🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 23/06/2026
“ಕರ್ತವ್ಯಕ್ಕೆ ಗೌರವ, ಸೇವೆಗೆ ಸನ್ಮಾನ” ಎಂಬ ನುಡಿಗೆ ಸಾಕ್ಷಿಯಾಗಿ ಸಿಪಿಐ ರಂಗಪ್ಪ ದೊಡ್ಡಮನಿ ಅವರ ಸಾಧನೆ ಇದೀಗ ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ.
ಗಂಗಾವತಿ: ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಮತ್ತು ಜನಸ್ನೇಹಿ ಪೊಲೀಸ್ ಸೇವೆಯ ಮೂಲಕ ಸಾರ್ವಜನಿಕರ ಮೆಚ್ಚುಗೆ ಗಳಿಸಿರುವ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ರಂಗಪ್ಪ ಹೆಚ್. ದೊಡ್ಡಮನಿ ಅವರಿಗೆ ರಾಜ್ಯ ಪೊಲೀಸ್ ಇಲಾಖೆಯ ಪ್ರತಿಷ್ಠಿತ ಡಿಜಿ ಮತ್ತು ಐಜಿಪಿ ಪ್ರಶಂಸನಾ ಡಿಸ್ಕ್-2026 ರ ಪ್ರಶಸ್ತಿ ಲಭಿಸಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ತೋರಿದ ಅಸಾಧಾರಣ ಕಾರ್ಯಕ್ಷಮತೆ, ಸಂಕೀರ್ಣ ಅಪರಾಧ ಪ್ರಕರಣಗಳ ತನಿಖೆಯಲ್ಲಿ ಪ್ರದರ್ಶಿಸಿದ ಚಾಣಾಕ್ಷತೆ ಹಾಗೂ ಸಮಾಜಮುಖಿ ಸೇವಾ ಕಾರ್ಯಗಳನ್ನು ಪರಿಗಣಿಸಿ ಈ ಗೌರವಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ.
ವಿಶೇಷವಾಗಿ, ಸಾಣಾಪುರ ಕೆರೆ ಸಮೀಪ ವಿದೇಶಿ ಪ್ರವಾಸಿ ಮಹಿಳೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ತನಿಖೆಯನ್ನು ಸಮರ್ಥವಾಗಿ ನಿರ್ವಹಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ರಂಗಪ್ಪ ದೊಡ್ಡಮನಿ ಅವರ ಕಾರ್ಯ ರಾಜ್ಯಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿತ್ತು. ಇದರ ಜೊತೆಗೆ ಹಲವಾರು ಗಂಭೀರ ಅಪರಾಧ ಪ್ರಕರಣಗಳನ್ನು ಭೇದಿಸಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅವರು ಗಮನಾರ್ಹ ಸೇವೆ ಸಲ್ಲಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಹಾಗೂ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಿರುವ ಸಿಪಿಐ ರಂಗಪ್ಪ ದೊಡ್ಡಮನಿ, ಪೊಲೀಸ್ ಸೇವೆಯನ್ನು ಕೇವಲ ಕರ್ತವ್ಯಕ್ಕೆ ಸೀಮಿತಗೊಳಿಸದೇ ಸಮಾಜ ಜಾಗೃತಿಯ ಕಾರ್ಯಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಬಾಲ್ಯ ವಿವಾಹ ತಡೆ, ಅಸ್ಪೃಶ್ಯತೆ ನಿರ್ಮೂಲನೆ, ಮೂಢನಂಬಿಕೆ ವಿರೋಧಿ ಜಾಗೃತಿ ಕಾರ್ಯಕ್ರಮಗಳು ಹಾಗೂ ಗ್ರಾಮೀಣ ಭಾಗಗಳಲ್ಲಿ ಪೊಲೀಸ್ ಇಲಾಖೆಯ “ತೆರೆದ ಮನೆ” ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ಕಾನೂನು ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಸಾರ್ವಜನಿಕರೊಂದಿಗೆ ಆತ್ಮೀಯ ಬಾಂಧವ್ಯ ಬೆಳೆಸಿಕೊಂಡು ಜನಪರ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅವರ ಸೇವಾ ಸಾಧನೆಗೆ ಸಂದಿರುವ ಈ ಪ್ರತಿಷ್ಠಿತ ಪ್ರಶಸ್ತಿ ಗಂಗಾವತಿ ಹಾಗೂ ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆಗೆ ಹೆಮ್ಮೆಯ ವಿಷಯವಾಗಿದೆ. ವಿವಿಧ ಗಣ್ಯರು, ಸಾರ್ವಜನಿಕರು ಹಾಗೂ ಪೊಲೀಸ್ ಸಿಬ್ಬಂದಿ ಸಿಪಿಐ ರಂಗಪ್ಪ ದೊಡ್ಡಮನಿ ಅವರಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಜನಪರ ಹಾಗೂ ಕರ್ತವ್ಯನಿಷ್ಠ ಸೇವೆ ಮುಂದುವರೆಯಲಿ ಎಂದು ಶುಭ ಹಾರೈಸಿದ್ದಾರೆ.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

More Stories
“ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ: ತಪ್ಪಿತಸ್ಥರನ್ನು ತಕ್ಷಣ ಅಮಾನತು ಮಾಡಿ, ಇಲ್ಲದಿದ್ದರೆ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಘೇರಾವ್ – ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ”
ಶಾಲೆಯಲ್ಲೇ ಮುಖ್ಯೋಪಾಧ್ಯಾಯರ ಕಿತ್ತಾಟ! ಸಿಸಿಟಿವಿ ಪರಿಶೀಲಿಸಿ ತಪ್ಪಿತಸ್ಥರನ್ನು ಅಮಾನತು ಮಾಡಿ ಕಠಿಣ ಕಾನೂನು ಕ್ರಮ ಜರುಗಿಸಿ: ಮಹಾನಾಯಕ ಜನಜಾಗೃತಿ ವೇದಿಕೆ ಆಗ್ರಹ
ರಸ್ತೆ ಒತ್ತುವರಿ ಆರೋಪ ನಿರಾಧಾರ; ಕಾನೂನುಬದ್ಧವಾಗಿಯೇ ರೆಸಾರ್ಟ್ ನಿರ್ಮಿಸಲಾಗಿದೆ: ರಮೇಶ್ ನಾಯಕ