July 16, 2026

₹9 ಕೋಟಿ ಶಾಲೆ ಕಟ್ಟಡ ಬೀಗದೊಳಗೆ, ಮಕ್ಕಳು ಗೋಡೌನ್‌ನಲ್ಲಿ: ವಸತಿ ನಿಲಯ ಅವ್ಯವಸ್ಥೆ, ಖಾಸಗಿ ಕಾಲೇಜು ಡೊನೇಷನ್ ವಿರುದ್ಧ ದಲಿತ ಸೇನೆ ಹೋರಾಟದ ಎಚ್ಚರಿಕೆ

🟥 ಟಿ ಪಬ್ಲಿಕ್ ನ್ಯೂಸ್ | ಕೊಪ್ಪಳ
ದಿನಾಂಕ: 09/07/2026

ಗಂಗಾವತಿ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರ ಸಮೀಪದ ಅಂಜೂರಿ ಕ್ಯಾಂಪ್‌ಗೆ ತೆರಳುವ ಮಾರ್ಗದಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳು ಕಳೆದ ಹಲವು ವರ್ಷಗಳಿಂದ ಗೋಡೌನ್‌ನಲ್ಲೇ ಶಿಕ್ಷಣ ಪಡೆಯುತ್ತಿರುವುದು ಸರ್ಕಾರದ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ದಲಿತ ಸೇನೆ ಕೊಪ್ಪಳ ಜಿಲ್ಲಾ ಅಧ್ಯಕ್ಷ ಉಡಚಪ್ಪ ಶ್ರೀರಾಮನಗರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

2023ರಲ್ಲಿ ₹9 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಹೊಸ ಶಾಲಾ ಕಟ್ಟಡ ಪೂರ್ಣಗೊಂಡು ಒಂದು ವರ್ಷಕ್ಕೂ ಅಧಿಕ ಕಾಲ ಕಳೆದಿದ್ದರೂ ಉದ್ಘಾಟನೆ ಮಾಡದೇ ವಿದ್ಯಾರ್ಥಿಗಳನ್ನು ಸ್ಥಳಾಂತರಿಸದಿರುವುದು ಅಧಿಕಾರಿಗಳ ನಿರ್ಲಕ್ಷ್ಯದ ಪರಮಾವಧಿಯಾಗಿದೆ ಎಂದು ಆರೋಪಿಸಿದರು. ಒಂದೆಡೆ ಕೋಟ್ಯಂತರ ರೂಪಾಯಿ ವೆಚ್ಚದ ಕಟ್ಟಡ ಬಳಕೆಯಾಗದೆ ಧೂಳು ತಿನ್ನುತ್ತಿದ್ದರೆ, ಮತ್ತೊಂದೆಡೆ 240 ವಿದ್ಯಾರ್ಥಿಗಳು ಮೂಲಸೌಕರ್ಯಗಳಿಲ್ಲದ ಗೋಡೌನ್‌ನಲ್ಲಿ ಶಿಕ್ಷಣ ಪಡೆಯುತ್ತಿರುವುದು ಅತ್ಯಂತ ದುರಂತಕರ ಬೆಳವಣಿಗೆಯಾಗಿದೆ ಎಂದು ಕಿಡಿಕಾರಿದರು.

ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 120 ಬಾಲಕರು ಹಾಗೂ 120 ಬಾಲಕಿಯರು ಶುದ್ಧ ಕುಡಿಯುವ ನೀರು, ಸಮರ್ಪಕ ಶೌಚಾಲಯ, ಸುರಕ್ಷಿತ ವಸತಿ ಸೇರಿದಂತೆ ಅಗತ್ಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ವಿಶೇಷವಾಗಿ ಬಾಲಕಿಯರು ಶಿಥಿಲಾವಸ್ಥೆಯ ತಾತ್ಕಾಲಿಕ ಶೌಚಾಲಯ ಬಳಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ದೂರಿದರು.

ಆರು ತಿಂಗಳ ಹಿಂದೆ ಸ್ಥಳೀಯ ಶಾಸಕರು ಒಂದು ತಿಂಗಳೊಳಗೆ ಹೊಸ ಕಟ್ಟಡ ಉದ್ಘಾಟನೆ ಮಾಡುವುದಾಗಿ ಭರವಸೆ ನೀಡಿದ್ದರೂ ಅದು ಈಡೇರಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ದಲಿತ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಹಿಟ್ನಾಳ್ ಅವರಿಗೆ ದಲಿತ ಸೇನೆ ಕೊಪ್ಪಳ ಜಿಲ್ಲಾ ಅಧ್ಯಕ್ಷ ಉಡಚಪ್ಪ ಶ್ರೀರಾಮನಗರ ಮನವಿ ಸಲ್ಲಿಸಿ, ಹೊಸ ಕಟ್ಟಡವನ್ನು ತಕ್ಷಣ ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಸ್ಥಳಾಂತರಗೊಳಿಸಿ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು.

