🟥 ಟಿ ಪಬ್ಲಿಕ್ ನ್ಯೂಸ್ | ಕನಕಗಿರಿ
ದಿನಾಂಕ: 06/07/2026
ಕನಕಗಿರಿ: ತಾಲೂಕಿನ ಚಿರ್ಚನಗುಡ್ಡ ತಾಂಡಾ ಸಮೀಪ ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಯುವಕನ ಬರ್ಬರ ಹತ್ಯೆ ಪ್ರಕರಣವನ್ನು ಕನಕಗಿರಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಆಸ್ತಿ ವಿವಾದ ಮತ್ತು ಕೌಟುಂಬಿಕ ಕಲಹವೇ ಕೊಲೆಗೆ ಕಾರಣವಾಗಿದ್ದು, ಮೃತನ ಸ್ವಂತ ಅಣ್ಣ ಹಾಗೂ ಅಳಿಯನೇ ಸೇರಿ ಹತ್ಯೆ ನಡೆಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.


ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಅಣ್ಣ ಅಯ್ಯನಗೌಡ ಹಾಗೂ ಅಳಿಯ ಗಂಗಾಧರರನ್ನು ಬಂಧಿಸಿರುವ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹತ್ಯೆಯಾದ ವ್ಯಕ್ತಿಯನ್ನು ಗಂಗಾವತಿ ತಾಲೂಕಿನ ಕೆಸರಹಟ್ಟಿ ಗ್ರಾಮದ ದೇವರಾಜ್ ಮಲ್ಲಿಕಾರ್ಜುನ್ ಮಾಲೀಪಾಟೀಲ್ (33) ಎಂದು ಗುರುತಿಸಲಾಗಿದೆ.


ಪೊಲೀಸರ ಮಾಹಿತಿ ಪ್ರಕಾರ, ದೇವರಾಜ್‌ಗೆ ಮದ್ಯಪಾನದ ಚಟವಿದ್ದು, ಆಗಾಗ ಮನೆಗೆ ಬಂದು ಆಸ್ತಿ ಪಾಲು ಕೇಳಿ ಕುಟುಂಬ ಸದಸ್ಯರೊಂದಿಗೆ ಜಗಳವಾಡುತ್ತಿದ್ದ. ಜೂನ್ 28 ರಂದು ಇದೇ ವಿಚಾರವಾಗಿ ನಡೆದ ತೀವ್ರ ವಾಗ್ವಾದದ ವೇಳೆ ಆಕ್ರೋಶಗೊಂಡ ಅಣ್ಣ ಮತ್ತು ಅಳಿಯ ಸೇರಿ ದೇವರಾಜ್‌ನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಕೊಲೆ ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶವವನ್ನು ಹಳೆಯ ಕೌದಿಯಲ್ಲಿ ಸುತ್ತಿ ಬೈಕ್‌ನಲ್ಲಿ ಚಿರ್ಚನಗುಡ್ಡ ತಾಂಡಾ ಸಮೀಪದ ನಿರ್ಜನ ಪ್ರದೇಶಕ್ಕೆ ಸಾಗಿಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು.
ಶವ ಸಂಪೂರ್ಣ ಕರಕಲಾಗಿದ್ದರಿಂದ ಮೃತನ ಗುರುತು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು. ಆದರೆ, ಮೃತನ ಕಾಲಿನಲ್ಲಿದ್ದ ವೈದ್ಯಕೀಯ ಇಂಪ್ಲಾಂಟ್ ರಾಡ್ ತನಿಖೆಗೆ ಪ್ರಮುಖ ಸುಳಿವಾಯಿತು. ಇತ್ತೀಚೆಗೆ ಕಾಣೆಯಾದವರ ಮಾಹಿತಿಯನ್ನು ಪರಿಶೀಲಿಸಿದ ಪೊಲೀಸರು, ಕೆಸರಹಟ್ಟಿ ಗ್ರಾಮದ ದೇವರಾಜ್ ಕಾಣೆಯಾಗಿರುವ ಮಾಹಿತಿ ಆಧರಿಸಿ ಕುಟುಂಬಸ್ಥರನ್ನು ವಿಚಾರಣೆ ನಡೆಸಿದರು. ಬಳಿಕ ತೀವ್ರ ವಿಚಾರಣೆಯಲ್ಲಿ ಆರೋಪಿಗಳು ಕೊಲೆ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.
ಕೇವಲ ಕಾಲಿನಲ್ಲಿದ್ದ ವೈದ್ಯಕೀಯ ರಾಡ್ ಆಧರಿಸಿ ಕೆಲವೇ ದಿನಗಳಲ್ಲಿ ಪ್ರಕರಣವನ್ನು ಭೇದಿಸಿದ ಕನಕಗಿರಿ ಪೊಲೀಸರ ಕಾರ್ಯಕ್ಷಮತೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

More Stories
ಸಂಪರ್ಕ ರಸ್ತೆ ಇಲ್ಲದೇ ರೆಸಾರ್ಟ್ಗೆ ಎನ್ಒಸಿ ನೀಡಿದ ಆರೋಪ: ಹಂಪಿ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಭೂಮಾಲೀಕರ ಆಕ್ರೋಶ
ಕನಕಗಿರಿಯಲ್ಲಿ ಮತ್ತೆ ರಕ್ತದ ಕಲೆ! ಯುವಕನ ಬರ್ಬರ ಹತ್ಯೆ ಬಳಿಕ ಶವಕ್ಕೆ ಬೆಂಕಿ – ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತವೇ?
ಅಪರಾಧ ಚಟುವಟಿಕೆಗಳು