July 16, 2026

ಅದ್ದೂರಿಯಾಗಿ ಜರುಗಿದ ಗಂಗಾದೇವಿಯ ರಥೋತ್ಸವ; ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಕ್ತಿಭಾವದ ಸಂಭ್ರಮ

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 25/06/2026

100ಕ್ಕೂ ಅಧಿಕ ಕುಂಭ-ಕಳಶಗಳ ಮೆರವಣಿಗೆ, ಸಾಮೂಹಿಕ ವಿವಾಹ ಮತ್ತು ಮಹಿಳೆಯರಿಂದ ರಥ ಎಳೆಯುವಿಕೆ ವಿಶೇಷ ಆಕರ್ಷಣೆ

ಗಂಗಾವತಿ: ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಗಂಗಾಮತ ಸಮಾಜದ ವತಿಯಿಂದ ಗಂಗಾದೇವಿಯ ಜಯಂತಿ ಅಂಗವಾಗಿ ಬುಧವಾರ ಗಂಗಾದೇವಿಯ ರಥೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು.

ಜಯಂತಿಯ ಅಂಗವಾಗಿ ಗಂಗಾದೇವಿಯ ಭಾವಚಿತ್ರವನ್ನು 100ಕ್ಕೂ ಅಧಿಕ ಕುಂಭ ಹಾಗೂ ಕಳಶಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಮಹಿಳೆಯರು, ಯುವಕರು ಹಾಗೂ ಭಕ್ತರು ಉತ್ಸಾಹದಿಂದ ಭಾಗವಹಿಸಿ ಧಾರ್ಮಿಕ ಸಂಭ್ರಮಕ್ಕೆ ಮೆರುಗು ತಂದರು.

ಇದಕ್ಕೂ ಮುನ್ನ ಗಂಗಾದೇವಿ ದೇವಸ್ಥಾನದಲ್ಲಿ ದೇವಿಯ ಮೂರ್ತಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ ಹಾಗೂ ವಿಶೇಷ ಹೂವಿನ ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನೆರವೇರಿದವು. ರಥೋತ್ಸವದ ಅಂಗವಾಗಿ ರಥ ಏರಿಸುವುದು ಹಾಗೂ ಮಡಿ ತೇರು ರಥೋತ್ಸವ ಕಾರ್ಯಕ್ರಮಗಳು ಭಕ್ತರ ಸಮ್ಮುಖದಲ್ಲಿ ನಡೆದವು.

ಪ್ರತಿ ವರ್ಷದಂತೆ ಈ ಬಾರಿಯೂ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಮಾಜದ ಮುಖಂಡರು ಹಾಗೂ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.

ಸಂಜೆ ವೇಳೆಗೆ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಿಂದ ಆಗಮಿಸಿದ ಸಾವಿರಾರು ಭಕ್ತರು ಗಂಗಾದೇವಿಯ ರಥೋತ್ಸವದಲ್ಲಿ ಭಾಗವಹಿಸಿದರು. ವಿಶೇಷವಾಗಿ ಮಹಿಳೆಯರು ರಥವನ್ನು ಎಳೆಯುವ ಮೂಲಕ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಹೆಬ್ಬಾಳ ಮಠದ ನಾಗಭೂಷಣ ಶ್ರೀಗಳು, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಸಿಂಗನಾಳ ವಿರೂಪಾಕ್ಷಪ್ಪ, ರಾಜಶೇಖರಪ್ಪ ಮುಸ್ಟೂರು ಸೇರಿದಂತೆ ಗಂಗಾಮತ ಸಮಾಜದ ಮುಖಂಡರು, ಗ್ರಾಮದ ಪ್ರಮುಖರು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News

About The Author

error: Content is protected !!