ತಕ್ಷಣ ಕ್ರಮ ಕೈಗೊಳ್ಳದಿದ್ದರೆ ದಲಿತ ಸೇನೆಯ ನೇತೃತ್ವದಲ್ಲಿ ತೀವ್ರ ಹಾಗೂ ಉಗ್ರ ಹೋರಾಟ ನಡೆಸಲಾಗುವುದು ಎಂದು ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಬಾಲಕಿಯರ ವಸತಿ ನಿಲಯದ ಅವ್ಯವಸ್ಥೆ ಖಂಡಿಸಿ ಸಮಾಜ ಕಲ್ಯಾಣ ಇಲಾಖೆಗೆ ದಲಿತ ಸೇನೆ ದೂರು: ವಾರ್ಡನ್ ಅಮಾನತುಗೆ ಆಗ್ರಹ

ಕೊಪ್ಪಳ: ಗಂಗಾವತಿ ನಗರದ ಜಯನಗರ ಕುವೆಂಪು ಬಡಾವಣೆಯಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ಪರಿಶಿಷ್ಟ ಪಂಗಡದ ಬಾಲಕಿಯರ ವಸತಿ ನಿಲಯದಲ್ಲಿನ ಅವ್ಯವಸ್ಥೆ, ವಿದ್ಯಾರ್ಥಿನಿಯರಿಗೆ ಮೂಲಭೂತ ಸೌಲಭ್ಯಗಳ ಕೊರತೆ ಹಾಗೂ ವಾರ್ಡನ್ ಕರ್ತವ್ಯ ಲೋಪದ ವಿರುದ್ಧ ದಲಿತ ಸೇನೆ ಕೊಪ್ಪಳ ಜಿಲ್ಲಾ ಘಟಕವು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ತಕ್ಷಣ ಕಾನೂನು ಹಾಗೂ ಇಲಾಖಾ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ದಲಿತ ಸೇನೆ ಜಿಲ್ಲಾ ಅಧ್ಯಕ್ಷ ಉಡಚಪ್ಪ ಶ್ರೀರಾಮನಗರ ನೇತೃತ್ವದಲ್ಲಿ ಸಲ್ಲಿಸಲಾದ ಮನವಿಯಲ್ಲಿ, ವಸತಿ ನಿಲಯದಲ್ಲಿ ಶುದ್ಧ ಕುಡಿಯುವ ನೀರು, ಪೌಷ್ಟಿಕ ಆಹಾರ, ಸ್ವಚ್ಛತೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿನಿಯರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು 2026ರ ಮಾರ್ಚ್ 16ರಂದು ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದ್ದರೂ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಬಂದಿಲ್ಲ ಎಂದು ದೂರಲಾಗಿದೆ. ಈ ಹಿಂದೆ ಅಂದಿನ ಸಚಿವ ಬಿ. ನಾಗೇಂದ್ರ ಅವರು ವಸತಿ ನಿಲಯಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಒಂದು ವಾರದೊಳಗೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರೂ, ಪರಿಸ್ಥಿತಿ ಮತ್ತೆ ಹದಗೆಟ್ಟಿರುವುದು ಖಂಡನೀಯ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ವಾರ್ಡನ್ ಮೌನೇಶ್ವರಿ ಅವರು ಎರಡು ವಸತಿ ನಿಲಯಗಳ ಜವಾಬ್ದಾರಿ ನಿರ್ವಹಿಸುತ್ತಿದ್ದು, ಕರ್ತವ್ಯ ನಿರ್ಲಕ್ಷ್ಯ ಎಸಗುತ್ತಿದ್ದಾರೆ ಎಂಬ ಆರೋಪವನ್ನೂ ಮಾಡಲಾಗಿದೆ. ಕೂಡಲೇ ಹಿರಿಯ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ನಡೆಸಿ, ಇಲಾಖಾ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಲಾಗಿದೆ.

ಜತೆಗೆ, ಪತ್ರಿಕಾ ವರದಿ ಪ್ರಕಟವಾದ ನಂತರ ಅಧಿಕಾರಿಗಳು ಕೈಗೊಂಡ ಕ್ರಮಗಳ ವರದಿಯನ್ನು ನೀಡಬೇಕು. ಒಂದು ವೇಳೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಅದರ ಕಾರಣವನ್ನು ಲಿಖಿತ ರೂಪದಲ್ಲಿ ತಿಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿಗೆ ಸ್ಪಂದಿಸಿ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರು ಉಗ್ರ ಪ್ರತಿಭಟನೆ, ಧರಣಿ ಹಾಗೂ ಇಲಾಖೆ ಮುತ್ತಿಗೆ ಹಮ್ಮಿಕೊಳ್ಳಲಾಗುವುದು ಎಂದು ದಲಿತ ಸೇನೆ ಎಚ್ಚರಿಕೆ ನೀಡಿದೆ.

