August 21, 2026

ಕನಕಗಿರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ‘ಭಾರತೀಯ ಸಂಸ್ಕೃತಿಯ ಅರಿವು’ ಉಪನ್ಯಾಸ: ಮೌಲ್ಯಯುತ ಶಿಕ್ಷಣಕ್ಕೆ ಒತ್ತು

🟥 ಟಿ ಪಬ್ಲಿಕ್ ನ್ಯೂಸ್ | ಕನಕಗಿರಿ
ದಿನಾಂಕ: 21/07/2026

ಕನಕಗಿರಿ: ಕರ್ನಾಟಕ ಪಬ್ಲಿಕ್ ಶಾಲೆ, ಕನಕಗಿರಿಯಲ್ಲಿ ಮಂಗಳವಾರ ಶ್ರೀಮತಿ ಪಾರ್ವತೆಮ್ಮ ಬಸನಗೌಡ ಎಜುಕೇಷನಲ್ ಮತ್ತು ರೂರಲ್ ಡೆವಲಪ್ಮೆಂಟ್ ಟ್ರಸ್ಟ್, ತಿಪ್ಪನಾಳ ಹಾಗೂ ವಿಕಾಸ ಅಕಾಡೆಮಿ ತಾಲೂಕು ಘಟಕ, ಕನಕಗಿರಿ ಇವರ ಸಂಯುಕ್ತ ಆಶ್ರಯದಲ್ಲಿ ‘ಭಾರತೀಯ ಸಂಸ್ಕೃತಿಯ ಅರಿವು’ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದ ವಿಕಾಸ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಹಾಗೂ ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿ, ಸೇಡಂನ ಸಂರಕ್ಷಕರಾದ ಬಸವರಾಜ ಪಾಟೀಲ್ ಸೇಡಂ ಅವರು ವಿಶೇಷ ಉಪನ್ಯಾಸ ನೀಡಿದರು.

ಮಾತನಾಡಿದ ಅವರು, ಪ್ರಸ್ತುತ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಮತ್ತು ಮೌಲ್ಯಗಳ ಬೆಳವಣಿಗೆಗಿಂತ ಹೆಚ್ಚಿನ ಅಂಕ ಹಾಗೂ ಉದ್ಯೋಗದತ್ತ ಹೆಚ್ಚು ಗಮನ ಹರಿಸುತ್ತಿದೆ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ಮೊದಲು ಮೌಲ್ಯಯುತ ಶಿಕ್ಷಣಕ್ಕೆ ಒತ್ತು ನೀಡಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಉದ್ಯೋಗ ಅರಸುವವರಾಗುವುದಕ್ಕಿಂತ ಉದ್ಯೋಗ ಸೃಷ್ಟಿಸುವ ಮಾಲೀಕರಾಗುವ ಗುರಿ ಹೊಂದಬೇಕು. ಅದಕ್ಕಾಗಿ ಇಂದಿನಿಂದಲೇ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಕರೆ ನೀಡಿದರು.

ಟ್ರಸ್ಟ್ ಅಧ್ಯಕ್ಷ ಹಾಗೂ ವಿಕಾಸ ಅಕಾಡೆಮಿ ಕನಕಗಿರಿ ತಾಲೂಕು ಸಂಚಾಲಕರಾದ ಮಲ್ಲಿಕಾರ್ಜುನಗೌಡ ತಿಪ್ಪನಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಅಕಾಡೆಮಿ ಹಮ್ಮಿಕೊಳ್ಳುತ್ತಿರುವ ಶೈಕ್ಷಣಿಕ, ಸಾಹಿತ್ಯ, ಸಾಮಾಜಿಕ ಹಾಗೂ ಆರೋಗ್ಯ ಸೇವಾ ಕಾರ್ಯಕ್ರಮಗಳ ಕುರಿತು ವಿವರಿಸಿದರು.

ಜಿಲ್ಲಾ ಸಂಚಾಲಕರಾದ ವೀರೇಶ್ ಮ್ಯಾಗೇರಿ ಹಾಗೂ ಮಹೇಶ್ ಅವರು ಅಕಾಡೆಮಿಯ ವಿವಿಧ ಚಟುವಟಿಕೆಗಳು ಮತ್ತು ಅವುಗಳ ಅನುಷ್ಠಾನದ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ರಾಜೇಶ್ವರ್ ರೆಡ್ಡಿ, ಅನಿಲ್ ಕುಮಾರ್, ರಾಘವೇಂದ್ರ ರಕ್ಕಸಗಿ ಹಾಗೂ ಶಾಲೆಯ ಅತಿಥಿ ಶಿಕ್ಷಕರು ಉಪಸ್ಥಿತರಿದ್ದರು. ಕನಕಾಚಲ ಶಿಕ್ಷಕರು ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಕೀರ್ತನಾ ಮತ್ತು ಸಂಗಡಿಗರು ಪ್ರಾರ್ಥನೆ ನೆರವೇರಿಸಿದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News