🟥 ಟಿ ಪಬ್ಲಿಕ್ ನ್ಯೂಸ್ ಗಂಗಾವತಿ
ದಿನಾಂಕ :24/05/2026
₹545ಕ್ಕೆ ಖರೀದಿಸಿದ ಆರು ಬಿಯರ್‌ಗಳೂ ಅವಧಿ ಮೀರಿದವು; ಹಣ ಮರುಪಾವತಿ ನಿರಾಕರಣೆ, ಅಬಕಾರಿ ಇಲಾಖೆ ಮೌನಕ್ಕೆ ಗ್ರಾಹಕರ ಆಕ್ರೋಶ
ಗಂಗಾವತಿ: ನಗರದ ಕೊಪ್ಪಳ–ರಾಯಚೂರು ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್ ಸಮೀಪದ ಎಂಎಸ್‌ಎಲ್ ಲಿಕ್ಕರ್ ಶಾಪ್‌ನಲ್ಲಿ ಅವಧಿ ಮೀರಿದ ಬಿಯರ್ ಮಾರಾಟ ಮಾಡಿರುವ ಗಂಭೀರ ಆರೋಪ ಕೇಳಿಬಂದಿದ್ದು, ಗ್ರಾಹಕರ ಆರೋಗ್ಯದೊಂದಿಗೆ ನಿರ್ಲಜ್ಜವಾಗಿ ಚೆಲ್ಲಾಟ ನಡೆಸಲಾಗಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ.

ಗ್ರಾಹಕ ಸತೀಶ್ ಅವರ ಪ್ರಕಾರ, ಮೇ 21ರಂದು ರಾತ್ರಿ ಅಂಗಡಿಯಿಂದ ₹545 ಪಾವತಿಸಿ ಕಿಂಗ್‌ಫಿಷರ್ ಸ್ಟ್ರಾಂಗ್ ಬಿಯರ್‌ನ ಆರು ಟಿನ್‌ಗಳನ್ನು ಖರೀದಿಸಿದ್ದರು. ಬಳಿಕ ಪರಿಶೀಲಿಸಿದಾಗ ಎಲ್ಲಾ ಟಿನ್‌ಗಳ ಮೇಲೂ ಉತ್ಪಾದನಾ ದಿನಾಂಕ 04-11-2025 ಹಾಗೂ ಅವಧಿ ಮುಕ್ತಾಯ ದಿನಾಂಕ 13-05-2026 ಎಂದು ನಮೂದಿಸಲಾಗಿದ್ದು, ಮಾರಾಟದ ದಿನಾಂಕಕ್ಕೆ ಅವು ಈಗಾಗಲೇ ಎಕ್ಸ್‌ಪೈರ್ ಆಗಿರುವುದು ಪತ್ತೆಯಾಗಿದೆ.

ಈ ಬಗ್ಗೆ ಅಂಗಡಿ ಮಾಲೀಕರನ್ನು ಪ್ರಶ್ನಿಸಿದಾಗ ಐದು ಟಿನ್‌ಗಳನ್ನು ಮಾತ್ರ ವಾಪಸ್ ಪಡೆದಿದ್ದು, ಹಣವನ್ನು ಹಿಂದಿರುಗಿಸಲು ನಿರಾಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಒಂದು ಟಿನ್ ತೆರೆದಿರುವ ಕಾರಣ ಅದಕ್ಕೆ ಬದಲಿ ಉತ್ಪನ್ನ ಅಥವಾ ಮರುಪಾವತಿ ನೀಡಲು ನಿರಾಕರಿಸಲಾಗಿದೆ ಎನ್ನಲಾಗಿದೆ.

ಘಟನೆಯ ಬಗ್ಗೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಅವಧಿ ಮೀರಿದ ಮದ್ಯ ಮಾರಾಟದಂತಹ ಗಂಭೀರ ಪ್ರಕರಣಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವೂ ಪ್ರಶ್ನೆಗೆ ಒಳಗಾಗಿದೆ.
“ಎಕ್ಸ್‌ಪೈರಿ ಮದ್ಯ ಮಾರಾಟ ಮಾಡುವುದು ಕೇವಲ ಗ್ರಾಹಕರಿಗೆ ವಂಚನೆ ಮಾಡುವುದಲ್ಲ, ಅವರ ಆರೋಗ್ಯದ ಮೇಲೆ ನೇರ ದಾಳಿ ಮಾಡಿದಂತೆಯೇ. ಇಂತಹ ಕಾನೂನು ಉಲ್ಲಂಘಕರ ವಿರುದ್ಧ ಕಠಿಣ ಶಿಕ್ಷೆ ಜರುಗಿಸಿ, ಲೈಸೆನ್ಸ್ ರದ್ದುಪಡಿಸುವ ಮಟ್ಟದ ಕ್ರಮ ಕೈಗೊಳ್ಳಬೇಕು” ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಗ್ರಾಹಕರ ಜೀವ ಮತ್ತು ಆರೋಗ್ಯಕ್ಕೆ ಅಪಾಯ ಉಂಟುಮಾಡುವ ಇಂತಹ ಪ್ರಕರಣಗಳ ವಿರುದ್ಧ ಅಬಕಾರಿ ಇಲಾಖೆ ತಕ್ಷಣ ಪ್ರಕರಣ ದಾಖಲಿಸಿ, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕ ವಲಯ ಒತ್ತಾಯಿಸಿದೆ.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್
More Stories
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ನ್ಯಾಯಾಧೀಶ ನಾಗೇಶ ಪಾಟೀಲ್
ಉಡಮಕಲ್ ಗ್ರಾಮದಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ
ಮಾಹಿತಿ ನೀಡದ ಐವರು ಅಧಿಕಾರಿಗಳಿಗೆ ಕಲಬುರಗಿ ಮಾಹಿತಿ ಆಯೋಗದಿಂದ ₹50 ಸಾವಿರ ದಂಡ