August 21, 2026

ದೇಶ ಸೇವೆಗೆ ಯುವಕರನ್ನು ಸಜ್ಜುಗೊಳಿಸುವ ವಿದ್ಯಾನಿಕೇತನದ ಮಹತ್ವದ ಹೆಜ್ಜೆ

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 15/08/2026

ಗಂಗಾವತಿ : ದೇಶ ಸೇವೆಗೆ ಯುವಕರನ್ನು ಸಜ್ಜುಗೊಳಿಸುವ ಉದ್ದೇಶದಿಂದ ಗಂಗಾವತಿಯ ವಡ್ಡರಹಟ್ಟಿಯ ವಿದ್ಯಾನಿಕೇತನ ಪದವಿ ಕಾಲೇಜಿನಲ್ಲಿ ಉಚಿತ ಸೈನಿಕ ತರಬೇತಿ ಅಕಾಡೆಮಿ ಆರಂಭಿಸಲು ನಿರ್ಧರಿಸಲಾಗಿದೆ. ಈ ಮೂಲಕ ಪ್ರತಿವರ್ಷ 100 ಯುವಕರಿಗೆ ಸೇನಾ ನೇಮಕಾತಿಗೆ ಅಗತ್ಯವಾದ ತರಬೇತಿ ನೀಡುವ ಗುರಿಯನ್ನು ಸಂಸ್ಥೆ ಹೊಂದಿದೆ ಎಂದು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ತಿಳಿಸಿದರು.

ಕಾಲೇಜಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರಂಭಿಕ ಹಂತದಲ್ಲಿ ಅಗ್ನಿವೀರ್ ನೇಮಕಾತಿಗೆ ಸಿದ್ಧತೆ ನಡೆಸುತ್ತಿರುವ ಯುವಕರಿಗೆ ತರಬೇತಿ ನೀಡಲಾಗುವುದು. ತರಬೇತಿಯ ಭಾಗವಾಗಿ ಕಂಪ್ಯೂಟರ್ ಜ್ಞಾನ, ದೈಹಿಕ ಸಾಮರ್ಥ್ಯ ವೃದ್ಧಿ ಹಾಗೂ ಮಾನಸಿಕ ಸಿದ್ಧತೆಗೆ ಆದ್ಯತೆ ನೀಡಲಾಗುತ್ತದೆ ಎಂದರು.

ಸೈನಿಕ ವೃತ್ತಿಗೆ ಆಸಕ್ತಿ ಹೊಂದಿದ್ದರೂ ಆರ್ಥಿಕ ಸಮಸ್ಯೆಯಿಂದ ಅವಕಾಶ ವಂಚಿತರಾಗುವ ಪ್ರತಿಭಾವಂತ ಯುವಕರಿಗೆ ಸಂಸ್ಥೆಯೇ ನೆರವು ನೀಡಲಿದೆ. ಆಯ್ಕೆಯಾಗುವ ಅರ್ಹ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಅಗತ್ಯವಾದ ಬೂಟು, ಸಮವಸ್ತ್ರ ಹಾಗೂ ಇತರೆ ಪರಿಕರಗಳನ್ನು ಉಚಿತವಾಗಿ ಒದಗಿಸಲಾಗುವುದು. ವಸತಿ, ಊಟ ಮತ್ತು ಶಿಕ್ಷಣದ ಸೌಲಭ್ಯವನ್ನೂ ಸಂಸ್ಥೆಯ ವತಿಯಿಂದ ಕಲ್ಪಿಸಲಾಗುವುದು ಎಂದು ಹೇಳಿದರು.

ಶಿಕ್ಷಣದ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸುವ ನಿಟ್ಟಿನಲ್ಲಿ ಸಂಸ್ಥೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಶೈಕ್ಷಣಿಕ ಪ್ರವಾಸ, ಸ್ಮಾರ್ಟ್ ಟಿವಿ ವಿತರಣೆ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಅಗ್ರ ಮೂರು ಸ್ಥಾನ ಪಡೆಯುವ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಸಂಸ್ಥೆಯಲ್ಲಿ ಒಂದನೇ ತರಗತಿಯಿಂದ ಪದವಿವರೆಗೆ ಸುಮಾರು 10 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 1,100 ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸೂರಿಬಾಬು ವಿವರಿಸಿದರು.

ಸೈನಿಕ ತರಬೇತಿ ಅಕಾಡೆಮಿಯ ಸಂಚಾಲಕ ಹಾಗೂ ಜಿಮ್ ತರಬೇತುದಾರ ಹೈದರ್ ಅಲಿ ಮಾತನಾಡಿ, ತರಬೇತಿಗೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ವಡ್ಡರಹಟ್ಟಿಯ ವಿದ್ಯಾನಿಕೇತನ ಪದವಿ ಕಾಲೇಜಿನಲ್ಲಿ ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು. ಮೊದಲ ಎರಡು ತಿಂಗಳು ಕಂಪ್ಯೂಟರ್ ತರಬೇತಿ ನೀಡಿ, ನಂತರ ಸೇನಾ ನೇಮಕಾತಿಗೆ ಪೂರಕವಾದ ದೈಹಿಕ ತರಬೇತಿ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸೈನಿಕ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿ ನಿಖಿಲ್ ಅವರಿಗೆ ಸಾಂಕೇತಿಕವಾಗಿ ಉಚಿತ ತರಬೇತಿ ಪರಿಕರಗಳನ್ನು ವಿತರಿಸಲಾಯಿತು. ಪದವಿ ಕಾಲೇಜಿನ ಪ್ರಾಂಶುಪಾಲ ಡಿ.ಎಂ. ಅಭಿಷೇಕ, ಆಡಳಿತ ನಿರ್ದೇಶಕರಾದ ಕೃಷ್ಣಪ್ರಸಾದ್ (ಚಿನ್ನಿ), ಸುಬ್ಬರಾಜು (ಬನ್ನು) ಉಪಸ್ಥಿತರಿದ್ದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News