May 29, 2026

“22 ವರ್ಷಗಳ ಅಕ್ರಮ ಮದ್ಯ ಮಾರಾಟಕ್ಕೆ ಅಧಿಕಾರಿಗಳೂ ಶಾಮೀಲು? — ಅಜಯ್ ಬಾರ್ ಮಾಲೀಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ”

🟥 ಟಿ ಪಬ್ಲಿಕ್ ನ್ಯೂಸ್ ಗಂಗಾವತಿ
ದಿನಾಂಕ: 29/05/2026

ಗಂಗಾವತಿ: ನಗರದ ಅಂಬೇಡ್ಕರ್ ಸರ್ಕಲ್ ಸಮೀಪದ ಎಸ್ಸಿ ಕಾಲೋನಿಯಲ್ಲಿ ವಸತಿ ಉದ್ದೇಶಕ್ಕೆ ಮೀಸಲಿಟ್ಟ ಜಾಗದಲ್ಲೇ ಸುಮಾರು 22 ವರ್ಷಗಳ ಕಾಲ ಸಿಎಲ್-07 ಪರವಾನಿಗೆಯಡಿ ಅಕ್ರಮವಾಗಿ ಬಾರ್ ಮತ್ತು ರೆಸ್ಟೋರೆಂಟ್ ನಡೆಸಿ ಕೋಟ್ಯಾಂತರ ರೂಪಾಯಿ ವಂಚನೆ ನಡೆಸಲಾಗಿದೆ ಎಂದು ಆರೋಪಿಸಿ, ಅಜಯ್ ಟೂರಿಸ್ಟ್ ಹೋಮ್ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮಾದಿಗ ಕ್ಷೇಮಾಭಿವೃದ್ಧಿ ಸಂಘಟನೆಯ ಜಿಲ್ಲಾಧ್ಯಕ್ಷ ಶಿವಪ್ಪ ಮಾದಿಗ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಸತಿಗಾಗಿ ಮೀಸಲಾದ ಪ್ರದೇಶದಲ್ಲಿ ಬಾರ್ ಆರಂಭಿಸಿ ಹಲವು ವರ್ಷಗಳಿಂದ ಮದ್ಯ ಮಾರಾಟ ನಡೆಸಿರುವುದು ಗಂಭೀರ ಉಲ್ಲಂಘನೆ. ಇದರ ಹಿಂದೆ ಅಬಕಾರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವಲ್ಲ, ನೇರ ಶಾಮೀಲಾತಿಯೇ ಇದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು.

ಅಬಕಾರಿ ಇಲಾಖೆಯ ನಿಯಮಗಳ ಪ್ರಕಾರ ಪ್ರತಿವರ್ಷ ಜೂನ್ ತಿಂಗಳಲ್ಲಿ ಬಾರ್ ಪರವಾನಿಗೆಯನ್ನು ನವೀಕರಣಗೊಳಿಸುವಾಗ ದಾಖಲೆಗಳ ಪರಿಶೀಲನೆ ಕಡ್ಡಾಯವಾಗಿದೆ. ಆದರೂ ವಸತಿ ಪ್ರದೇಶದಲ್ಲೇ ಬಾರ್ ಕಾರ್ಯನಿರ್ವಹಿಸುತ್ತಿದ್ದರೂ ಅಧಿಕಾರಿಗಳು ನಿರಂತರವಾಗಿ ಪರವಾನಿಗೆ ನವೀಕರಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದರು.

ನಗರ ಯೋಜನಾ ಪ್ರಾಧಿಕಾರದಿಂದ ವಸತಿ ಉದ್ದೇಶಕ್ಕೆ ಅನುಮತಿ ಪಡೆದು ಲಾಡ್ಜ್ ನಿರ್ಮಿಸಿ, ನಂತರ ಸಿಎಲ್-07 ಲೈಸೆನ್ಸ್ ಪಡೆದು ಬಾರ್ ಮತ್ತು ರೆಸ್ಟೋರೆಂಟ್ ನಡೆಸಲಾಗಿದೆ. ಇದಕ್ಕೆ ನಗರಸಭೆ ಅಧಿಕಾರಿಗಳ ಮೌನವೂ ಸಹಕಾರದಂತೆಯೇ ಕಾಣುತ್ತಿದೆ ಎಂದು ಅವರು ಕಿಡಿಕಾರಿದರು.

ಸುಮಾರು 22 ವರ್ಷಗಳ ಕಾಲ ಮದ್ಯ ಮಾರಾಟ ನಡೆಸಿ ಸರ್ಕಾರಕ್ಕೆ ಭಾರೀ ಪ್ರಮಾಣದ ತೆರಿಗೆ ವಂಚನೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಕೇವಲ ಲೈಸೆನ್ಸ್ ರದ್ದುಪಡಿಸಿರುವುದೇ ಹೊರತು, ಅಕ್ರಮ ನಡೆಸಿದ ಬಾರ್ ಮಾಲೀಕರ ವಿರುದ್ಧ ಅಥವಾ ಸಹಕರಿಸಿದ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಕ್ಷಣವೇ ಅಕ್ರಮದಲ್ಲಿ ಭಾಗಿಯಾಗಿರುವ ಬಾರ್ ಮಾಲೀಕರು ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಕಳೆದ 22 ವರ್ಷಗಳ ಮದ್ಯ ಮಾರಾಟದಿಂದ ಗಳಿಸಿರುವ ಕೋಟ್ಯಾಂತರ ರೂಪಾಯಿಗಳನ್ನು ದಂಡ ರೂಪದಲ್ಲಿ ವಸೂಲಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಬಾರ್ ಲೈಸೆನ್ಸ್ ರದ್ದಾದ ಬಳಿಕವೂ ನ್ಯಾಯಾಲಯದ ಮೂಲಕ ತಡೆಯಾಜ್ಞೆ ಪಡೆಯಲು ಯತ್ನ ನಡೆಯುತ್ತಿದೆ. ಎಸ್ಸಿ ಕಾಲೋನಿಯಲ್ಲಿ ಬಾರ್ ನಡೆಸಬಾರದು ಎಂಬ ನಿಯಮ ಇದ್ದರೂ ಅದನ್ನು ಉಲ್ಲಂಘಿಸಿ ವ್ಯವಹಾರ ನಡೆಸಲಾಗಿದೆ. ಒಂದು ವೇಳೆ ನ್ಯಾಯಾಲಯದಿಂದ ತಡೆಯಾಜ್ಞೆ ದೊರೆತರೂ, ಅದರ ವಿರುದ್ಧ ಕಾನೂನು ಹೋರಾಟ ನಡೆಸಿ ಎಸ್ಸಿ ಕಾಲೋನಿಯ ಜನರಿಗೆ ನ್ಯಾಯ ದೊರಕಿಸುವೆ ಎಂದು ಶಿವಪ್ಪ ಮಾದಿಗ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್ಸಿ ಕಾಲೋನಿಯ ನಿವಾಸಿಗಳಾದ ಪರಶುರಾಮ, ಸುರೇಶ್ ಮುಕ್ಕುಂದಿ, ಬಸವರಾಜ ಕಲ್ಗುಡಿ, ಮಂಜುನಾಥ್, ಪ್ರದೀಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

About The Author

error: Content is protected !!