🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 12/08/2026
ಗಂಗಾವತಿ: ಯಕ್ಷಗಾನಕ್ಕಿಂತಲೂ ಆಕರ್ಷಣೀಯವಾಗಿರುವ ಬಯಲಾಟ ಕಲೆಯನ್ನು ಅದರ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಇಂದಿನ ಜನತೆಯ ಮನಸೂರೆಗೊಳ್ಳುವ ರೀತಿಯಲ್ಲಿ ಬೆಳೆಸಲು ಚಿಂತನ-ಮಂಥನದ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರಜ್ಞಾವಂತರನ್ನು ತೊಡಗಿಸಿಕೊಂಡು ಸಾಂಘಿಕ ಪ್ರಯತ್ನ ನಡೆಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಬಯಲಾಟ ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ್ ಇಂಗಳಗಿ ಹೇಳಿದರು.
ಸಮೀಪದ ಆನೆಗೊಂದಿಯ ಶ್ರೀ ರಂಗನಾಥ ದೇಗುಲದಲ್ಲಿ ನಡೆದ ಗಂಗಾವತಿ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೆಪ್ಟೆಂಬರ್‌ನಲ್ಲಿ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈ ಸಂದರ್ಭದಲ್ಲಿ ಬಯಲಾಟ ಜಾಗೃತಿ ಸಮಾವೇಶ, ಕೊಪ್ಪಳ, ಬಳ್ಳಾರಿ, ವಿಜಯನಗರ ಹಾಗೂ ರಾಯಚೂರು ಜಿಲ್ಲೆಗಳ 100ಕ್ಕೂ ಹೆಚ್ಚು ಸಂಗೀತ ನಿರ್ದೇಶಕರು (ಹಾರ್ಮೋನಿಯಂ ಮಾಸ್ತಾರರು) ಒಂದೆಡೆ ಸೇರಿಸಿ ಬಯಲಾಟದ ಅಳಿವು-ಉಳಿವು, ಬೆಳವಣಿಗೆಯಲ್ಲಿ ಯುವಕರ ಪಾತ್ರ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗುವುದು ಎಂದರು.
ಇದರೊಂದಿಗೆ ಬಯಲಾಟ ಪ್ರದರ್ಶನ, ಮುಮ್ಮೇಳ ಹಾಡುಗಾರಿಕೆ ಹಾಗೂ ಬಯಲಾಟ ಕಲಾವಿದರಿಂದ ತಜ್ಞರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಿ, ದಿನವಿಡೀ ಬಯಲಾಟದ ಹಬ್ಬ ಆಚರಿಸುವ ಮೂಲಕ ಕಲೆಗೆ ಹೊಸ ಮೆರಗು ನೀಡಲಾಗುವುದು. ಅಲ್ಲದೆ, 100ಕ್ಕೂ ಹೆಚ್ಚು ಹಾರ್ಮೋನಿಯಂ ಮಾಸ್ತಾರರ ಸಾಧನೆ ಹಾಗೂ ಕಿರು ಪರಿಚಯ ಒಳಗೊಂಡ ಪುಸ್ತಕ ಪ್ರಕಟಿಸಲು ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು.
*ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ*
ಗಂಗಾವತಿ ತಾಲೂಕು ಬಯಲಾಟ ಕಲಾವಿದರ ಸಂಘದ ಪದಾಧಿಕಾರಿಗಳಾಗಿ ಕಲ್ಯಾಣಿ ಅಂಜನೇಯ್ಯ (ಗೌರವಾಧ್ಯಕ್ಷರು), ನಾರಾಯಣ ಯಾದವ (ಅಧ್ಯಕ್ಷರು), ರವಿ ಟಿ. ಆನೆಗೊಂದಿ (ಉಪಾಧ್ಯಕ್ಷರು), ಶಂಕರ್ ಕಬ್ಬೇರ್ (ಪ್ರಧಾನ ಕಾರ್ಯದರ್ಶಿ), ವೆಂಕಟೇಶ್ ದಂಡೀನ್ (ಕಾರ್ಯದರ್ಶಿ), ಎ. ಗಿರಿಧರ (ಖಜಾಂಚಿ), ಜಂಬುನಾಥ್ ಆನೆಗೊಂದಿ (ಸಂಘಟನಾ ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆ.
ಡಿ.ಪಿ. ಕುಪ್ಪರಾಜು, ಸಿಂಗ್ರಪ್ಪ ಸುಬೇದಾರ್, ಎಂ. ಸಿದ್ದಪ್ಪ ಹಾಗೂ ವೀರಣ್ಣ ಬೋವಿ ಅವರನ್ನು ಗೌರವ ಸಲಹೆಗಾರರಾಗಿ, ನಾಗರಾಜ್ ಕಾಟಿಕ್, ಪಿ. ಮಂಜುನಾಥ್, ಮೌಲಪ್ಪ ನಾಯಕ ಹಾಗೂ ಕೆ. ನಾಗರಾಜ್ ಅವರನ್ನು ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ ಎಂದು ಇಂಗಳಗಿ ಘೋಷಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಗೌರವ ಸಲಹೆಗಾರ ಯಂಕಪ್ಪ ವಕೀಲರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌಲಪ್ಪ ಆನೆಗೊಂದಿ, ಜಿಲ್ಲಾ ಕಾರ್ಯದರ್ಶಿ ಐಲಿ ರವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

More Stories
ಈದ್ ಮಿಲಾದ್ ಹಬ್ಬ: ಸೌಹಾರ್ದತೆ ಕಾಪಾಡಲು ಪೊಲೀಸರ ಮನವಿ
ಗಂಗಾವತಿಯಲ್ಲಿ ನಿವೇಶನ ರಹಿತರಿಗೆ ಭೂಮಿ ಕಾಯ್ದಿರಿಸಲು ಸಿಪಿಐ ಆಗ್ರಹ
ಗುತ್ತಿಗೆ ಪದ್ಧತಿ ರದ್ದುಪಡಿಸಲು ಒತ್ತಾಯಿಸಿ ಆ.20ರಂದು ಬೆಂಗಳೂರು ಚಲೋ