July 16, 2026

ಮಹಿಳೆಯರ–ಮಕ್ಕಳ ಉದ್ಯಾನವನ ಕುಡುಕರ ಅಡ್ಡೆ! ಗಂಗಾವತಿ ನಗರಸಭೆಯ ನಿರ್ಲಕ್ಷ್ಯಕ್ಕೆ ದಲಿತ ಸೇನೆ ಆಕ್ರೋಶ

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 02/07/2026

ಗಂಗಾವತಿ: ನಗರಸಭೆ ವ್ಯಾಪ್ತಿಯ ಸರ್ಕಾರಿ ಉಪ ವಿಭಾಗ ಆಸ್ಪತ್ರೆ ಪಕ್ಕದಲ್ಲಿರುವ ಮಹಿಳೆಯರ ಹಾಗೂ ಚಿಕ್ಕ ಮಕ್ಕಳ ಉದ್ಯಾನವನ ಇಂದು ತನ್ನ ಮೂಲ ಉದ್ದೇಶವನ್ನೇ ಕಳೆದುಕೊಂಡಿದ್ದು, ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ ಎಂಬ ಗಂಭೀರ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.

ಮಹಿಳೆಯರು ಹಾಗೂ ಮಕ್ಕಳು ಸುರಕ್ಷಿತವಾಗಿ ಸಮಯ ಕಳೆಯಬೇಕಿದ್ದ ಉದ್ಯಾನದಲ್ಲಿ ಕುಡುಕರು ಸೇರಿ ಮದ್ಯಪಾನ ಮಾಡುತ್ತಿರುವುದರಿಂದ ಕುಟುಂಬಗಳು ಅಲ್ಲಿಗೆ ಹೋಗಲು ಹಿಂದೇಟು ಹಾಕುವಂತಾಗಿದೆ. ಉದ್ಯಾನದಲ್ಲಿದ್ದ ಜೋಕಾಲಿಗಳು, ಆಟಿಕೆಗಳು ಹಾಗೂ ಕುಳಿತುಕೊಳ್ಳುವ ಕುರ್ಚಿಗಳು ಮುರಿದು ಹಾಳಾಗಿದ್ದು, ನಿರ್ವಹಣೆ ಇಲ್ಲದೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಇನ್ನೂ ಕೆಲವು ದಿನಗಳಲ್ಲಿ ಗುಜರಿ ಸಾಮಾನುಗಳಂತೆ ಕೊಂಡೊಯ್ಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ದಲಿತ ಸೇನೆ ಜಿಲ್ಲಾಧ್ಯಕ್ಷ ಉಡಚಪ್ಪ  ಶ್ರೀರಾಮನಗರ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರಸಭೆ ಆಡಳಿತವು ಸಾರ್ವಜನಿಕರ ತೆರಿಗೆ ಹಣವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಸಮರ್ಪಕವಾಗಿ ಬಳಸುವ ಬದಲು ಮೂಲ ಸೌಲಭ್ಯಗಳ ನಿರ್ವಹಣೆಯಲ್ಲೇ ಸಂಪೂರ್ಣ ವಿಫಲವಾಗಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಮಕ್ಕಳಿಗಾಗಿ ನಿರ್ಮಿಸಿದ ಉದ್ಯಾನವನ್ನು ಸುರಕ್ಷಿತವಾಗಿ ಉಳಿಸಿಕೊಳ್ಳುವ ಕನಿಷ್ಠ ಜವಾಬ್ದಾರಿಯನ್ನೂ ನಗರಸಭೆ ನಿಭಾಯಿಸುತ್ತಿಲ್ಲ ಎಂಬ ಆರೋಪವೂ ಇದೆ.

ನಗರಸಭೆ ಪೌರಾಯುಕ್ತ ವಿರೂಪಾಕ್ಷ ಮೂರ್ತಿ ಅವರು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಉದ್ಯಾನದಲ್ಲಿ ವಾಚ್‌ಮನ್ ನೇಮಕ ಮಾಡುವುದು, ಸಿಸಿ ಕ್ಯಾಮೆರಾಗಳನ್ನು ಅಳವಡಿಸುವುದು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ಹಾಗೂ ಹಾಳಾಗಿರುವ ಆಟಿಕೆಗಳು, ಜೋಕಾಲಿಗಳು ಮತ್ತು ಕುರ್ಚಿಗಳನ್ನು ದುರಸ್ತಿ ಮಾಡಿ ಉದ್ಯಾನವನ್ನು ಅಭಿವೃದ್ಧಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸಂಜೆ ಆಗುತ್ತಿದ್ದಂತೆ ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ ಎಂದು( ಹೆಸರು ಹೇಳಲು ಇಚ್ಚಿಸದ ವ್ಯಕ್ತಿಗಳು ಆರೋಪಿಸುತ್ತಿದ್ದಾರೆ )

ನಿಕಟ ಪೂರ್ವ ಶಾಸಕ ಪರಣ್ಣ ಮುನವಳ್ಳಿ ಅವರು ಶಾಸಕರಾಗಿದ್ದ ಅವಧಿಯಲ್ಲಿ ನಗರದ ರಸ್ತೆಗಳು, ಉದ್ಯಾನವನಗಳು ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಉತ್ತಮ ನಿರ್ವಹಣೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಂದ ಸ್ವಚ್ಛತೆ ಮತ್ತು ಸಾರ್ವಜನಿಕ ಸೌಲಭ್ಯಗಳು ಗಮನಾರ್ಹವಾಗಿ ಸುಧಾರಿಸಿದ್ದವು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಮಕ್ಕಳ ಆಟದ ಮೈದಾನವನ್ನು ಕುಡುಕರ ತಾಣವನ್ನಾಗಿ ಬಿಡುವುದು ಯಾವುದೇ ನಾಗರಿಕ ಆಡಳಿತಕ್ಕೂ ಶೋಭೆಯಲ್ಲ. ಇನ್ನಾದರೂ ನಗರಸಭೆ ಎಚ್ಚೆತ್ತುಕೊಂಡು ಉದ್ಯಾನವನ್ನು ಸಾರ್ವಜನಿಕರ ಬಳಕೆಗೆ ಯೋಗ್ಯವಾಗಿಸುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ ಎಂಬುದು ನಾಗರಿಕರ ಆಗ್ರಹವಾಗಿದೆ.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News

About The Author

error: Content is protected !!