July 16, 2026

ಕನಕಗಿರಿಯಲ್ಲಿ ಮತ್ತೆ ರಕ್ತದ ಕಲೆ! ಯುವಕನ ಬರ್ಬರ ಹತ್ಯೆ ಬಳಿಕ ಶವಕ್ಕೆ ಬೆಂಕಿ – ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತವೇ?

🟥 ಟಿ ಪಬ್ಲಿಕ್ ನ್ಯೂಸ್ | ಕನಕಗಿರಿ
ದಿನಾಂಕ: 06/07/2026

ಚಿರ್ಚನಗುಡ್ಡ ತಾಂಡಾ ಬಳಿ ಕರಕಲು ಶವ ಪತ್ತೆ; ಸಾಕ್ಷ್ಯ ನಾಶಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳ ಶಂಕೆ – ಸರಣಿ ಭೀಕರ ಘಟನೆಗಳಿಂದ ಜನರಲ್ಲಿ ತೀವ್ರ ಆತಂಕ

ಕನಕಗಿರಿ: ಕಾನೂನು ಸುವ್ಯವಸ್ಥೆಗೆ ಮತ್ತೊಮ್ಮೆ ಸವಾಲೊಡ್ಡುವಂತೆ ಕನಕಗಿರಿ ತಾಲೂಕಿನಲ್ಲಿ ಮತ್ತೊಂದು ಅಮಾನವೀಯ ಹಾಗೂ ಬೆಚ್ಚಿಬೀಳಿಸುವ ಕೊಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸಮೀಪದ ಚಿರ್ಚನಗುಡ್ಡ ತಾಂಡಾ ಹೊರವಲಯದ ನಿರ್ಜನ ಪ್ರದೇಶದಲ್ಲಿ ಸುಮಾರು 25 ರಿಂದ 30 ವರ್ಷದೊಳಗಿನ ಅಪರಿಚಿತ ಯುವಕನನ್ನು ದುಷ್ಕರ್ಮಿಗಳು ಅತ್ಯಂತ ಬರ್ಬರವಾಗಿ ಹತ್ಯೆಗೈದು, ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶವಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಕಳೆದ ತಿಂಗಳಷ್ಟೇ ಕನಕಗಿರಿಯಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ, ಜೀವಂತವಾಗಿ ಬೆಂಕಿ ಹಚ್ಚಿ ಹತ್ಯೆ ಮಾಡಿದ್ದ ಪ್ರಕರಣದ ಆಘಾತ ಇನ್ನೂ ಮಾಸುವ ಮುನ್ನವೇ ಮತ್ತೊಂದು ಕ್ರೂರ ಕೃತ್ಯ ನಡೆದಿರುವುದು ಸಾರ್ವಜನಿಕರಲ್ಲಿ ತೀವ್ರ ಭಯ, ಆಕ್ರೋಶ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ. ತಾಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಇಂತಹ ಭೀಕರ ಘಟನೆಗಳು ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಸುಮಾರು ಮೂರುರಿಂದ ನಾಲ್ಕು ದಿನಗಳ ಹಿಂದೆಯೇ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಶನಿವಾರ ಮಧ್ಯಾಹ್ನ ಹೊಲಕ್ಕೆ ತೆರಳುತ್ತಿದ್ದ ಮಹಿಳೆಯೊಬ್ಬರಿಗೆ ತೀವ್ರ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದಾಗ ಸಂಪೂರ್ಣವಾಗಿ ಕರಕಲಾಗಿದ್ದ ಶವ ಪತ್ತೆಯಾಗಿದೆ. ತಕ್ಷಣವೇ ಗ್ರಾಮಸ್ಥರಿಗೆ ಮಾಹಿತಿ ನೀಡಲಾಗಿದ್ದು, ಬಳಿಕ ಕನಕಗಿರಿ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್. ಅರಸಿದ್ದಿ, ಗಂಗಾವತಿ ಡಿವೈಎಸ್ಪಿ ಜೆ. ನ್ಯಾಮಗೌಡರ್ ಹಾಗೂ ಕನಕಗಿರಿ ಪೊಲೀಸ್ ಠಾಣೆಯ ಸಿಪಿಐ ನಾರಾಯಣ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶವದ ಮುಖ ಸೇರಿದಂತೆ ದೇಹದ ಬಹುಭಾಗ ಸುಟ್ಟು ಕರಕಲಾಗಿರುವುದರಿಂದ ಮೃತನ ಗುರುತು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.

ಬೆರಳಚ್ಚು ತಜ್ಞರು ಹಾಗೂ ಶ್ವಾನದಳದ ಸಹಾಯದಿಂದ ಸ್ಥಳದಲ್ಲಿನ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದು, ಮೃತ ಯುವಕ ಯಾರು, ಕೊಲೆಯ ಹಿಂದಿನ ಉದ್ದೇಶ ಏನು ಹಾಗೂ ಆರೋಪಿಗಳು ಯಾರು ಎಂಬುದರ ಕುರಿತು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕರ ಪತ್ತೆಗೆ ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿದೆ.

ತಾಲೂಕಿನಲ್ಲಿ ಒಂದರ ಹಿಂದೆ ಒಂದರಂತೆ ನಡೆಯುತ್ತಿರುವ ಹತ್ಯೆ ಹಾಗೂ ಅಮಾನವೀಯ ಕೃತ್ಯಗಳು ಸಾರ್ವಜನಿಕರಲ್ಲಿ ಭದ್ರತೆಯ ಬಗ್ಗೆ ತೀವ್ರ ಆತಂಕ ಉಂಟುಮಾಡಿವೆ. ಆರೋಪಿಗಳನ್ನು ಶೀಘ್ರವೇ ಬಂಧಿಸಿ, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News

About The Author

error: Content is protected !!