🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 04/07/2026
ಗಂಗಾವತಿ: ನಗರದ ಪ್ರಶಾಂತ ನಗರದಲ್ಲಿ ಶನಿವಾರ ನಡೆದ ಹೃದಯವಿದ್ರಾವಕ ಘಟನೆ ಇಡೀ ಗಂಗಾವತಿ ನಗರವನ್ನು ಆಘಾತಕ್ಕೀಡು ಮಾಡಿದೆ. ನಗರದ ಖ್ಯಾತ ಚಿನ್ನದ ವ್ಯಾಪಾರಿಗಳು ಹಾಗೂ ಪ್ರತಿಷ್ಠಿತ ರಾಯ್ಕರ್ ಕುಟುಂಬದ ಮೂವರು ಸದಸ್ಯರು ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೀವ್ರ ಸಂಚಲನ ಮೂಡಿಸಿದೆ.
ಮೃತರನ್ನು ಪ್ರಕಾಶ್ ರಾಯ್ಕರ್ (60), ಅವರ ಪತ್ನಿ ಪ್ರಭಾ ರಾಯ್ಕರ್ (50) ಹಾಗೂ ಪುತ್ರ ಶಶಾಂಕ್ ರಾಯ್ಕರ್ ಇಂಜಿನಿಯರಿಂಗ್ ಓದುತ್ತಿದ್ದ (25) ಎಂದು ಗುರುತಿಸಲಾಗಿದೆ. ನಗರದಲ್ಲಿ ಹಲವು ವರ್ಷಗಳಿಂದ ಗೌರವಾನ್ವಿತ ವ್ಯಾಪಾರಿಕ ಕುಟುಂಬವೆಂದು ಹೆಸರಾಗಿದ್ದ ರಾಯ್ಕರ್ ಕುಟುಂಬದ ಈ ದುರಂತ ಅಂತ್ಯ ಸಾರ್ವಜನಿಕರನ್ನು ಬೆಚ್ಚಿಬೀಳುವಂತೆ ಮಾಡಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ರಾಯ್ಕರ್ ಕುಟುಂಬವು ವ್ಯವಹಾರ ಹಾಗೂ ಇತರೆ ಕಾರಣಗಳಿಗಾಗಿ ಕೋಟ್ಯಂತರ ರೂಪಾಯಿ ಸಾಲ ಮಾಡಿಕೊಂಡಿದ್ದು, ಕಳೆದ ಕೆಲವು ತಿಂಗಳುಗಳಿಂದ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿತ್ತು ಎನ್ನಲಾಗಿದೆ. ಸಾಲ ಮರುಪಾವತಿಯಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಕುಟುಂಬದ ಒಡೆತನದ ಮನೆಗಳನ್ನು ಇತ್ತೀಚೆಗೆ ಮುಟ್ಟುಗೋಲು ಹಾಕಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಬೆಳವಣಿಗೆಯು ಕುಟುಂಬವನ್ನು ತೀವ್ರ ಮಾನಸಿಕ ಒತ್ತಡಕ್ಕೆ ದೂಡಿದ್ದು, ಅಂತಿಮವಾಗಿ ಆತ್ಮಹತ್ಯೆಯಂತಹ ಕಠಿಣ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಈ ಘಟನೆಯು ಮತ್ತೊಂದು ಕಟು ಸತ್ಯವನ್ನು ಸಮಾಜದ ಮುಂದೆ ಅನಾವರಣಗೊಳಿಸಿದೆ. ಅಪಾರ ಪರಿಚಯಸ್ಥರು, ದೊಡ್ಡ ಜನಬಳಗ ಹಾಗೂ ಸಾಮಾಜಿಕ ಪ್ರತಿಷ್ಠೆ ಹೊಂದಿದ್ದ ಕುಟುಂಬ ಸಂಕಷ್ಟದ ಸಂದರ್ಭದಲ್ಲಿ ಸಂಪೂರ್ಣ ಏಕಾಂಗಿಯಾಗಿತ್ತೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಗಂಭೀರ ಚರ್ಚೆಗೆ ಗ್ರಾಸವಾಗಿದೆ. ಆರ್ಥಿಕ ಬಿಕ್ಕಟ್ಟಿನ ಹೊತ್ತಿನಲ್ಲಿ ನೆರವಿನ ಹಸ್ತ ಚಾಚುವವರು ಸಿಗದ ನೋವು ಈ ದುರಂತಕ್ಕೆ ಹಿನ್ನೆಲೆಯಾಗಿರಬಹುದೆಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಈ ಕುರಿತು ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗಿಲ್ಲ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ), ಗಂಗಾವತಿ ಡಿವೈಎಸ್‌ಪಿ, ನಗರ ಪೊಲೀಸ್ ಠಾಣೆಯ ಪಿಐ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದ್ದು, ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯ ವರದಿಯ ಬಳಿಕವೇ ಸ್ಪಷ್ಟವಾಗಲಿದೆ. ಸದ್ಯ ಪ್ರಕರಣದ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

More Stories
“ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ: ತಪ್ಪಿತಸ್ಥರನ್ನು ತಕ್ಷಣ ಅಮಾನತು ಮಾಡಿ, ಇಲ್ಲದಿದ್ದರೆ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಘೇರಾವ್ – ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ”
ಶಾಲೆಯಲ್ಲೇ ಮುಖ್ಯೋಪಾಧ್ಯಾಯರ ಕಿತ್ತಾಟ! ಸಿಸಿಟಿವಿ ಪರಿಶೀಲಿಸಿ ತಪ್ಪಿತಸ್ಥರನ್ನು ಅಮಾನತು ಮಾಡಿ ಕಠಿಣ ಕಾನೂನು ಕ್ರಮ ಜರುಗಿಸಿ: ಮಹಾನಾಯಕ ಜನಜಾಗೃತಿ ವೇದಿಕೆ ಆಗ್ರಹ
ರಸ್ತೆ ಒತ್ತುವರಿ ಆರೋಪ ನಿರಾಧಾರ; ಕಾನೂನುಬದ್ಧವಾಗಿಯೇ ರೆಸಾರ್ಟ್ ನಿರ್ಮಿಸಲಾಗಿದೆ: ರಮೇಶ್ ನಾಯಕ