🟥 ಟಿ ಪಬ್ಲಿಕ್ ನ್ಯೂಸ್ | ಉಡಮಕಲ್
ದಿನಾಂಕ: 06/07/2026
ಗಂಗಾವತಿ: ತಾಲೂಕು ವ್ಯಾಪ್ತಿಯ ಉಡಮಕಲ್ ಗ್ರಾಮದಲ್ಲಿ ಕಾರ್ ಹುಣ್ಣಿಮೆ ಹಬ್ಬದ ಅಂಗವಾಗಿ ಸಂಪ್ರದಾಯ ಮತ್ತು ಸಂಭ್ರಮವನ್ನು ಪ್ರತಿಬಿಂಬಿಸುವ ಹೋರಿ ಓಡಿಸುವ ಸ್ಪರ್ಧೆಯನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಭಾಗಗಳಿಂದ ಆಗಮಿಸಿದ್ದ ನೂರಾರು ಜನರ ಸಮ್ಮುಖದಲ್ಲಿ ನಡೆದ ಸ್ಪರ್ಧೆ ತೀವ್ರ ಪೈಪೋಟಿಗೆ ಸಾಕ್ಷಿಯಾಯಿತು.

ಸ್ಪರ್ಧೆಯಲ್ಲಿ ಗ್ರಾಮದ ಪ್ರತಿಷ್ಠಿತ ಬಸರಿಹಾಳ ಲಕ್ಷ್ಮಮ್ಮ ಅವರ ಕುಟುಂಬದ ಹೋರಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತು. ವಿಜೇತ ಹೋರಿಯ ಮಾಲೀಕರಿಗೆ ₹1,0000 ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಯನ್ನು ನೀಡಿ ಗೌರವಿಸಲಾಯಿತು.
ಇದೇ ವೇಳೆ ವಿಜೇತ ಹೋರಿಯನ್ನು ಪ್ರಥಮ ಸ್ಥಾನಕ್ಕೆ ತಲುಪುವಂತೆ ಚಾಣಾಕ್ಷತನದಿಂದ ಓಡಿಸಿದ ಗ್ರಾಮದ ಯುವಕ ಕರಿಬಸವ ನಾಯಕ ಅವರಿಗೆ ₹501 ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಅವರ ಕೌಶಲ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಪರ್ಧೆ ಮುಕ್ತಾಯಗೊಂಡ ಬಳಿಕ ರಾತ್ರಿ ವೇಳೆ ವಿಜೇತ ಹೋರಿಯನ್ನು ಭಾಜಾ-ಬಜಂತ್ರಿ, ಡೊಳ್ಳು ಹಾಗೂ ಸಂಭ್ರಮದ ವಾತಾವರಣದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಗ್ರಾಮಸ್ಥರು ಹರ್ಷೋದ್ಗಾರಗಳೊಂದಿಗೆ ವಿಜಯೋತ್ಸವದಲ್ಲಿ ಭಾಗವಹಿಸಿ ಕಾರ್ ಹುಣ್ಣಿಮೆಯ ಸಂಭ್ರಮವನ್ನು ಇನ್ನಷ್ಟು ಕಂಗೊಳಿಸಿದರು.
