🟥 ಟಿ ಪಬ್ಲಿಕ್ ನ್ಯೂಸ್ | ಕೊಪ್ಪಳ
ದಿನಾಂಕ: 03/07/2026
ಕುಡಿಯುವ ನೀರು, ಉದ್ಯೋಗ ಸೃಷ್ಟಿ, ಬೆಳೆ ವಿಮೆ, ಬಿತ್ತನೆ ಬೀಜ-ರಸಗೊಬ್ಬರ ಪೂರೈಕೆ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಗೆ ಆದ್ಯತೆ ನೀಡುವಂತೆ ನಿರ್ದೇಶನ
ಕೊಪ್ಪಳ: ಜಿಲ್ಲೆಯಲ್ಲಿ ಮುಂಗಾರು ಮಳೆಯ ಕೊರತೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಸಂಭವನೀಯ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಎಲ್ಲ ಇಲಾಖೆಗಳ ಅಧಿಕಾರಿಗಳು ಈಗಿನಿಂದಲೇ ಸನ್ನದ್ಧರಾಗಬೇಕು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣೆಯ ಮೇಲುಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.


ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಕೃತಿ ವಿಕೋಪ ನಿರ್ವಹಣೆಯ ಮೇಲುಸ್ತುವಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಕುಂಠಿತಗೊಂಡರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚಿನ ಮಾನವ ದಿನಗಳನ್ನು ಸೃಜಿಸಲು ಕ್ರಿಯಾ ಯೋಜನೆ ರೂಪಿಸಬೇಕು ಎಂದು ತಿಳಿಸಿದರು. ಜಾಬ್ ಕಾರ್ಡ್ ವಿತರಣೆಗೆ ವೇಗ ನೀಡುವ ಜೊತೆಗೆ ಎಲ್ಲ ಅರ್ಹ ರೈತರು ಬೆಳೆ ವಿಮೆ ಯೋಜನೆಯಡಿ ನೋಂದಾಯಿಸಿಕೊಳ್ಳುವಂತೆ ವ್ಯಾಪಕ ಜಾಗೃತಿ ಮೂಡಿಸಬೇಕೆಂದು ಕೃಷಿ ಇಲಾಖೆಗೆ ಸೂಚಿಸಿದರು.
ಮುಂಗಾರು ಆರಂಭವಾಗಿ ತಿಂಗಳು ಕಳೆದರೂ ಸಮರ್ಪಕ ಮಳೆಯಾಗದ ಕಾರಣ ರೈತರು ಬಿತ್ತನೆ ಸಮಸ್ಯೆ ಎದುರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಅಗತ್ಯವಿರುವೆಡೆ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆಯುವುದು, ಟ್ಯಾಂಕರ್ ಮೂಲಕ ನೀರು ಪೂರೈಸುವುದು ಹಾಗೂ ಅನಿವಾರ್ಯ ಸಂದರ್ಭಗಳಲ್ಲಿ ಹೊಸ ಬೋರ್‌ವೆಲ್ ಕೊರೆಸುವಂತಹ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರೈತರಿಗೆ ಅಗತ್ಯ ಪ್ರಮಾಣದಲ್ಲಿ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಕಳಪೆ ಬೀಜ, ಕಲಬೆರಕೆ ರಸಗೊಬ್ಬರ ಮಾರಾಟ, ಹೆಚ್ಚಿನ ದರ ವಸೂಲಿ ಅಥವಾ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಎಚ್ಚರಿಕೆ ನೀಡಿದರು.
ಜುಲೈ 29ರವರೆಗೆ ನಡೆಯಲಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸುವಂತೆ ಸೂಚಿಸಿದ ಸಚಿವರು, ಮನೆಮನೆಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸಿ ಮರಳಿ ಸಂಗ್ರಹಿಸಬೇಕು. ಮರಣ ಹೊಂದಿದ ಹಾಗೂ ವಲಸೆ ಹೋದ ಮತದಾರರನ್ನು ಗುರುತಿಸಿ ಪಟ್ಟಿಯಿಂದ ಕೈಬಿಡುವ ಪ್ರಕ್ರಿಯೆ ನಿಯಮಾನುಸಾರ ಪೂರ್ಣಗೊಳಿಸಬೇಕು. ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಸಹಾಯವಾಣಿ ಸ್ಥಾಪಿಸಿ ಸಾರ್ವಜನಿಕರ ಗೊಂದಲಗಳಿಗೆ ಸ್ಪಂದಿಸಬೇಕೆಂದರು.
