🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 18/07/2026
ಗಂಗಾವತಿ: ನಗರದ ಪ್ರಮುಖ ಸಂಚಾರ ಕೇಂದ್ರವಾದ ನೀಲಕಂಠೇಶ್ವರ ವೃತ್ತದಲ್ಲಿ ನಡೆಯುತ್ತಿರುವ ರಸ್ತೆ ಗುಂಡಿಗಳ ದುರಸ್ತಿ ಕಾಮಗಾರಿ ಅವೈಜ್ಞಾನಿಕ ಹಾಗೂ ನಿರ್ಲಕ್ಷ್ಯದಿಂದ ಕೂಡಿದ್ದು, ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟ ನಡೆಸಲಾಗುತ್ತಿದೆ ಎಂದು ಮಹಾನಾಯಕ ಜನ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಎಸ್. ಎಸ್. ಜಂಬಣ್ಣ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಸ್ತೆ ಕಾಮಗಾರಿಯನ್ನು ಹಂತ ಹಂತವಾಗಿ ನಡೆಸುವ ಬದಲು ವೃತ್ತದ ಸುತ್ತಲೂ ಒಂದೇ ವೇಳೆ ಹಲವು ಕಡೆ ರಸ್ತೆ ಅಗೆದು ಬಿಟ್ಟಿರುವುದರಿಂದ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪರಿಣಾಮವಾಗಿ ನೀಲಕಂಠೇಶ್ವರ ವೃತ್ತದಲ್ಲಿ ಭಾರೀ ಟ್ರಾಫಿಕ್ ದಟ್ಟಣೆ ಉಂಟಾಗಿ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇಂದು ಸುರಿದ ಮಳೆಯಿಂದ ಕಾಮಗಾರಿ ನಡೆದ ಸ್ಥಳಗಳಲ್ಲಿ ನೀರು ನಿಂತು ರಸ್ತೆ ಗುಂಡಿಗಳು ಸಂಪೂರ್ಣ ಮುಚ್ಚಿಹೋಗಿದ್ದು, ವಿಶೇಷವಾಗಿ ರಾತ್ರಿ ವೇಳೆಯಲ್ಲಿ ವಾಹನ ಸವಾರರಿಗೆ ಗುಂಡಿಗಳು ಗೋಚರಿಸದ ಕಾರಣ ಗಂಭೀರ ಅಪಘಾತ ಸಂಭವಿಸುವ ಅಪಾಯ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕಾಮಗಾರಿ ಸ್ಥಳದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳು, ಎಚ್ಚರಿಕೆ ಫಲಕಗಳು, ಬ್ಯಾರಿಕೇಡ್‌ಗಳು ಹಾಗೂ ಸಂಚಾರ ನಿಯಂತ್ರಣ ವ್ಯವಸ್ಥೆ ಕಲ್ಪಿಸದಿರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಬಿಂಬಿಸುತ್ತದೆ ಎಂದು ಅವರು ದೂರಿದ್ದಾರೆ.
ನಗರಸಭೆ ಆಯುಕ್ತರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟ ಹಾಗೂ ಕಾರ್ಯವಿಧಾನವನ್ನು ಪರಿಶೀಲಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಹಂತ ಹಂತವಾಗಿ ಕಾಮಗಾರಿ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಬೇಕು. ಅಲ್ಲದೆ, ಈ ನಿರ್ಲಕ್ಷ್ಯಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಬೇಕು ಎಂದು ವೇದಿಕೆ ಒತ್ತಾಯಿಸಿದೆ.
ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಸಾರ್ವಜನಿಕರೊಂದಿಗೆ ಸೇರಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಮಹಾನಾಯಕ ಜನ ಜಾಗೃತಿ ವೇದಿಕೆ (ರಿ.) ಎಚ್ಚರಿಸಿದೆ.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

More Stories
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ನ್ಯಾಯಾಧೀಶ ನಾಗೇಶ ಪಾಟೀಲ್
ಉಡಮಕಲ್ ಗ್ರಾಮದಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ
ಮಾಹಿತಿ ನೀಡದ ಐವರು ಅಧಿಕಾರಿಗಳಿಗೆ ಕಲಬುರಗಿ ಮಾಹಿತಿ ಆಯೋಗದಿಂದ ₹50 ಸಾವಿರ ದಂಡ