July 16, 2026

ಸಂಪರ್ಕ ರಸ್ತೆ ಇಲ್ಲದೇ ರೆಸಾರ್ಟ್‌ಗೆ ಎನ್‌ಒಸಿ ನೀಡಿದ ಆರೋಪ: ಹಂಪಿ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಭೂಮಾಲೀಕರ ಆಕ್ರೋಶ

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 08/07/2026

ಗಂಗಾವತಿ: ತಾಲೂಕಿನ ಹನುಮನಹಳ್ಳಿ ಗ್ರಾಮದ ಸರ್ವೆ ನಂ. 75 ಹಾಗೂ 84ರ ಕೃಷಿ ಭೂಮಿಯಲ್ಲಿ ಸಂಪರ್ಕ ರಸ್ತೆ ಇಲ್ಲದಿದ್ದರೂ ರೆಸಾರ್ಟ್ ನಿರ್ಮಾಣಕ್ಕೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ಎನ್‌ಒಸಿ ನೀಡಿರುವುದು ಅಕ್ರಮವಾಗಿದ್ದು, ಕೂಡಲೇ ನೀಡಿರುವ ಪರವಾನಗಿ ಹಾಗೂ ಎನ್‌ಒಸಿಯನ್ನು ರದ್ದುಪಡಿಸಬೇಕು ಎಂದು ಸರ್ವೆ ನಂ. 61ರ ಭೂಮಾಲೀಕರಾದ ಶಾಂತಮ್ಮ ಹಾಗೂ ಅಣ್ಣಪ್ಪ ನಾಯಕ ಆಗ್ರಹಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಂಪಿ ಅಭಿವೃದ್ಧಿ ಪ್ರಾಧಿಕಾರದ ನಿಯಮಗಳ ಪ್ರಕಾರ ಹೋಟೆಲ್ ಅಥವಾ ರೆಸಾರ್ಟ್ ನಿರ್ಮಾಣಕ್ಕೆ ಕನಿಷ್ಠ 12 ಮೀಟರ್ ಅಗಲದ ಸಂಪರ್ಕ ರಸ್ತೆ ಇರಬೇಕು. ಅಲ್ಲದೆ, ರಸ್ತೆ ಲೋಕೋಪಯೋಗಿ, ನೀರಾವರಿ ಅಥವಾ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ಇಲಾಖೆಯ ವ್ಯಾಪ್ತಿಯಲ್ಲಿರಬೇಕು. ಆದರೆ ಸಂಬಂಧಿತ ಜಾಗಕ್ಕೆ ಯಾವುದೇ ಅಧಿಕೃತ ಸಂಪರ್ಕ ರಸ್ತೆ ಇಲ್ಲದಿದ್ದರೂ ಭೂಮಾಪನ ಇಲಾಖೆ ಅಧಿಕಾರಿಗಳು ಹಾಗೂ ಸಾಣಾಪುರ ಗ್ರಾಮ ಪಂಚಾಯಿತಿ ಪಿಡಿಒ ಅಕ್ರಮವಾಗಿ ರಸ್ತೆ ನಕ್ಷೆ ಸೃಷ್ಟಿಸಿ, ಅದರ ಆಧಾರದ ಮೇಲೆ ನಕಲಿ ದಾಖಲೆಗಳನ್ನು ಸಲ್ಲಿಸಿ ರೆಸಾರ್ಟ್ ನಿರ್ಮಾಣಕ್ಕೆ ಎನ್‌ಒಸಿ ಪಡೆಯಲಾಗಿದೆ ಎಂದು ಆರೋಪಿಸಿದರು.

ರೆಸಾರ್ಟ್ ನಿರ್ಮಾಣದಿಂದ ತಮ್ಮ ಮನೆಗಳ ಪಕ್ಕದಲ್ಲೇ ನಿರಂತರವಾಗಿ ಭಾರೀ ವಾಹನಗಳ ಸಂಚಾರ ನಡೆಯುತ್ತಿದ್ದು, ಇದರಿಂದ ಕುಟುಂಬದ ದೈನಂದಿನ ಜೀವನಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ದೂರಿದರು.

ಇದಲ್ಲದೆ, ತಮ್ಮ ಸ್ವಂತ ಸರ್ವೆ ನಂ. 61ರ ಜಮೀನಿನಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಬಾರದೆಂದು ವಿರೋಧ ವ್ಯಕ್ತಪಡಿಸಿದ್ದರೂ, ಪೊಲೀಸ್ ಭದ್ರತೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ತಮ್ಮ ಖಾಸಗಿ ಆಸ್ತಿಯನ್ನು ದುರುಪಯೋಗಪಡಿಸಿಕೊಂಡಿರುವುದಾಗಿ ಅವರು ಆರೋಪಿಸಿದರು.

ಈ ಕುರಿತು ಈಗಾಗಲೇ ಹಂಪಿ ಅಭಿವೃದ್ಧಿ ಪ್ರಾಧಿಕಾರ, ಸಾಣಾಪುರ ಗ್ರಾಮ ಪಂಚಾಯಿತಿ, ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿತ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೀಗಾಗಿ, ಹಂಪಿ ಅಭಿವೃದ್ಧಿ ಪ್ರಾಧಿಕಾರವು ರೆಸಾರ್ಟ್‌ಗೆ ನೀಡಿರುವ ಎನ್‌ಒಸಿ ಹಾಗೂ ಕಟ್ಟಡ ಪರವಾನಗಿಯನ್ನು ಕೂಡಲೇ ರದ್ದುಪಡಿಸಿ ಅಕ್ರಮಕ್ಕೆ ಹೊಣೆಗಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ತಮ್ಮ ಮನವಿಗೆ ಸ್ಪಂದಿಸದಿದ್ದರೆ, ಕುಟುಂಬ ಸಮೇತ ಜಿಲ್ಲಾಧಿಕಾರಿ ಕಚೇರಿ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಶಾಂತಮ್ಮ ಹಾಗೂ ಅಣ್ಣಪ್ಪ ನಾಯಕ ಎಚ್ಚರಿಕೆ

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News

About The Author

error: Content is protected !!