ಸಭೆಯಲ್ಲಿ ಮಾತನಾಡಿದ ಕುಷ್ಟಗಿ ಶಾಸಕ ದೊಡ್ಡನಗೌಡ ಹನುಮಗೌಡ ಪಾಟೀಲ, ಕುಷ್ಟಗಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಜಲಜೀವನ್ ಮಿಷನ್ ಯೋಜನೆಯಡಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.
ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡಿ, ಯಲಬುರ್ಗಾ ಹಾಗೂ ಕುಕನೂರು ತಾಲೂಕುಗಳಲ್ಲಿ ನೀರಿನ ಸಮಸ್ಯೆ ಹಾಗೂ ಬಿತ್ತನೆ ಪ್ರಮಾಣ ಕುಸಿತ ಕಂಡುಬಂದಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿಶೇಷ ಅಧಿಕಾರಿಗಳ ತಂಡ ರಚಿಸಿ ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ ಮಾತನಾಡಿ, ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ. ಜೀವಹಾನಿ, ರೈತರ ಆತ್ಮಹತ್ಯೆ, ಪ್ರಾಣಿಗಳ ಸಾವು ಹಾಗೂ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಸರ್ಕಾರದ ನಿಯಮಾನುಸಾರ ಪರಿಹಾರ ವಿತರಿಸಲಾಗಿದೆ. ಕುಡಿಯುವ ನೀರಿನ ಪೂರೈಕೆಗೆ ಅಗತ್ಯ ಅನುದಾನದ ಕೊರತೆಯಿಲ್ಲ ಎಂದು ಸಚಿವರಿಗೆ ಮಾಹಿತಿ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಜಿ.ಡಿ. ಕೃಷ್ಣಮೂರ್ತಿ ಮಾಹಿತಿ ನೀಡಿ, ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.31ರಷ್ಟು ಮಳೆ ಕೊರತೆಯಾಗಿದೆ. 3,49,892 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ ಇದುವರೆಗೆ 1,63,546 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಶೇ.47ರಷ್ಟು ಪ್ರಗತಿಯಾಗಿದೆ ಎಂದು ತಿಳಿಸಿದರು. ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಇದುವರೆಗೆ 3,203 ಅರ್ಜಿಗಳು ಸ್ವೀಕೃತವಾಗಿದ್ದು, 27,996 ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದೆ ಎಂದು ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

More Stories
“ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ: ತಪ್ಪಿತಸ್ಥರನ್ನು ತಕ್ಷಣ ಅಮಾನತು ಮಾಡಿ, ಇಲ್ಲದಿದ್ದರೆ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಘೇರಾವ್ – ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ”
ಶಾಲೆಯಲ್ಲೇ ಮುಖ್ಯೋಪಾಧ್ಯಾಯರ ಕಿತ್ತಾಟ! ಸಿಸಿಟಿವಿ ಪರಿಶೀಲಿಸಿ ತಪ್ಪಿತಸ್ಥರನ್ನು ಅಮಾನತು ಮಾಡಿ ಕಠಿಣ ಕಾನೂನು ಕ್ರಮ ಜರುಗಿಸಿ: ಮಹಾನಾಯಕ ಜನಜಾಗೃತಿ ವೇದಿಕೆ ಆಗ್ರಹ
ರಸ್ತೆ ಒತ್ತುವರಿ ಆರೋಪ ನಿರಾಧಾರ; ಕಾನೂನುಬದ್ಧವಾಗಿಯೇ ರೆಸಾರ್ಟ್ ನಿರ್ಮಿಸಲಾಗಿದೆ: ರಮೇಶ್ ನಾಯಕ