ಗೊಂದಲ ಹೋರಿ ಓಡಿಸುವ ಸ್ಪರ್ಧೆಯ ಫಲಿತಾಂಶ ಘೋಷಣೆ ವೇಳೆ ಸ್ವಲ್ಪ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸ್ಪರ್ಧೆಯಲ್ಲಿ ಕೆಲವು ಹೋರಿಗಳು ಮುಂದೆ-ಹಿಂದೆ ಓಡಿರುವುದರಿಂದ ವಿಜೇತರ ಆಯ್ಕೆ ಕುರಿತು ಸ್ಪರ್ಧಾಳುಗಳು ಹಾಗೂ ಗ್ರಾಮಸ್ಥರ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಯಿತು. ಬಳಿಕ ಗ್ರಾಮದ ಪಂಚಾಯಿತಿ ಕಟ್ಟೆಯ ಮೇಲೆ ಗ್ರಾಮ ಗೌರವ ಹಿರಿಯರು, ಮುಖಂಡರು ಹಾಗೂ ಆಯೋಜಕರು ಸಭೆ ನಡೆಸಿ ಸ್ಪರ್ಧೆಯ ಸಂಪೂರ್ಣ ಬೆಳವಣಿಗೆಯನ್ನು ಪರಿಶೀಲಿಸಿದರು. ಎಲ್ಲರ ಅಭಿಪ್ರಾಯಗಳನ್ನು ಆಲಿಸಿದ ನಂತರ ಸೌಹಾರ್ದಯುತವಾಗಿ ಅಂತಿಮ ತೀರ್ಮಾನ ಕೈಗೊಂಡು ಬಹುಮಾನಗಳ ಪಟ್ಟಿಯನ್ನು ಪ್ರಕಟಿಸಿದರು. ಕಿರಿಯರು ಮಧ್ಯಸ್ಥಿಕೆಯಿಂದ ಉಂಟಾಗಿದ್ದ ಗೊಂದಲ ಶಮನಗೊಂಡಿದ್ದು, ಗ್ರಾಮಸ್ಥರು ಹಾಗೂ ಸ್ಪರ್ಧಾಳುಗಳು ಅಂತಿಮ ನಿರ್ಧಾರವನ್ನು ಒಪ್ಪಿಕೊಂಡರು. ಯಾವುದೇ ಅಹಿತಕರ ಘಟನೆ ನಡೆಯದೆ, ಸಂಪ್ರದಾಯಬದ್ಧವಾಗಿ ನಡೆದ ಸ್ಪರ್ಧೆ ಗ್ರಾಮಸ್ಥರ ಸಹಕಾರದಿಂದ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಈ ಹೋರಿ ಓಡಿಸುವ ಸ್ಪರ್ಧೆಗೆ ಹನುಮಂತಪ್ಪ ತಳವಾರ್ ಹಾಗೂ ಶಿವಪುತ್ರ ಮುಕುರ್ತನಾಳು ಅವರ ಬಂಧುಗಳು ಪ್ರಾಯೋಜಕತ್ವ ವಹಿಸಿ ಬಹುಮಾನಗಳನ್ನು ನೀಡಿದರು. ಅವರ ಸಮಾಜಮುಖಿ ಸಹಕಾರವನ್ನು ಗ್ರಾಮಸ್ಥರು ಶ್ಲಾಘಿಸಿದರು.
ಕಾರ್ ಹುಣ್ಣಿಮೆ ಪ್ರಯುಕ್ತ ಆಯೋಜಿಸಲಾದ ಈ ಹೋರಿ ಓಟದ ಸ್ಪರ್ಧೆ ಗ್ರಾಮೀಣ ಕ್ರೀಡೆ, ಸಂಪ್ರದಾಯ ಮತ್ತು ಸಾಮೂಹಿಕ ಸಂಭ್ರಮಕ್ಕೆ ಮತ್ತೊಂದು ಜೀವಂತ ನಿದರ್ಶನವಾಗಿ ಯಶಸ್ವಿಯಾಗಿ ನೆರವೇರಿತು.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

More Stories
“ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ: ತಪ್ಪಿತಸ್ಥರನ್ನು ತಕ್ಷಣ ಅಮಾನತು ಮಾಡಿ, ಇಲ್ಲದಿದ್ದರೆ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಘೇರಾವ್ – ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ”
ಶಾಲೆಯಲ್ಲೇ ಮುಖ್ಯೋಪಾಧ್ಯಾಯರ ಕಿತ್ತಾಟ! ಸಿಸಿಟಿವಿ ಪರಿಶೀಲಿಸಿ ತಪ್ಪಿತಸ್ಥರನ್ನು ಅಮಾನತು ಮಾಡಿ ಕಠಿಣ ಕಾನೂನು ಕ್ರಮ ಜರುಗಿಸಿ: ಮಹಾನಾಯಕ ಜನಜಾಗೃತಿ ವೇದಿಕೆ ಆಗ್ರಹ
ರಸ್ತೆ ಒತ್ತುವರಿ ಆರೋಪ ನಿರಾಧಾರ; ಕಾನೂನುಬದ್ಧವಾಗಿಯೇ ರೆಸಾರ್ಟ್ ನಿರ್ಮಿಸಲಾಗಿದೆ: ರಮೇಶ್ ನಾಯಕ