🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 16/08/2026
ಗಂಗಾವತಿ: ತುಂಗಭದ್ರಾ ನೀರಾವರಿ ಯೋಜನೆಯಲ್ಲಿ ಕಳೆದ 25–30 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರನ್ನು ಖಾಯಂ ಮಾಡಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಗಸ್ಟ್ 19ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದ ಅಧ್ಯಕ್ಷ ಶರಣಬಸವ ಹೇರೂರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸಂಘಟನೆಯ ವತಿಯಿಂದ ಭಾನುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ, ಮಾತನಾಡಿದರು.
ದಶಕಗಳಿಂದ ತುಂಗಭದ್ರಾ ನೀರಾವರಿ ಯೋಜನೆಯ ನಿರ್ವಹಣೆಯಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಯಾವುದೇ ಉದ್ಯೋಗ ಭದ್ರತೆ ಇಲ್ಲದಿರುವುದು ಸರ್ಕಾರದ ಅನ್ಯಾಯವಾಗಿದೆ. ಕಾರ್ಮಿಕರನ್ನು ಖಾಯಂಗೊಳಿಸಿ, ಶಾಶ್ವತ ಉದ್ಯೋಗ ಭದ್ರತೆ ಒದಗಿಸಬೇಕು.
ಗುತ್ತಿಗೆ ಪದ್ಧತಿ ರದ್ದುಪಡಿಸಿ ನೇರ ವೇತನ ಪಾವತಿ ಜಾರಿಗೊಳಿಸಬೇಕು. ಬಾಕಿ ಇರುವ ವೇತನವನ್ನು ತಕ್ಷಣ ಪಾವತಿಸಬೇಕು. 2014ರಿಂದ ಬಾಕಿ ಇರುವ ಇಪಿಎಫ್, ಇಎಸ್‌ಐ, ಕನಿಷ್ಠ ವೇತನ ಹಾಗೂ ಕಡಿತಗೊಳಿಸಿದ ವೇತನವನ್ನು ಪಾವತಿಸಬೇಕು. ಕಲಬುರಗಿ ಹೈಕೋರ್ಟ್ ಪೀಠದ ಆದೇಶವನ್ನು ತಕ್ಷಣ ಜಾರಿಗೊಳಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ ಎಂದರು.
ಈ ಬೇಡಿಕೆಗಳ ಕುರಿತು ಸಂಘದ ನಿಯೋಗವು ಜಲ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಆಗಸ್ಟ್ 19ರಂದು ನಡೆಯಲಿರುವ ಹೋರಾಟದ ಸ್ಥಳಕ್ಕೆ ಆಗಮಿಸಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸುವಂತೆ ಮನವಿ ಮಾಡಲಾಗಿದೆ. ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೂ ಮನವಿ ಸಲ್ಲಿಸಿ, ಹೈಕೋರ್ಟ್ ಆದೇಶದಂತೆ ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಕಾರ್ಮಿಕರ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಹಾಗೂ ಕರ್ನಾಟಕ ನೀರಾವರಿ ನಿಗಮ ತಕ್ಷಣ ಸ್ಪಂದಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು. ಆಗಸ್ಟ್ 19ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ‘ಬೆಂಗಳೂರು ಚಲೋ’ ಹೋರಾಟದಲ್ಲಿ ತುಂಗಭದ್ರಾ ನೀರಾವರಿ ಯೋಜನೆಯ ಎಲ್ಲಾ ವಿಭಾಗಗಳ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟ ಯಶಸ್ವಿಗೊಳಿಸಬೇಕು ಎಂದು ವಿಜಯ ದೊರೆರಾಜು ಕರೆ ನೀಡಿದರು.
ಈ ಸಂದರ್ಭದಲ್ಲಿ ಎಐಸಿಸಿಟಿಯು ಸಂಘಟನೆಯ ಜಿಲ್ಲಾಧ್ಯಕ್ಷ ವಿಜಯ ದೊರೆರಾಜು, ವಡ್ಡರಹಟ್ಟಿ ಕ್ಯಾಂಪ್ ಸಮಿತಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ, ಪ್ರಮುಖರಾದ ಶಿವಕುಮಾರ ತಿಪ್ಪನಾಳ, ಶರಣಯ್ಯ, ವೆಂಕಟೇಶ್ ಚಿಕ್ಕಡಂಕನಕಲ್, ನಬಿಸಾಬ್, ಹುಸೇನ್ ಪೀರ್, ಜಾಫರ್ ಸಾಬ್, ಶೇಖರ ಕಾರಟಗಿ ಹಾಗೂ ಇತರರಿದ್ದರು.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

More Stories
ಈದ್ ಮಿಲಾದ್ ಹಬ್ಬ: ಸೌಹಾರ್ದತೆ ಕಾಪಾಡಲು ಪೊಲೀಸರ ಮನವಿ
ಗಂಗಾವತಿಯಲ್ಲಿ ನಿವೇಶನ ರಹಿತರಿಗೆ ಭೂಮಿ ಕಾಯ್ದಿರಿಸಲು ಸಿಪಿಐ ಆಗ್ರಹ
ಗುತ್ತಿಗೆ ಪದ್ಧತಿ ರದ್ದುಪಡಿಸಲು ಒತ್ತಾಯಿಸಿ ಆ.20ರಂದು ಬೆಂಗಳೂರು ಚಲೋ