🟥 ಟಿ ಪಬ್ಲಿಕ್ ನ್ಯೂಸ್ ಗಂಗಾವತಿ
ದಿನಾಂಕ :25/05/2026
ಗಂಗಾವತಿ: ಪರಿಶಿಷ್ಟ ಜಾತಿಗಳ ಆಂತರಿಕ ಮೀಸಲಾತಿ ಜಾರಿಗೆ ಸರ್ಕಾರ ಮುಂದಾಗಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಅಖಿಲ ಭಾರತ ಮಾದಿಗ ದಂಡೋರ ಸಮಿತಿ, ಇದನ್ನು ದಲಿತ ಸಮುದಾಯದ ಹಕ್ಕುಗಳ ಮೇಲೆ ನಡೆಸುತ್ತಿರುವ ಅನ್ಯಾಯ ಎಂದು ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಮೇ 27ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಬಹುಜನ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿ. ಹುಸೇನಪ್ಪ ಸ್ವಾಮಿ ಮಾದಿಗ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಸಂವಿಧಾನದ ಆಶಯಗಳನ್ನು ಕಡೆಗಣಿಸಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ತಿದ್ದುಪಡಿ ಮಾಡಲು ಮುಂದಾಗಿದೆ. ಈ ಕ್ರಮದಿಂದ ದಲಿತ ಸಮುದಾಯದ ಏಕತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಧಕ್ಕೆ ಉಂಟಾಗಲಿದೆ ಎಂದು ಆರೋಪಿಸಿದರು.
ಬುದ್ಧ, ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಗಳು ಹಾಗೂ SCSP/TSP ಯೋಜನೆಗಳ ಮೂಲ ಉದ್ದೇಶಗಳಿಗೆ ವಿರುದ್ಧವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ. ದಲಿತರ ಅಭಿವೃದ್ಧಿಗೆ ಅವಕಾಶ ಕಲ್ಪಿಸುವ ಬದಲು ರಾಜಕೀಯ ಲಾಭಕ್ಕಾಗಿ ಸಮಾಜವನ್ನು ವಿಭಜಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಒಳಮೀಸಲಾತಿ ನೀತಿ ಸಂವಿಧಾನ ವಿರೋಧಿಯಾಗಿದ್ದು, ಅದರ ವಿರುದ್ಧ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಜನರು ಫ್ರೀಡಂ ಪಾರ್ಕ್‌ಗೆ ಆಗಮಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಲಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಜನಶಕ್ತಿ ಏನೆಂಬುದನ್ನು ತೋರಿಸುವ ಸಮಯ ಬಂದಿದೆ ಎಂದು ಅವರು ಹೇಳಿದರು.
ಸಮಾವೇಶದಲ್ಲಿ ವಿವಿಧ ಸಮಾಜಮುಖಿ ಸಂಘಟನೆಗಳ ಮುಖಂಡರು, ಹೋರಾಟಗಾರರು, ಬುದ್ಧಿಜೀವಿಗಳು ಹಾಗೂ ಬಹುಜನ ಸಮುದಾಯದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಕನಕಪ್ಪ ದೊಡ್ಡಮನಿ, ಮುಖಂಡರಾದ ಯಮನೂರಪ್ಪ ಗೋನಾಳ, ಶರಣಪ್ಪ ಕನಕಗಿರಿ, ಯಂಕಪ್ಪ, ಬೋಜಪ್ಪ, ಶಿವಪ್ಪ ಮಾದಿಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್
“ದಲಿತರ ಹಕ್ಕುಗಳ ಮೇಲೆ ಕಾಂಗ್ರೆಸ್ ಸರ್ಕಾರದ ‘ಕತ್ತರಿ’? ಒಳಮೀಸಲಾತಿ ವಿರೋಧಿಸಿ ಮೇ 27ರಂದು ಬೆಂಗಳೂರಿಗೆ ಬಹುಜನರ ಬೃಹತ್ ಚಲೋ”
More Stories
ಮಳೆ-ಬೆಳೆಯಿಗಾಗಿ ಮಲ್ಲಾಪುರ ಗಾಳೆಮ್ಮ ದೇವಿಯ ವಿಶೇಷ ಆರಾಧನೆ
“ದಲಿತ ನಾಯಕರಿಗೆ ನ್ಯಾಯ ಕೊಡದಿದ್ದರೆ ಕಾಂಗ್ರೆಸ್ಗೆ ಜನತೆ ತಕ್ಕ ಪಾಠ ಕಲಿಸುತ್ತದೆ: ಕೆ.ಎಚ್.ಮುನಿಯಪ್ಪ ಡಿಸಿಎಂ ಆಗಲಿ ಎಂದು ನಾಗರಾಜ ದೊಡ್ಮನಿ ಆಗ್ರಹ”
“22 ವರ್ಷಗಳ ಅಕ್ರಮ ಮದ್ಯ ಮಾರಾಟಕ್ಕೆ ಅಧಿಕಾರಿಗಳೂ ಶಾಮೀಲು? — ಅಜಯ್ ಬಾರ್ ಮಾಲೀಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ”