August 21, 2026

ಗೃಹಲಕ್ಷ್ಮಿ ಹಣ ನೀಡುವಂತೆ ಆಗ್ರಹಿಸಿ ಡಿಸಿ ಕಚೇರಿ ಎದುರು ಅಂಗ ವಿಕಲನಿಂದ  ಏಕಾಂಗಿ ಧರಣಿ ಸತ್ಯಾಗ್ರಹ

🟥 ಟಿ ಪಬ್ಲಿಕ್ ನ್ಯೂಸ್ | ಕೊಪ್ಪಳ
ದಿನಾಂಕ: 22/07/2026

ಕೊಪ್ಪಳ: ಗೃಹಲಕ್ಷ್ಮಿ ಯೋಜನೆಯ ಮೂರು ವರ್ಷದ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು ಹಾಗೂ ತಮ್ಮ ಸಮಸ್ಯೆಯನ್ನು ನಿರ್ಲಕ್ಷಿಸಿ ಕಿರುಕುಳ ನೀಡಿದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕುಷ್ಟಗಿ ತಾಲೂಕಿನ ಹಾಬಲಕಟ್ಟಿ ಗ್ರಾಮದ ಶರಣಪ್ಪ ಭೀಮಪ್ಪ ಭೋವಿ ಅವರು ಬುಧವಾರ ಕೊಪ್ಪಳ ಜಿಲ್ಲಾ ಆಡಳಿತ ಭವನದ ಎದುರು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು ಏಕಾಂಗಿ ಧರಣಿ ಸತ್ಯಾಗ್ರಹ ಆರಂಭಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ, ತಮ್ಮ ಪತ್ನಿ ಶ್ರೀಮತಿ ಶಿಲ್ಪಾ ಅವರ ಗೃಹಲಕ್ಷ್ಮಿ ಯೋಜನೆ ಅರ್ಜಿ ಮೂರು ವರ್ಷ ಕಳೆದರೂ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಆಗದೇ ಯೋಜನೆಯ ಯಾವುದೇ ಕಂತಿನ ಹಣ ದೊರೆತಿಲ್ಲ ಎಂದು ಆರೋಪಿಸಿದರು. ಸಮಸ್ಯೆ ಪರಿಹಾರಕ್ಕಾಗಿ ವಿವಿಧ ಕಚೇರಿಗಳಿಗೆ ಅನೇಕ ಬಾರಿ ಅಲೆದಾಡಿದರೂ ಅಧಿಕಾರಿಗಳು ಸ್ಪಂದಿಸದೆ “ನಾಳೆ ಬನ್ನಿ, ನಾಡಿದ್ದು ಬನ್ನಿ” ಎಂದು ಹೇಳುತ್ತಾ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.

ಅರ್ಜಿಯ ಕೆಲಸಕ್ಕಾಗಿ ಸುಮಾರು ₹20 ಸಾವಿರದಿಂದ ₹25 ಸಾವಿರದವರೆಗೆ ವೈಯಕ್ತಿಕ ಹಣ ಖರ್ಚಾಗಿದ್ದು, ಸಾಲ ಮಾಡುವ ಪರಿಸ್ಥಿತಿ ಎದುರಾಗಿದೆ. ಆ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂದು ಅವರು ಆಗ್ರಹಿಸಿದರು.

ಗೃಹಲಕ್ಷ್ಮಿ ಯೋಜನೆ ಸಂಬಂಧ ತಮ್ಮನ್ನು ನಿರ್ಲಕ್ಷಿಸಿ ಕಿರುಕುಳ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಜೊತೆಗೆ ಕುಷ್ಟಗಿ ತಾಲೂಕಿನ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಫಾರೂಕ್ ಡಾಲಾಯತ್ ಅವರು ದೂರವಾಣಿ ಕರೆಗಳಿಗೆ ಸ್ಪಂದಿಸದೆ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿರುವುದರಿಂದ ಅವರ ವಿರುದ್ಧವೂ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ತಾವು ದೈಹಿಕ ಅಂಗವಿಕಲರಾಗಿದ್ದು, ಎಗ್ ರೈಸ್ ಅಂಗಡಿ ನಡೆಸಿ ಜೀವನ ಸಾಗಿಸುತ್ತಿದ್ದೇವೆ. ಗೃಹಲಕ್ಷ್ಮಿ ಯೋಜನೆಯ ಹಣ ಸಿಗದ ಕಾರಣ ಕುಟುಂಬದಲ್ಲಿ ಆರ್ಥಿಕ ಸಂಕಷ್ಟ ಉಂಟಾಗಿದೆ. ಸರ್ಕಾರ ಶೀಘ್ರದಲ್ಲಿ ನ್ಯಾಯ ಒದಗಿಸದಿದ್ದರೆ ಮುಂದಿನ ದಿನಗಳಲ್ಲಿ ಉಪವಾಸ ಧರಣಿ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಈ ಕುರಿತು ಕೊಪ್ಪಳ ಜಿಲ್ಲಾ ಆಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗ್ಯಾರಂಟಿ ಯೋಜನೆ ಅಧ್ಯಕ್ಷರ ಮೂಲಕ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News