಂಡ್‌ಗೆ ತೀವ್ರ ಆಗ್ರಹ ವ್ಯಕ್ತಪಡಿಸಿದ್ದಾರೆ.
ನಗರದ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಮುಖಂಡರು, ತಿಪ್ಪಣ್ಣ ಕಮಕನೂರ್ ಅವರ ಸೇವೆ, ನಿಷ್ಠೆ ಹಾಗೂ ಪಕ್ಷ ಸಂಘಟನೆಯಲ್ಲಿ ಸಲ್ಲಿಸಿರುವ ಕೊಡುಗೆಯನ್ನು ನಿರ್ಲಕ್ಷಿಸಿದರೆ ರಾಜ್ಯದಾದ್ಯಂತ ಗಂಗಾಮತ ಸಮುದಾಯದಲ್ಲಿ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಗೌರವ ಅಧ್ಯಕ್ಷ ರಾಜಶೇಖರ ಮುಸ್ಟೂರು ಮಾತನಾಡಿ, “ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ದುಡಿದಿರುವ ತಿಪ್ಪಣ್ಣ ಕಮಕನೂರ್ ಅವರಿಗೆ ನ್ಯಾಯ ಸಿಗಲೇಬೇಕು. ಗಂಗಾಮತ ಸಮಾಜದ ಪ್ರಬಲ ಪ್ರತಿನಿಧಿಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದು, ಎಂಎಲ್ಸಿ ಸ್ಥಾನವನ್ನು ಮುಂದುವರಿಸುವುದು ಪಕ್ಷದ ನೈತಿಕ ಹೊಣೆಗಾರಿಕೆಯಾಗಿದೆ” ಎಂದು ಹೇಳಿದರು.
ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ್ ಮಾತನಾಡಿ, “ಕಮಕನೂರ್ ಅವರು ಸರ್ವ ಸಮಾಜದ ವಿಶ್ವಾಸ ಗಳಿಸಿರುವ ಜನನಾಯಕ. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಹಿಂದುಳಿದ ಹಾಗೂ ಶೋಷಿತ ಸಮುದಾಯಗಳಿಗೆ ರಾಜಕೀಯ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ಹನುಮೇಶ ಭಟಾರಿ ಮಾತನಾಡಿ, “ಕಾಂಗ್ರೆಸ್ ಪಕ್ಷವು ಗಂಗಾಮತ ಸಮಾಜದ ಭಾವನೆಗಳಿಗೆ ಸ್ಪಂದಿಸಿ ಕಮಕನೂರ್ ಅವರಿಗೆ ಮತ್ತೊಮ್ಮೆ ಅವಕಾಶ ನೀಡಬೇಕು. ಇಲ್ಲವಾದರೆ ಸಮುದಾಯದ ಆಕ್ರೋಶವನ್ನು ಎದುರಿಸಬೇಕಾಗುತ್ತದೆ” ಎಂದು ಹೇಳಿದರು.
ತಿಪ್ಪಣ್ಣ ಕಮಕನೂರ್ ಅವರ ರಾಜಕೀಯ ಭವಿಷ್ಯದ ಕುರಿತು ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರಲು ರಾಜ್ಯದ ವಿವಿಧ ಜಿಲ್ಲೆಗಳ ಸಮಾಜದ ಮುಖಂಡರನ್ನು ಒಗ್ಗೂಡಿಸಿಕೊಂಡು ಶೀಘ್ರದಲ್ಲೇ ಬೆಂಗಳೂರಿಗೆ ಬೃಹತ್ ನಿಯೋಗ ಕೊಂಡೊಯ್ಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಪರಶುರಾಮ ಮಡ್ಡೇರ್, ಗೌರವ ಅಧ್ಯಕ್ಷ ಹುಲಗಪ್ಪ ಕಾಪು, ನಿಜಶರಣ ಅಂಬಿಗರ ಚೌಡಯ್ಯ ಯುವಕ ಸಂಘದ ಅಧ್ಯಕ್ಷ ಭೈರೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಕುಮಾರ ಅರಿಕೇರಿ, ಸಿದ್ದಪ್ಪ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್
“ಗಂಗಾಮತ ಸಮಾಜದ ಎಚ್ಚರಿಕೆ: ತಿಪ್ಪಣ್ಣ ಕಮಕನೂರ್‌ಗೆ ಎಂಎಲ್ಸಿ ಮುಂದುವರಿಕೆ, ಸಚಿವ ಸ್ಥಾನ ನೀಡದಿದ್ದರೆ ಕಾಂಗ್ರೆಸ್ ವಿರುದ್ಧ ರಾಜ್ಯವ್ಯಾಪಿ ಹೋರಾಟ!”
More Stories
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ನ್ಯಾಯಾಧೀಶ ನಾಗೇಶ ಪಾಟೀಲ್
ಉಡಮಕಲ್ ಗ್ರಾಮದಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ
ಮಾಹಿತಿ ನೀಡದ ಐವರು ಅಧಿಕಾರಿಗಳಿಗೆ ಕಲಬುರಗಿ ಮಾಹಿತಿ ಆಯೋಗದಿಂದ ₹50 ಸಾವಿರ ದಂಡ