October 16, 2026

ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ: ಅಕ್ಟೋಬರ್ 11ರಂದು ಆಯೋಜನೆ

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 06/10/2026

ಗಂಗಾವತಿ: ಎಎಸ್ಐ-ಕೆಎಸ್ಸಿ ವಿಜಯನಗರ ಶಾಖೆ, ಭಾರತೀಯ ವೈದ್ಯಕೀಯ ಸಂಘ (ಐಎಂಎ), ಲಯನ್ಸ್ ಕ್ಲಬ್ ಹಾಗೂ ಕರ್ನಾಟಕ ಕ್ಯಾನ್ಸರ್ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ಅಕ್ಟೋಬರ್ 11ರಂದು ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಐಎಂಎ ಅಧ್ಯಕ್ಷ ಡಾ. ಮಲ್ಲನಗೌಡ ಪಿ. ಪಾಟೀಲ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 11ರಂದು ಭಾನುವಾರ ನಗರದ ಐಎಂಎ ಹಾಲ್‌ನಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಶಿಬಿರ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಶಿಬಿರದಲ್ಲಿ ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಹಾಗೂ ಗರ್ಭಕಂಠದ ಕ್ಯಾನ್ಸರ್ ಸೇರಿದಂತೆ ಪ್ರಮುಖ ಕ್ಯಾನ್ಸರ್‌ಗಳ ತಪಾಸಣೆಯನ್ನು ಉಚಿತವಾಗಿ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಬಾಯಿಯಲ್ಲಿ ಗುಣವಾಗದ ಹುಣ್ಣು, ಬಿಳಿ ಅಥವಾ ಕೆಂಪು ಮಚ್ಚೆ, ಗಡ್ಡೆ, ನಿರಂತರ ನೋವು ಹಾಗೂ ಕುತ್ತಿಗೆಯಲ್ಲಿ ಗಡ್ಡೆ ಕಂಡುಬಂದರೆ ಬಾಯಿ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳಬೇಕು. ಆರಂಭಿಕ ಹಂತದಲ್ಲಿಯೇ ತಪಾಸಣೆ ಮಾಡಿಸಿಕೊಳ್ಳುವುದರಿಂದ ಕಾಯಿಲೆಯನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಸ್ತನದಲ್ಲಿ ಗಡ್ಡೆ, ಸ್ತನದ ಗಾತ್ರದಲ್ಲಿ ಬದಲಾವಣೆ, ಮೊಲೆತೊಟ್ಟು ಒಳಗೆ ಹೋಗುವುದು, ರಕ್ತಸ್ರಾವ ಅಥವಾ ಚರ್ಮದಲ್ಲಿ ಬದಲಾವಣೆ ಕಂಡುಬಂದರೆ ಸ್ತನ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.

ಅದೇ ರೀತಿ ಮುಟ್ಟಿನ ನಡುವೆ ಅಸಹಜ ರಕ್ತಸ್ರಾವ, ಲೈಂಗಿಕ ಸಂಪರ್ಕದ ನಂತರ ರಕ್ತಸ್ರಾವ, ಮೆನೋಪಾಸ್ ನಂತರ ರಕ್ತಸ್ರಾವ, ಅಸಹಜ ಅಥವಾ ದುರ್ವಾಸನೆಯ ಯೋನಿ ಸ್ರಾವ ಹಾಗೂ ನಿರಂತರ ಕೆಳಹೊಟ್ಟೆ ನೋವು ಕಂಡುಬಂದಲ್ಲಿ ಗರ್ಭಕಂಠದ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು.

ಶಿಬಿರದಲ್ಲಿ ಭಾಗವಹಿಸಲು ನೋಂದಣಿ ಮಾಡಿಸಿಕೊಳ್ಳಲು ಹನುಮೇಶ್: 9060332658, ಶಂಷಾದ್: 73496 94980 ಇವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ವೆಂಕಟೇಶ್, ಡಾ. ಕೆ.ಎನ್. ಮಧುಸೂದನ, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಜಿ. ದೇವರಾಜ, ಡಾ. ವಿ.ವಿ. ಚಿನಿವಾಲರ, ಐಎಂಎ ಖಜಾಂಚಿ ಡಾ. ಅರವಿಂದ ಹಾಗೂ ಕಾರ್ಯದರ್ಶಿ ಡಾ. ನಾಗರಾಜ ಉಪಸ್ಥಿತರಿದ್ದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News
error: Content is protected !!