June 22, 2026

ಬಡ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳ ವಿತರಣೆ: ರೋಟರಿ ಕ್ಲಬ್ ರೈಸ್ ಬೌಲ್ ಮಹಿಳಾ ಘಟಕದ ಸಮಾಜಮುಖಿ ಕಾರ್ಯ

🟥 ಟಿ ಪಬ್ಲಿಕ್ ನ್ಯೂಸ್ ಗಂಗಾವತಿ
ದಿನಾಂಕ: 31/05/2026

ಗಂಗಾವತಿ: ನಗರದ ಹುಮಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ರೋಟರಿ ಕ್ಲಬ್ ರೈಸ್ ಬೌಲ್ ಮಹಿಳಾ ಘಟಕದ ನೇತೃತ್ವದಲ್ಲಿ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗಾಗಿ ಉಚಿತ ಹೊಲಿಗೆ ಯಂತ್ರಗಳ ವಿತರಣಾ ಕಾರ್ಯಕ್ರಮ ಶನಿವಾರ ನೆರವೇರಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತಹಸೀಲ್ದಾರ್ ವಸಂತ್ ಕುಮಾರಿ ಅವರು ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿ ಮಾತನಾಡಿದರು. ಅಂತರಾಷ್ಟ್ರೀಯ ಖ್ಯಾತಿಯ ರೋಟರಿ ಕ್ಲಬ್ ರೈಸ್ ಬೌಲ್ ಮಹಿಳಾ ಘಟಕ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಅವರು ಹೇಳಿದರು.

ಮಹಿಳೆಯರು ಕುಟುಂಬ ನಿರ್ವಹಣೆಯ ಜವಾಬ್ದಾರಿಯ ಜೊತೆಗೆ ಯಾವುದೇ ಸ್ವಾರ್ಥವಿಲ್ಲದೆ ವಿವಿಧ ಸಂಘ-ಸಂಸ್ಥೆಗಳ ಮೂಲಕ ಸಮಾಜದ ದುರ್ಬಲ ವರ್ಗದವರ ನೆರವಿಗೆ ಬರುತ್ತಿರುವುದು ಮಾದರಿಯಾಗಿದೆ. ಇಂತಹ ಸೇವಾ ಕಾರ್ಯಗಳು ಬಡ ಮತ್ತು ನಿರ್ಗತಿಕ ಕುಟುಂಬಗಳಿಗೆ ಆಸರೆಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ರೋಟರಿ ಕ್ಲಬ್ ರೈಸ್ ಬೌಲ್ ಅಧ್ಯಕ್ಷೆ ಗೀತಾ ಚೌದರಿ ಮಾತನಾಡಿ, ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಹೊಲಿಗೆ ಯಂತ್ರಗಳನ್ನು ವಿತರಿಸಲಾಗುತ್ತಿದೆ. ಮುಂದೆಯೂ ಸಮಾಜದ ಅಭಿವೃದ್ಧಿಗೆ ಪೂರಕವಾಗುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹುಮಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಶಾಹಿನ್ ಕೌಸರ್, ಕಾರ್ಯದರ್ಶಿ ಶ್ರೀದೇವಿ ಭಂಡಾರಿ, ಜ್ಯೋತಿ ಡಂಕಣಕಲ್, ಅಂಬಿಕಾ ಬಸಮ್ಮ ಹಣವಾಳ, ನಾಗರತ್ನ, ಲಲಿತಾ, ಮಂಜುಳಾ, ಸೋಫಿಯಾ ರಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

About The Author

error: Content is protected !!