October 16, 2026

ಮಳೆ-ಬೆಳೆಯಿಗಾಗಿ ಮಲ್ಲಾಪುರ ಗಾಳೆಮ್ಮ ದೇವಿಯ ವಿಶೇಷ ಆರಾಧನೆ

🟥 ಟಿ ಪಬ್ಲಿಕ್ ನ್ಯೂಸ್ ಗಂಗಾವತಿ
ದಿನಾಂಕ: 29/05/2026

ಮೂರು ವರ್ಷಕ್ಕೊಮ್ಮೆ ನಡೆಯುವ ಮಹೋತ್ಸವದಲ್ಲಿ ಭಕ್ತರ ಭಕ್ತಿ ಸಂಭ್ರಮ

ಗಂಗಾವತಿ: ತಾಲ್ಲೂಕಿನ ಮಲ್ಲಾಪುರ ಗ್ರಾಮದ ಗಾಳೆಮ್ಮ ದೇವಸ್ಥಾನದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ವಿಶೇಷ ಆರಾಧನಾ ಮಹೋತ್ಸವವು ಭಕ್ತಿಭಾವದಿಂದ ನೆರವೇರಿತು. ಗ್ರಾಮದ ಜನರು ತಾಯಿ ಗಾಳೆಮ್ಮ ದೇವಿಯನ್ನು ಪೂಜಿಸಿ ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಊರಿನ ಸುಖ-ಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಅನೇಕ ಗ್ರಾಮಗಳಿಂದ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಹರಕೆ ತೀರಿಸಿದರು. ಗ್ರಾಮದಲ್ಲಿ ಉತ್ತಮ ಮಳೆಯಾಗಿ ರೈತರಿಗೆ ಸಮೃದ್ಧ ಬೆಳೆ ಲಭಿಸಲಿ, ಗ್ರಾಮದಲ್ಲಿ ಶಾಂತಿ, ನೆಮ್ಮದಿ ಹಾಗೂ ಐಕ್ಯತೆ ನೆಲೆಸಲಿ ಎಂದು ದೇವರಲ್ಲಿ ಮೊರೆ ಹೋದರು.

ಕಾರ್ಯಕ್ರಮದಲ್ಲಿ ಹಿರಿಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ಆಚರಣೆಗಳನ್ನು ಭಕ್ತಿಯಿಂದ ನೆರವೇರಿಸಿದರು. ದೇವಸ್ಥಾನದ ವಡ್ಡಮ್ಮ ದೇವಿಯ ಪೂಜಾರಿಗಳಾದ ಲಿಂಗಪ್ಪ ತಾತನವರು ವಿಶೇಷ ಪೂಜೆ ಹಾಗೂ ಮಂಗಳಾರತಿ ನೆರವೇರಿಸಿದರು.

ವಿಶೇಷವಾಗಿ ಮಲ್ಲಾಪುರ ಗ್ರಾಮದ ಭಕ್ತರು ದೇವಸ್ಥಾನಕ್ಕೆ ಸಮರ್ಪಣೆ ಸಲ್ಲಿಸಿದರೆ, ಸಂಗಾಪುರ ಗ್ರಾಮದ ಭಕ್ತರು ಪ್ರಸಾದ ಸ್ವೀಕರಿಸುವ ಸಂಪ್ರದಾಯ ಗಮನಸೆಳೆಯಿತು. ಭಕ್ತರು ಭಜನೆ ಹಾಗೂ ಜಯಘೋಷಗಳ ಮೂಲಕ ತಮ್ಮ ಭಕ್ತಿಭಾವ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಜಿಪಿ ನಾರಾಯಣಗೌಡ, ಮಲ್ಲಿಯಪ್ಪ ತಳಕಲ್, ಪಂಪಾಪತಿ ಕಟ್ಟಿಮನಿ, ಬಸವನಗೌಡ ಪಾಟೀಲ್, ರಾಮಣ್ಣ ಗುಡದಾರ್, ಶರಣಪ್ಪ ಕಲಿಕೇರಿ, ಹನುಮಂತಪ್ಪ ಹಳೆ ಕುಮಟಾ, ವೆಂಕನಗೌಡ ಪಾಟೀಲ್ ಸೇರಿದಂತೆ ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.

“ಈ ದೇವಿಯ ಆರಾಧನೆಯು ಗ್ರಾಮಸ್ಥರ ನಂಬಿಕೆ ಮತ್ತು ಸಂಪ್ರದಾಯದ ಸಂಕೇತವಾಗಿದೆ. ಪ್ರತೀ ಮೂರು ವರ್ಷಕ್ಕೊಮ್ಮೆ ನಡೆಯುವ ಈ ಮಹೋತ್ಸವವು ಗ್ರಾಮಸ್ಥರಲ್ಲಿ ಭಕ್ತಿ ಹಾಗೂ ಒಗ್ಗಟ್ಟನ್ನು ಹೆಚ್ಚಿಸುತ್ತದೆ” ಎಂದು ಗ್ರಾಮಸ್ಥರು ತಿಳಿಸಿದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

error: Content is protected !!