🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 21/07/2026
ಗಂಗಾವತಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ರದ್ದುಪಡಿಸುವುದು, ನೀಟ್ (NEET) ಪರೀಕ್ಷೆಯನ್ನು ಬ್ಯಾನ್ ಮಾಡುವುದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಗಂಗಾವತಿ ತಾಲೂಕು ಸಮಿತಿ ಮಂಗಳವಾರ ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಗ್ರೇಡ್ 2 ತಹಸೀಲ್ದಾರ ಷಣ್ಮುಖಪ್ಪ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಎಸ್‌ಎಫ್‌ಐ ಮುಖಂಡರು, ನೀಟ್ ಯುಜಿ–2026 ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ನಡೆದಿರುವ ಅಕ್ರಮಗಳಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿದರು. ಆರಂಭದಿಂದಲೂ ಪರೀಕ್ಷೆಗಳ ನಿರ್ವಹಣೆಯಲ್ಲಿ ಎನ್‌ಟಿಎ ವಿಫಲವಾಗಿದ್ದು, ಇಂತಹ ಅಸಮರ್ಥ ಸಂಸ್ಥೆಯನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಜಂತರ್ ಮಂತರ್‌ನಲ್ಲಿ ಶಾಂತಿಯುತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಂ ವಾಂಗ್ಚುಕ್ ಅವರನ್ನು ಬಲವಂತವಾಗಿ ಬಂಧಿಸಿರುವ ಕ್ರಮವನ್ನು ಖಂಡಿಸಿದ ಪ್ರತಿಭಟನಾಕಾರರು, ಶಾಂತಿಯುತ ಪ್ರತಿಭಟನೆಗಳನ್ನು ಬಲಪ್ರಯೋಗದ ಮೂಲಕ ಹತ್ತಿಕ್ಕುವುದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ವಿದ್ಯಾರ್ಥಿಗಳ ‘ಪಾರ್ಲಿಮೆಂಟ್ ಚಲೋ’ ಪ್ರತಿಭಟನೆಯ ವೇಳೆ ಲಾಠಿಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗ ನಡೆಸಿರುವುದನ್ನೂ ಎಸ್‌ಎಫ್‌ಐ ತೀವ್ರವಾಗಿ ಖಂಡಿಸಿತು.
ಪ್ರತಿಭಟನಾಕಾರರು ಎನ್‌ಟಿಎ ರದ್ದುಪಡಿಸುವುದು, ನೀಟ್ ಪರೀಕ್ಷೆಯನ್ನು ಬ್ಯಾನ್ ಮಾಡುವುದು, ನೀಟ್ ಹಗರಣದ ಕುರಿತು ನ್ಯಾಯಾಂಗ ತನಿಖೆ ನಡೆಸುವುದು, ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ನೀಡುವುದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವುದು ಹಾಗೂ ಕೇಂದ್ರ ಸರ್ಕಾರ ಪರೀಕ್ಷಾ ವ್ಯವಸ್ಥೆಯ ಕೇಂದ್ರೀಕರಣ ನೀತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ತಾಲೂಕು ಅಧ್ಯಕ್ಷ ನಾಗರಾಜ್ ಯು., ಉಪಾಧ್ಯಕ್ಷ ಶರೀಫ್ ಎಂ.ಪಿ., ಜಂಟಿ ಕಾರ್ಯದರ್ಶಿ ದರ್ಶನ ಹೋಸ್ಕೆರ, ವಿದ್ಯಾರ್ಥಿಗಳಾದ ಉಷಾ, ಪಾರ್ವತಿ, ನಂದಿತಾ, ಸಿಂಧೂ, ರಂಜನ್, ಸುಮಂತ, ನಂದೀಶ, ರಾಜಾಭಕ್ಷಿ ವಿನೋದ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

More Stories
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ನ್ಯಾಯಾಧೀಶ ನಾಗೇಶ ಪಾಟೀಲ್
ಉಡಮಕಲ್ ಗ್ರಾಮದಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ
ಮಾಹಿತಿ ನೀಡದ ಐವರು ಅಧಿಕಾರಿಗಳಿಗೆ ಕಲಬುರಗಿ ಮಾಹಿತಿ ಆಯೋಗದಿಂದ ₹50 ಸಾವಿರ ದಂಡ