ಖಾಸಗಿ ಕಾಲೇಜುಗಳ ಅಕ್ರಮ ಡೊನೇಷನ್ ವಿರುದ್ಧ ದಲಿತ ಸೇನೆ ಧ್ವನಿ: ಕೊಪ್ಪಳ ಜಿಲ್ಲೆಯಲ್ಲಿ ತನಿಖೆ, ಶುಲ್ಕ ಪಾರದರ್ಶಕತೆಗೆ ಮನವಿ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಖಾಸಗಿ ಪದವಿ ಪೂರ್ವ ಕಾಲೇಜುಗಳು, ಪದವಿ ಕಾಲೇಜುಗಳು ಹಾಗೂ ಇತರೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅಕ್ರಮ ಡೊನೇಷನ್ ಮತ್ತು ಅನಧಿಕೃತ ಶುಲ್ಕ ವಸೂಲಾತಿ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ದಲಿತ ಸೇನೆ ಕೊಪ್ಪಳ ಜಿಲ್ಲಾ ಅಧ್ಯಕ್ಷ ಉಡಚಪ್ಪ ಶ್ರೀರಾಮನಗರ ಅವರು ಜಿಲ್ಲಾಧಿಕಾರಿ, ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಉನ್ನತ ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

ಮನವಿಯಲ್ಲಿ ಜಿಲ್ಲೆಯ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ಪರಿಶೀಲನೆ ನಡೆಸಬೇಕು. ಪ್ರತಿಯೊಂದು ಕಾಲೇಜಿನ ಪ್ರವೇಶ ದ್ವಾರದಲ್ಲಿ ಪ್ರವೇಶ ಶುಲ್ಕ, ಬೋಧನಾ ಶುಲ್ಕ, ವಾರ್ಷಿಕ ಶುಲ್ಕ, ಪ್ರಯೋಗಾಲಯ, ಗ್ರಂಥಾಲಯ, ಕಟ್ಟಡ ನಿಧಿ, ಅಭಿವೃದ್ಧಿ ಶುಲ್ಕ, ಸಾರಿಗೆ, ವಸತಿ ಸೇರಿದಂತೆ ಎಲ್ಲಾ ಶುಲ್ಕಗಳ ಸಂಪೂರ್ಣ ವಿವರಗಳನ್ನು ಕಡ್ಡಾಯವಾಗಿ ಸಾರ್ವಜನಿಕ ಫಲಕದಲ್ಲಿ ಪ್ರಕಟಿಸಬೇಕು ಎಂದು ಆಗ್ರಹಿಸಲಾಗಿದೆ.

ಇದಲ್ಲದೆ, ವಿದ್ಯಾರ್ಥಿಗಳ ಸಂಖ್ಯೆ, ಶುಲ್ಕದಿಂದ ಬಂದಿರುವ ಆದಾಯ ಹಾಗೂ ಮೂಲಭೂತ ಸೌಲಭ್ಯಗಳಿಗೆ ಮಾಡಿರುವ ವೆಚ್ಚದ ವಿವರಗಳನ್ನು ಪರಿಶೀಲಿಸಬೇಕು. ಅಕ್ರಮ ಡೊನೇಷನ್ ಅಥವಾ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಿತ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಅಗತ್ಯವಿದ್ದರೆ ಮಾನ್ಯತೆ ರದ್ದುಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಶಿಕ್ಷಣ ಸಂಸ್ಥೆಗಳಲ್ಲಿ ದೂರು ಪೆಟ್ಟಿಗೆ ಹಾಗೂ ಶುಲ್ಕ ಸಂಬಂಧಿತ ಸಹಾಯವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಪ್ರಕಟಿಸುವಂತೆ ಆದೇಶಿಸಬೇಕು ಮತ್ತು ಜಿಲ್ಲೆಯಾದ್ಯಂತ ವಿಶೇಷ ಪರಿಶೀಲನಾ ತಂಡ ರಚಿಸಿ ತಪಾಸಣೆ ನಡೆಸಬೇಕು ಎಂದು ಉಡಚಪ್ಪ ಶ್ರೀರಾಮನಗರ ಮನವಿಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಮತ್ತು ಪೋಷಕರ ಆರ್ಥಿಕ ಶೋಷಣೆಯನ್ನು ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಈ ದೂರನ್ನು ಗಂಭೀರವಾಗಿ ಪರಿಗಣಿಸಿ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News

About The Author

error: Content is protected !!